– ಎಲ್ಲರೂ ದುಡ್ಡು ಗೆಲ್ಲಬೇಕು, ಎಲ್ಲರೂ ಖುಷಿಯಾಗಿರಬೇಕು
– ಅಪ್ಪು ವ್ಯಕ್ವಿತ್ವ, ಸರಳತೆಯ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಪೋಸ್ಟ್
ಬೆಂಗಳೂರು: “ಕೋಟ್ಯಧಿಪತಿ ಎಪಿಸೋಡ್ ಶೂಟ್ ಆಗುವಾಗ ಪ್ರತೀ ಪ್ರಶ್ನೆಗೂ ಕಂಟೆಸ್ಟೆಂಟುಗಳಿಗಿಂತ ಹೆಚ್ಚು ಒತ್ತಡದಲ್ಲಿ ಇರುತ್ತಿದ್ದುದು ಸ್ವತಃ ಅಪ್ಪು. ಎಲ್ಲರೂ ದುಡ್ಡು ಗೆಲ್ಲಬೇಕು, ಎಲ್ಲರೂ ಖುಷಿಯಾಗಿರಬೇಕು ಎಂದು ಪ್ರಾಮಾಣಿಕವಾಗಿ ಆಸೆಪಡುತ್ತಿದ್ದ ಒಳ್ಳೆ ಮನಸ್ಸು. ಮೂರು ಲಕ್ಷ ಇಪ್ಪತ್ತು ಸಾವಿರದ ನಂತರ ಪ್ರತಿ ಪ್ರಶ್ನೆಯೂ ಅವರನ್ನು ಸಿಕ್ಕಾಪಟ್ಟೆ ನರ್ವಸ್ ಮಾಡುತ್ತಿತ್ತು” – ಇದು ಕಲರ್ಸ್ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಅಪ್ಪು ಬಗ್ಗೆ ಬರೆದ ಸಾಲುಗಳು.
ಫೇಸ್‌ಬುಕ್‌ನಲ್ಲಿ ಪರಮೇಶ್ವರ್ ಗುಂಡ್ಕಲ್ ಅವರು ಪುನೀತ್ ಅವರ ಜೊತೆಗಿನ ಶೂಟಿಂಗ್ ಸಮಯ, ವ್ಯಕ್ವಿತ್ವ, ಸರಳತೆಯ ಬಗ್ಗೆ ಪೋಸ್ಟ್ ಮಾಡಿದ್ದು ಅದನ್ನು ಯಥಾವತ್ತಾಗಿ ನೀಡಲಾಗಿದೆ.
Advertisement
ಪೋಸ್ಟ್‌ನಲ್ಲಿ ಏನಿದೆ?
ಕೊನೆಯ ಸಲ ಮಾತಾಡಿದ್ದು ಸದಾಶಿವ ನಗರದ ಕಚೇರಿಯಲ್ಲಿ. ಆಫೀಸಿನ ಹೊರಗೆ, ಕೆಳಗಡೆ, ಮೇಲ್ಗಡೆ ಎಲ್ಲಾ ಕಡೆ ಹುಡುಗರು ಓಡಾಡ್ತಾ ಇದ್ದಿದ್ದು ನೋಡಿ ಆಶ್ಚರ್ಯವಾಗಿತ್ತು. “ಅಪ್ಪು ಸರ್, ಆಫೀಸೇನು ಇಷ್ಟು ಬ್ಯುಸಿಯಾಗಿದೆ’ ಎಂದು ಕೇಳಿದರೆ ನಕ್ಕರು. ಇದಕ್ಕಿಂತ ನಿಷ್ಕಲ್ಮಶವಾಗಿ ನಗೋದು ಸಾಧ್ಯವೇ ಇಲ್ಲ ಅನ್ನುವ ಹಾಗೆ ಇತ್ತು ಅವರ ನಗು.
Advertisement
ಮನೆಗೆ ಹೋದರೂ, ಆಫೀಸಿಗೆ ಹೋದರೂ, ಅವರ ಕಾರಾವಾನಲ್ಲಿ ಭೇಟಿಯಾದರೂ ಬಂದೇ ಬರುವ ಫಿಲ್ಟರ್ ಕಾಫೀ ಬಂತು. “ಮೂರು ಪ್ರೊಡಕ್ಷನ್ನುಗಳು ನಡೀತೀವೆ. ಅದಕ್ಕೇ ಆಫೀಸು ಇಷ್ಟು ಬ್ಯುಸಿ’ ಎಂದು ಉತ್ಸಾಹದಿಂದ ಮಾತಾಡಿದರು. ಕರ್ನಾಟಕದ ಬಗ್ಗೆ ಸುಮಾರು ದಿನಗಳಿಂದ ಅವರೊಂದು ಡಾಕ್ಯುಮೆಂಟರಿ ಮಾಡುತ್ತಿರುವುದರ ಬಗ್ಗೆ ಮಾತು ಬಂತು. ಇದನ್ನ ಥಿಯೇಟರಲ್ಲಿ ರಿಲೀಸ್ ಮಾಡಿದ್ರೆ ಹೇಗಿರುತ್ತೆ ಅಂತ ಕೇಳುತ್ತಾ ನಾಲ್ಕೈದು ನಿಮಿಷಗಳ ಕ್ಲಿಪ್ಪಿಂಗ್ ತೋರಿಸಿದರು. ರೋಮಾಂಚನ ಆಗುವಂಥ ವಿಷ್ಯುವಲ್ಲುಗಳು ಅದರಲ್ಲಿದ್ದವು. ’ಇದು ಅದ್ಭುತವಾಗಿದೆ” ಎಂದು ಹೇಳಿದಾಗ ಮತ್ತೆ ಅದೇ ನಿಷ್ಕಲ್ಮಷವಾದ ನಗು. ಹೊಗಳಿದರೆ ಸಂಕೋಚದಿಂದ ಅಪ್ಪು ಯಾವಾಗಲೂ ಮಾತು ಬದಲಾಯಿಸಿಬಿಡುತ್ತಿದ್ದರು.
Advertisement
Advertisement
ಸಣ್ಣ ಸಣ್ಣ ವಿಷಯಗಳಿಗೇ ಸಿಕ್ಕಾಪಟ್ಟೆ ಖುಷಿ ಪಡುತ್ತಿದ್ದ ದೊಡ್ಡ ಮನಸ್ಸು. ಸೆಟ್ಟಲ್ಲಿ ಅವರು ಟೆನ್ಶನ್ ಮಾಡಿಕೊಂಡಿದ್ದನ್ನು ಅಷ್ಟು ದಿನಗಳಲ್ಲಿ ಒಂದು ಸಲವೂ ನೋಡಿಲ್ಲ. ಚೆನ್ನಾಗಿ ಊಟ ಮಾಡಿ ಅಂತ ಯಾವಾಗಲೂ ಹೇಳ್ತಿದ್ರು. ಸೀಸನ್ನಲ್ಲಿ ಒಂದು ಸಲವಾದ್ರೂ ಚಿತ್ರೀಕರಣ ತಂಡದಲ್ಲಿರೋ ಎಲ್ಲರಿಗೂ ಅವರ ಕಡೆಯಿಂದ ಒಂದು ಊಟ ಬರಲೇಬೇಕು. ಎಲ್ಲರಿಗೂ ಅವರ ಕಡೆಯಿಂದ ಒಂದು ಗಿಫ್ಟ್ ಕೊಡಲೇಬೇಕು. ಇದನ್ನೆಲ್ಲಾ ಅವರು ತುಂಬಾ ಸಹಜವಾಗಿ, ಇದೊಂದು ವಿಷಯವೇ ಅಲ್ಲ ಅನ್ನುವ ಹಾಗೆ ಸದ್ದಿಲ್ಲದೇ ಮಾಡುತ್ತಿದ್ದರು. ಆಡಂಬರವೇ ಇಲ್ಲದೇ ಒಬ್ಬ ಸ್ಟಾರ್ ಹೇಗೆ ಆಗೋದಕ್ಕೆ ಸಾಧ್ಯ ಎನ್ನುವ ಪ್ರಶ್ನೆಗೆ ಉತ್ತರದ ಥರ ಇದ್ದರು ಅಪ್ಪು.
ಕೋಟ್ಯಧಿಪತಿ ಎಪಿಸೋಡ್ ಶೂಟ್ ಆಗುವಾಗ ಪ್ರತೀ ಪ್ರಶ್ನೆಗೂ ಕಂಟೆಸ್ಟೆಂಟುಗಳಿಗಿಂತ ಹೆಚ್ಚು ಒತ್ತಡದಲ್ಲಿ ಇರುತ್ತಿದ್ದುದು ಸ್ವತಃ ಅಪ್ಪು. ಎಲ್ಲರೂ ದುಡ್ಡು ಗೆಲ್ಲಬೇಕು, ಎಲ್ಲರೂ ಖುಷಿಯಾಗಿರಬೇಕು ಎಂದು ಪ್ರಾಮಾಣಿಕವಾಗಿ ಆಸೆಪಡುತ್ತಿದ್ದ ಒಳ್ಳೆ ಮನಸ್ಸು. ಮೂರು ಲಕ್ಷ ಇಪ್ಪತ್ತು ಸಾವಿರದ ನಂತರ ಪ್ರತಿ ಪ್ರಶ್ನೆಯೂ ಅವರನ್ನು ಸಿಕ್ಕಾಪಟ್ಟೆ ನರ್ವಸ್ ಮಾಡುತ್ತಿತ್ತು. ತಪ್ಪು ಉತ್ತರ ಕೊಟ್ಟಾಗ ಕಂಟೆಸ್ಟೆಂಟುಗಳಿಗಿಂತ ಹೆಚ್ಚು ನಿರಾಶೆ ಆಗುತ್ತಿದ್ದದ್ದು ಅಪ್ಪುಗೆ. ಸರಿ ಉತ್ತರ ಕೊಟ್ಟಾಗ ಅವರ ದನಿಯಲ್ಲಿ ಸಿಕ್ಕಾಪಟ್ಟೆ ಎಕ್ಸೈಟ್ಮೆಂಟ್. ಯಾರಾದ್ರೂ ಕೋಟಿ ಗೆಲ್ಲಬೇಕು ಎಂದು ಸಾವಿರ ಸಲ ಹೇಳುತ್ತಿದ್ದರು. ತಪ್ಪು ಉತ್ತರ ಕೊಟ್ಟು ಯಾರಾದರೂ ದುಡ್ಡು ಸೋತರೆ ಶೂಟಿಂಗ್ ಮುಗಿದ ಮೇಲೆ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಳ್ಳುತ್ತಿದ್ದರು. ಗೆಲ್ಲದ ಎಷ್ಟೋ ಜನರಿಗೆ ತಾವೇ ದುಡ್ಡು ಕೊಡುತ್ತಿದ್ದರು ಮತ್ತು ಅದು ಎಲ್ಲೂ ಸುದ್ದಿಯಾಗದ ಹಾಗೆ ನೋಡಿಕೊಳ್ಳುತ್ತಿದ್ದರು. ಎಲ್ಲರಿಗೂ ಸಿಕ್ಕಾಪಟ್ಟೆ ದುಡ್ಡು ಸಿಗಬೇಕು, ಯಶಸ್ಸು ಸಿಗಬೇಕು, ಎಲ್ಲರೂ ದೇಶ ಸುತ್ತಬೇಕು, ಖುಷಿಯಾಗಿರಬೇಕು ಅಂತ ಬಹಳ ಪ್ರಾಮಾಣಿಕವಾಗಿ ಆಸೆ ಪಡುತ್ತಿದ್ದ ವ್ಯಕ್ತಿ.
ಅಷ್ಟೊಂದು ದಿನಗಳಲ್ಲಿ ಒಂದು ದಿನವೂ ಅವರ ಮೂಡಾಫ್ ಆಗಿದ್ದನ್ನ ನೋಡಲಿಲ್ಲ. ಟೆನ್ಶನ್ ಮಾಡಿಕೊಂಡಿದ್ದನ್ನ ನೋಡಲಿಲ್ಲ. ಬೇರೆಯವರ ಬಗ್ಗೆ ಮಾತಾಡಿದ್ದು ಕೇಳಿಲ್ಲ. ಬೇಡದ್ದನ್ನು ಮಾತಾಡಿದ್ದು ನೆನಪಿಲ್ಲ. ಅವರನ್ನು ಹೊಗಳಿದರೆ ಮಾತು ಬೇರೆ ಟಾಪಿಕ್ಕಿಗೆ ಹೋಗುತ್ತಿತ್ತು. ಬೇರೆ ಬೇರೆ ವೆಬ್ ಸೀಸನ್ನುಗಳ ಬಗ್ಗೆ ಮಾತಾಡುತ್ತಿದ್ದರೆ ಅವರ ಕಣ್ಣುಗಳು ಹೊಳೆಯುತ್ತಿದ್ದವು. ಅವರು ನೋಡಿದ ಅದ್ಭುತವಾದ ಟೆಕ್ನಿಷಿಯನ್ನುಗಳ ಬಗ್ಗೆ, ಬೇರೆ ಬೇರೆ ದೇಶಗಳ ಜಾಗಗಳ ಬಗ್ಗೆ, ಅಲ್ಲಿ ಓಡಿಸಿದ ಸೈಕಲ್ಲುಗಳ ಬಗ್ಗೆ, ತಿಂಡಿ ಬಗ್ಗೆ ಖುಷಿಯಿಂದ ಮಾತಾಡುತ್ತಿದ್ದರೆ ಅವರಿಗೆ ಸುಸ್ತಾಗುತ್ತಲೇ ಇರಲಿಲ್ಲ.
ಇಂದು ಮಧ್ಯಾಹ್ನ ಸುದ್ದಿ ಬಂದು ಮನಸ್ಸಿಗೆ ಸಿಕ್ಕಾಪಟ್ಟೆ ಕಳವಳ ಆಗಿ ವಿಕ್ರಮ್ ಆಸ್ಪತ್ರೆಗೆ ಹೋದರೆ ಅಲ್ಲಿಯೂ ಅವರು ಅದೇ ನೆಮ್ಮದಿಯಿಂದ ಮಲಗಿದ್ದಾರೆ ಅನಿಸಿತು. ಅವರು ಮಲಗಿದ್ದನ್ನು ಯಾವತ್ತೂ ನೋಡಿರಲಿಲ್ಲ. ಯಾರಿಗೋ ಒಳ್ಳೆಯದಾಗಿದ್ದರ ಬಗ್ಗೆ ಮಾತಾಡಿದರೆ, ಯಾವುದೋ ತಿಂಡಿ ಬಗ್ಗೆ ಮಾತಾಡಿದರೆ ಎದ್ದು ಕುಳಿತುಕೊಳ್ಳುತ್ತಾರೆ ಅನಿಸಿತು. ಯಾರಾದರೂ ಕೋಟಿ ಗೆಲ್ಲಬೇಕು ಎಂದು ಆಸೆಪಟ್ಟು ಮಾತಾಡುತ್ತಾರೆ ಅನಿಸಿತು. ಇತ್ತೀಚೆಗೆ ನೋಡಿದ ಒಂದು ಒಳ್ಳೆಯ ಸಿನಿಮಾ ಅಥವಾ ಕ್ಯಾರೆಕ್ಟರ್ ಬಗ್ಗೆ ಚರ್ಚೆ ಮಾಡುತ್ತಾರೆ ಅಂತ ಅನಿಸಿತು. ಇತ್ತೀಚೆಗೆ ಭೇಟಿಯಾದ ಒಳ್ಳೆಯ ಬರಹಗಾರ ಅಥವಾ ಕೇಳಿದ ಸ್ಕ್ರಿಪ್ಟ್ ಬಗ್ಗೆ ಮಾತಾಡುತ್ತಾರೆ ಎಂದು ಸುಮಾರು ನಿಮಿಷ ಕಾದೆ.
ಮಲಗಿದ್ದ ಅವರು ಏಳಲಿಲ್ಲ
ಹೊರಗೆ ಅವರ ಸ್ಟಾಫ್ ಬಿಕ್ಕಿಬಿಕ್ಕಿ ಅಳುತ್ತಿರುವುದು ನೋಡಿದಾಗ ಸಂಕಟವಾಯಿತು. ಕರುಳು ಕಿವುಚುವಂತೆ ಸದ್ದು ಮಾಡುತ್ತಾ ಮಿಲ್ಲರ್ಸ್ ರಸ್ತೆಯಲ್ಲಿ ಇವತ್ತು ಹೊರಟ ಆಂಬುಲೆನ್ಸ್ ನೋಡಿದಾಗ ಅದೇ ರಸ್ತೆಯಲ್ಲಿ ಸ್ವತಃ ಅವರೇ ಡ್ರೈವ್ ಮಾಡಿಕೊಂಡು ಬಂದು ನಮ್ಮ ಆಫೀಸಿನ ಮುಂದೆ ಕಾರು ನಿಲ್ಲಿಸಿದ್ದು, ಕೇಳಿದವರಿಗೆಲ್ಲಾ ಸಿಟ್ಟು ಮಾಡಿಕೊಳ್ಳದೇ ಫೋಟೋ ಕೊಟ್ಟಿದ್ದು, ಲಿಫ್ಟಲ್ಲಿ ಸಿಕ್ಕವರ ಕಷ್ಟ ಸುಖ ಕೇಳಿದ್ದು, ಆಫೀಸಿನಲ್ಲಿ ಸಣ್ಣ ಹುಡುಗನ ಬೇಡಿಕೆಗೂ ಸ್ಪಂದಿಸಿದ್ದೆಲ್ಲಾ ನೆನಪಾಗಿ ದೇವರ ಮೇಲೆ ಸಿಟ್ಟು ಬಂತು.
ತಿರುಪತಿ ಬೆಟ್ಟವನ್ನು ಕೇವಲ 98 ನಿಮಿಷದಲ್ಲಿ ಹತ್ತಿದ್ದರ ಬಗ್ಗೆ ಸಂಭ್ರಮದಿಂದ ಮಾತಾಡುತ್ತಾ ಮುಂದಿನ ಸಲ ಹೋಗುವಾಗ ಖಂಡಿತಾ ಕಾಲ್ ಮಾಡುತ್ತೇನೆ ಎಂದಿದ್ದು ನೆನಪಾಯಿತು. ಪ್ರತಿಕ್ಷಣವನ್ನೂ ಇವರು ಹೇಗೆ ಇಷ್ಟು ಪ್ರೀತಿಯಿಂದ ಬದುಕುತ್ತಾರೆ ಎನ್ನುವುದು ಅಪ್ಪುವನ್ನು ನೋಡಿದ ಎಲ್ಲರಿಗೂ ಕಾಡಿರಬಹುದಾದ ಪ್ರಶ್ನೆ. ಬೇಗ ಹೋಗಬೇಕು ಎಂದು ಗೊತ್ತಿದ್ದರಿಂದಲೇ ಅವರು ಇದ್ದಷ್ಟು ದಿನವನ್ನು ಇಷ್ಟು ಜೀವನಪ್ರೀತಿಯ ಜೊತೆ ಬದುಕಿದರಾ? ಇನ್ನೊಂದಿಷ್ಟು ನಿಮಿಷಗಳು ಇದ್ದಿದ್ದರೆ ಏನೂ ಆಗುತ್ತಿರಲಿಲ್ಲ. ಮೇಲೆ ಹೋಗಲು ಅಷ್ಟೊಂದು ಅವಸರ ಬೇಕಾಗಿರಲಿಲ್ಲ. ಮತ್ತೆ ಬನ್ನಿ!