ಕಠ್ಮಂಡು: ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಪಾಳದ ಹಂಗಾಮಿ ಪ್ರಧಾನಿಯಾಗಲಿದ್ದಾರೆ. ರಾತ್ರಿ 9 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಜನರಲ್-ಝಡ್ ಪ್ರತಿಭಟನಾಕಾರರು, ಅಧ್ಯಕ್ಷ ರಾಮಚಂದ್ರ ಪೌಡೆಲ್ ಮತ್ತು ಸೇನಾ ಮುಖ್ಯಸ್ಥ ಅಶೋಕ್ ರಾಜ್ ಸಿಗ್ಡೆಲ್ ನಡುವಿನ ಒಮ್ಮತದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
ಉಸ್ತುವಾರಿ ಸರ್ಕಾರದಲ್ಲಿ ಕರ್ಕಿ ಅವರ ಸಂಪುಟ ಚಿಕ್ಕದಾಗಿರಲಿದೆ. ಮೊದಲ ಸಭೆ ಶುಕ್ರವಾರ ರಾತ್ರಿಯೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸಂಪುಟವು ಫೆಡರಲ್ ಸಂಸತ್ತಿನ ಜೊತೆಗೆ ಏಳು ಪ್ರಾಂತೀಯ ಸಂಸತ್ತುಗಳನ್ನು ವಿಸರ್ಜಿಸಲು ಶಿಫಾರಸು ಮಾಡುವ ಸಾಧ್ಯತೆಯಿದೆ.
ಸಾಮಾಜಿಕ ಜಾಲತಾಣಗಳ ನಿಷೇಧ ಮತ್ತು ಭ್ರಷ್ಟಾಚಾರದ ವಿರುದ್ಧ ನೇಪಾಳ ಜನತೆ ಸಿಡಿದೆದ್ದು ಭಾರೀ ಪ್ರತಿಭಟನೆ ನಡೆಸಿದ್ದರು. ಸರ್ಕಾರಿ ಕಚೇರಿಗಳು, ಸಂಸತ್ ಭವನಕ್ಕೆ ನುಗ್ಗಿ ಧ್ವಂಸಗೊಳಿಸಿದರು. ಸಚಿವರನ್ನು ಹಿಡಿದು ಥಳಿಸಿದರು. ಪ್ರತಿಭಟನೆ ತೀವ್ರತೆ ಅರಿತು ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದರು. ಈಗ ನೇಪಾಳ ಹಿಂಸಾಚಾರವನ್ನು ಸೇನೆ ನಿಯಂತ್ರಣಕ್ಕೆ ತಂದಿದೆ.
ಮುಂದಿನ ಚುನಾವಣೆ ವರೆಗೆ ಉಸ್ತುವಾರಿ ಸರ್ಕಾರವನ್ನು ಮುನ್ನಡೆಸಲು ಕಾರ್ಕಿ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚನೆ ಬಗ್ಗೆ ಚರ್ಚೆ ನಡೆದಿತ್ತು. ಕಠ್ಮಂಡು ಮೇಯರ್ ಬಾಲೇಂದ್ರ ಶಾ ಹೆಸರು ಕೂಡ ಕೇಳಿಬಂದಿತ್ತು. ಆದರೆ, ಬಾಲೇಂದ್ರ ಅವರು ಹಂಗಾಮಿ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳಲು ಉತ್ಸುಕರಾಗಿರಲಿಲ್ಲ. ಕರ್ಕಿ ಅವರ ಹೆಸರಿಗೆ ತಮ್ಮ ಬೆಂಬಲ ನೀಡಿದ್ದರು.