ಬೆಂಗಳೂರು: ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆಯೇ ನರ್ಸ್ ತಾನೇ ಹೆರಿಗೆ ಮಾಡಿಸಿದ ಹಿನ್ನೆಲೆಯಲ್ಲಿ ನವಜಾತ ಶಿಶು ಸಾವನ್ನಪ್ಪಿದ ಘಟನೆ ಆನೇಕಲ್ ತಾಲೂಕಿನ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಸಾವನ್ನಪ್ಪಿದೆ ಎಂದು ಪೋಷಕರು ಕಣ್ಣೀರಿಡುತ್ತಿದ್ದಾರೆ. ದಾವಣಗೆರೆಯಿಂದ ಬಂದು ವಡ್ಡರಪಾಳ್ಯದಲ್ಲಿ ನೆಲೆಸಿದ್ದ ದಂಪತಿ ಶಶಿಧರ್ ಮತ್ತು ರಂಜಿತಾ ಅವರ ಮಗು ಜೀವಕಳೆದುಕೊಂಡಿದೆ.
ಭಾನುವಾರ ಹೆರಿಗೆ ನೋವು ಕಾಣಿಸಿಕೊಂಡು ರಂಜಿತಾರನ್ನು ಪತಿ ಶಶಿಧರ್ ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದರು. ಆದರೆ ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಇರದ ಕಾರಣ ನರ್ಸ್ ಹೆರಿಗೆ ಮಾಡಿಸಿದ್ದಾರೆ. ಈ ವೇಳೆ ಮಗುವಿನ ಉಸಿರಾಟಕ್ಕೆ ತೊಂದರೆ ಆಗಿದೆ. ಕೂಡಲೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ನರ್ಸ್ ದಂಪತಿಗೆ ತಿಳಿಸಿದ್ದಾರೆ.
ಆದರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹೆರಿಗೆ ಮಾಡಿಸಿದ ಸರ್ಕಾರಿ ಆಸ್ಪತ್ರೆ ನರ್ಸ್ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಗುವಿನ ಕುಟುಂಬಸ್ಥರು ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.