– ಕಲಬುರಗಿಯಲ್ಲಿ ರಸ್ತೆ ಬದಿ ಸಿಕ್ತು ನವಜಾತ ಶಿಶು
– ಬೆಳಗಾವಿ ದೇವಸ್ಥಾನದಲ್ಲಿ 3 ದಿನದ ಮಗು ಪತ್ತೆ
ಬಾಗಲಕೋಟೆ: ರಸ್ತೆ ಬದಿಯ ಡಸ್ಟಬಿನ್ ನಲ್ಲಿ ಆಗತಾನೇ ಜನಿಸಿರುವ ಹಸುಗೂಸಿನ ಶವವೊಂದು ಪತ್ತೆಯಾಗಿದೆ.
Advertisement
ನಗರದ ವಾಸವಿ ಥೇಟರ್ ಬಳಿ ಐಡಿಬಿಐ ಬ್ಯಾಂಕ್ ಎದುರಿನ ಡಸ್ಟ್ ಬಿನ್ ನಲ್ಲಿ ಅಪರಿಚಿತ ಹಸುಗೂಸಿನ ಶವ ಪತ್ತೆಯಾಗಿದ್ದು, ಯಾರು ಎಸೆದು ಹೋಗಿದ್ದಾರೆಂದು ಮಾಹಿತಿ ಇಲ್ಲ. ಪೋಷಕರೇ ಶನಿವಾರ ತಡರಾತ್ರಿ ಹಸುಗೂಸಿನ ಶವವನ್ನ ಡಸ್ಟ್ ಬಿನ್ ನಲ್ಲಿ ಎಸೆದು ಹೋಗಿರಬಹುದು ಎಂಬುದು ಸ್ಥಳೀಯರ ಮಾತಾಗಿದೆ.
Advertisement
Advertisement
ಶವವನ್ನ ಒಂದು ರಟ್ಟಿನ ಬಾಕ್ಸ್ ನಲ್ಲಿ ಇಟ್ಟು ಪರಾರಾರಿಯಾಗಿದ್ದಾರೆ. ಸದ್ಯ ಶವಕ್ಕೆ ಇರುವೆಗಳು ಮುತ್ತಿಕ್ಕಿಕೊಂಡಿದ್ದು, ಸ್ಥಳಕ್ಕೆ ಬಾಗಲಕೋಟೆ ಶಹರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಎರಡು ದಿನದ ಹೆಣ್ಣು ನವಜಾತ ಶಿಶುವನ್ನು ರಸ್ತೆಯ ಬದಿಯಲ್ಲಿ ಪೋಷಕರು ಬಿಟ್ಟು ಹೋಗಿರುವ ಘಟನೆ ಕಲಬುರಗಿ ನಗರದ ಕಾಳನೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮಗು ಅಳುವ ಶಬ್ದ ಕೇಳಿದ ಸ್ಥಳೀಯರು ಮಗುವಿನ ರಕ್ಷಣೆ ಮಾಡಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಸದ್ಯ ಮಗುವಿನ ಆರೋಗ್ಯ ತಪಾಸಣೆ ಮಾಡಿ ಅಮೂಲ್ಯ ಶಿಶು ಗೃಹದಲ್ಲಿ ಆಶ್ರಯ ನೀಡಲಾಗಿದೆ. ಮಗುವನ್ನು ಹೀಗೆ ರಸ್ತೆ ಬದಿ ಬಿಟ್ಟು ಹೋದ ಪೊಷಕರ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಕುರಿತು ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ರಾತ್ರಿ 3 ದಿನದ ಹೆಣ್ಣು ಮಗುವನ್ನು ದೇವಸ್ಥಾನ ದಲ್ಲಿ ಬಿಟ್ಟು ಹೋದ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿ ಅಳುತ್ತಿದ್ದ ಮಗುವನ್ನ ಕಂಡ ಸ್ಥಳೀಯರು ಮಗುವಿನ ರಕ್ಷಣೆ ಮಾಡಿದ್ದಾರೆ. ಸದ್ಯ ರಾಯಭಾಗ ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದೆ. ಮಗುವಿನ ತಾಯಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ರಾಯಭಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.