– ಮಗು ಮೈಮೇಲೆ ಇರುವೆ ಮುತ್ತಿರೋದು ಕಂಡು ಸಾರ್ವಜನಿಕರಿಂದ ಹಿಡಿಶಾಪ
ಧಾರವಾಡ: ನಗರದ ಹೊರವಲಯದ ನವಲಗುಂದ ರಸ್ತೆಯ ಗೋವನಕೊಪ್ಪ ಗ್ರಾಮ ಬಳಿ ನವಜಾತ ಹೆಣ್ಣು ಶಿಶುವೊಂದನ್ನು ಎಸೆದು ಹೋಗಿದ್ದಾರೆ.
ಹೆಣ್ಣು ಹುಟ್ಟಿದೆ ಎಂಬ ಕಾರಣಕ್ಕೆ ಈ ಮಗುವನ್ನ ಎಸೆದು ಹೋಗಿರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದ್ದು, ಈ ಮಗು ಜನಿಸಿ ಮೂರು ದಿನಗಳು ಕಳೆದ ನಂತರ ಎಸೆದು ಹೋಗಲಾಗಿದೆ. ಇಂದು ಬೆಳಿಗ್ಗೆ ಹೊಲದಲ್ಲಿ ಬಿದ್ದಿದ್ದ ಮೃತ ನವಜಾತ ಶಿಶುವನ್ನ ನೋಡಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಗು ಮೈಮೇಲೆ ರಕ್ತ ಇರುವ ಕಾರಣ ಇರುವೆಗಳು ಮುತ್ತಿಕೊಂಡ ದೃಶ್ಯ ಮನಕಲಕುವಂತೆ ಇದ್ದವು. ಕೆಲವರು ಮಗುವಿನ ಮೈಮೇಲೆ ಇರುವೆ ಮುತ್ತಿರುವುದನ್ನ ಕಂಡು, ಈ ಮಗು ಎಸೆದು ಹೋದ ಪಾಪಿಗಳಿಗೆ ಹಿಡಿಶಾಪ ಕೂಡಾ ಹಾಕಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.