ನವದೆಹಲಿ: ಲಡಾಖ್ (Ladakh) ಬಳಿಯ ಅಕ್ಸಯ್ ಚೀನಾದ ಪ್ರದೇಶದಲ್ಲಿ ಚೀನಾ (China) ಎರಡು ಹೊಸ ಹಳ್ಳಿಗಳನ್ನು ಸ್ಥಾಪಿಸಿರುವ ಬಗ್ಗೆ ಭಾರತ (India) ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಳ್ಳಿಗಳನ್ನು ಭಾಗಶಃ ಪ್ರದೇಶಗಳು ಭಾರತದ ಭೂಭಾಗದಲ್ಲಿ ಬರುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಚೀನಾದ ಈ ಕ್ರಮವನ್ನು ಅಕ್ರಮ ಆಕ್ರಮಣ ಎಂದು ಕರೆದಿರುವ ಭಾರತ, ರಾಜತಾಂತ್ರಿಕ ಮಾರ್ಗಗಳ ಮೂಲಕ ತನ್ನ ಪ್ರತಿಭಟನೆಯನ್ನು ಚೀನಾಕ್ಕೆ ತಿಳಿಸಿದೆ.
ಲೋಕಸಭೆಯಲ್ಲಿ (Loksabha) ನಡೆದ ಪ್ರಶ್ನೋತ್ತರ ವೇಳೆಯಲ್ಲಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ (Keerti Vardhan Singh) ಈ ವಿಷಯವನ್ನು ಉಲ್ಲೇಖಿಸಿದರು. ಚೀನಾದ ಹೊಟಾನ್ ಪ್ರಿಫೆಕ್ಚರ್‌ನಲ್ಲಿ ಎರಡು ಹೊಸ ಹಳ್ಳಿಗಳನ್ನು ಸ್ಥಾಪಿಸಲಾಗಿದೆ ಎಂದು ಚೀನಾ ಘೋಷಿಸಿದೆ. ಈ ಕೌಂಟಿಗಳ ಭಾಗಗಳು ಭಾರತದ ಲಡಾಖ್ ಒಕ್ಕೂಟ ಪ್ರದೇಶದ ಗಡಿಗಳಲ್ಲಿ ಬರುತ್ತವೆ ಎಂದು ಸಿಂಗ್ ತಿಳಿಸಿದರು.
“ಭಾರತವು ಚೀನಾದ ಅಕ್ರಮ ಆಕ್ರಮಣವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಈ ಹೊಸ ಹಳ್ಳಿಗಳ ಸೃಷ್ಟಿಯು ಭಾರತದ ಸಾರ್ವಭೌಮತೆಯ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಚೀನಾದ ಆಕ್ರಮಣಕ್ಕೆ ಕಾನೂನು ಮಾನ್ಯತೆ ಒದಗಿಸುವುದಿಲ್ಲ” ಎಂದು ಅವರು ಲಿಖಿತ ಉತ್ತರದಲ್ಲಿ ಹೇಳಿದ್ದಾರೆ. ಈ ಬೆಳವಣಿಗೆಯ ಬಗ್ಗೆ ಭಾರತವು ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆಗಳ ಮೂಲಕ ತನ್ನ ಅಸಮ್ಮತಿಯನ್ನು ದಾಖಲಿಸಿದೆ. “ನಾವು ಈ ಘಟನೆಗಳ ವಿರುದ್ಧ ಗಂಭೀರ ಪ್ರತಿಭಟನೆಯನ್ನು ದಾಖಲಿಸಿದ್ದೇವೆ” ಎಂದು ಸಚಿವ ಸಿಂಗ್ ತಿಳಿಸಿದರು.
ಚೀನಾದ ಈ ಘೋಷಣೆಯ ಬಗ್ಗೆ ಭಾರತ ಸರ್ಕಾರಕ್ಕೆ ಮಾಹಿತಿ ಇದ್ದು, ಈ ಹಳ್ಳಿಗಳನ್ನು ಭಾಗಶಃ ಪ್ರದೇಶಗಳು ಲಡಾಖ್‌ನಲ್ಲಿ ಬರುತ್ತವೆ ಎಂದು ಅವರು ದೃಢಪಡಿಸಿದರು. ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ಸರ್ಕಾರ ಗಮನ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.
“ಗಡಿ ಪ್ರದೇಶಗಳ ಆರ್ಥಿಕ ಅಭಿವೃದ್ಧಿಗೆ ಮತ್ತು ಭಾರತದ ಭದ್ರತಾ ಅಗತ್ಯಗಳನ್ನು ಪೂರೈಸಲು ಮೂಲಸೌಕರ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಅವರು ಹೇಳಿದರು. 2014ರಿಂದ 2024ರವರೆಗೆ ಗಡಿ ಮೂಲಸೌಕರ್ಯಕ್ಕಾಗಿ ಬಜೆಟ್ ಹಂಚಿಕೆಯನ್ನು ಹೆಚ್ಚಿಸಲಾಗಿದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ತನ್ನ ವೆಚ್ಚವನ್ನು ಮೂರು ಪಟ್ಟು ಹೆಚ್ಚಿಸಿದೆ. ರಸ್ತೆಗಳು, ಸೇತುವೆಗಳು ಮತ್ತು ಸುರಂಗಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಸಿಂಗ್ ತಿಳಿಸಿದರು. ಇದನ್ನೂ ಓದಿ: ಕಂತೆ ಕಂತೆ ನೋಟು ಪತ್ತೆಯಾದ ಜಡ್ಜ್ ಮೇಲೆ ದಾಖಲಾಗಿತ್ತು ಸಿಬಿಐ ಎಫ್‌ಐಆರ್
ಅಕ್ಸಯ್ ಚೀನ್ ಏಲ್ಲಿದೆ?
ಸ್ವಾತಂತ್ರ್ಯ ಗಳಿಸಿದ ನಂತರ ಭಾರತ ಮತ್ತು ಚೀನಾದ ಸಂಬಂಧ ಚೆನ್ನಾಗಿತ್ತು. ಆದರೆ ಕುತಂತ್ರಿ ಚೀನಾ ಭಾರತಕ್ಕೆ ಹಿಂದುಗಡೆಯಿಂದ ಚೂರಿ ಹಾಕಿತ್ತು. 1950 ರ ದಶಕದಲ್ಲಿ ಚೀನಾ ಟಿಬೆಟ್ ಸಂಪರ್ಕಿಸುವ ಸಲುವಾಗಿ ಅಕ್ಸಯ್ ಚೀನ್ ಪ್ರದೇಶದ ಮೂಲಕ ಮಿಲಿಟರಿ ರಸ್ತೆಯ ನಿರ್ಮಾಣಕ್ಕೆ ಕೈಹಾಕಿತ್ತು.
ಚೀನಾದವರು ರಸ್ತೆ ನಿರ್ಮಿಸುವಾಗ ಭಾರತದ ಸೈನಿಕರು ಅಲ್ಲಿ ಗಸ್ತು ಕಾಯುತ್ತಿರಲಿಲ್ಲವೇ ಎಂಬ ಪ್ರಶ್ನೆ ಏಳುವುದು ಸಹಜ. ಈ ಸಂದರ್ಭದಲ್ಲಿ ಸೈನಿಕರು ಅಲ್ಲಿ ಗಸ್ತು ತಿರುಗುತ್ತಿರಲಿಲ್ಲ. ಯಾಕೆಂದರೆ ಇದು ಸಮುದ್ರ ಮಟ್ಟದಿಂದ ಸುಮಾರು 5,000 ಮೀಟರ್ ಎತ್ತರದಲ್ಲಿದೆ. ಇಲ್ಲಿ ಜನವಸತಿ ಇಲ್ಲದ ಕಾರಣ ಅಲ್ಲಿ ಏನಾಗುತ್ತಿದೆ ಎನ್ನುವುದು ಅಷ್ಟು ಸುಲಭವಾಗಿ ತಿಳಿಯುತ್ತಿರಲಿಲ್ಲ. 1958ರಲ್ಲಿ 1,200 ಕಿಲೋಮೀಟರ್ ಉದ್ದದ ರಸ್ತೆಯನ್ನು ಚೀನಾ ನಿರ್ಮಾಣ ಮಾಡಿತ್ತು.
1958ರಲ್ಲಿ ಈ ವಿಚಾರ ತಿಳಿಯುತ್ತಿದ್ದಂತೆ ಭಾರತ ಬಲವಾಗಿ ಚೀನಾ ನಡೆಯನ್ನು ವಿರೋಧಿಸಿತ್ತು. ಯಾವುದೇ ಯುದ್ಧ ಮಾಡದೇ ಭಾರತದ 38,000 ಚದರ ಕಿ.ಮೀ ಜಾಗವನ್ನು ಚೀನಾ ಆಕ್ರಮಿಸಿಕೊಂಡಿತ್ತು. ಈ 38,000 ಚದರ ಕಿ.ಮೀ ಜಾಗವೇ ಈಗಿನ ಅಕ್ಷಯ್ ಚೀನ್. ಇದನ್ನು ಚೀನಾ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ.