ನೇಪಾಳದಲ್ಲಿ ಸಲಿಂಗ ವಿವಾಹವಾದ ಮೊದಲ ಜೋಡಿ

Public TV
2 Min Read
same sex marriage nepal

– ಸಲಿಂಗ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿದ ದಕ್ಷಿಣ ಏಷ್ಯಾದ ಮೊದಲ ದೇಶ ನೇಪಾಳ

ಕಠ್ಮಂಡು: ನೇಪಾಳದ (Nepal) ಸುಪ್ರೀಂ ಕೋರ್ಟ್‌ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದ 5 ತಿಂಗಳ ನಂತರ ದೇಶದಲ್ಲಿ ಸಲಿಂಗ ವಿವಾಹದ ಮೊದಲ ನೋಂದಣಿಯಾಗಿದೆ. ಆ ಮೂಲಕ ದಕ್ಷಿಣ ಏಷ್ಯಾದಲ್ಲೇ ಸಲಿಂಗ ವಿವಾಹವನ್ನು ನೋಂದಾಯಿಸಿದ ಮೊದಲ ದೇಶವಾಗಿ ನೇಪಾಳ ಹೊರಹೊಮ್ಮಿದೆ.

ಲಿಂಗ ಪರಿವರ್ತಿತ ಮಹಿಳೆ ಮಾಯಾ ಗುರುಂಗ್ (35) ಮತ್ತು ಸುರೇಂದ್ರ ಪಾಂಡೆ (27) ಕಾನೂನುಬದ್ಧವಾಗಿ ವಿವಾಹವಾದರು. ಅವರ ವಿವಾಹವನ್ನು ಪಶ್ಚಿಮ ನೇಪಾಳದ ಲಾಮ್‌ಜಂಗ್ ಜಿಲ್ಲೆಯ ಡೋರ್ಡಿ ಗ್ರಾಮೀಣ ಪುರಸಭೆಯಲ್ಲಿ ನೋಂದಾಯಿಸಲಾಗಿದೆ ಎಂದು ಬ್ಲೂ ಡೈಮಂಡ್ ಸೊಸೈಟಿಯ ಅಧ್ಯಕ್ಷ ಸಂಜಿಬ್ ಗುರುಂಗ್ (ಪಿಂಕಿ) ತಿಳಿಸಿದ್ದಾರೆ. ಬ್ಲೂ ಡೈಮಂಡ್‌ ಸೊಸೈಟಿಯು ನೇಪಾಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಯಾಗಿದೆ. ಇದನ್ನೂ ಓದಿ: ಇಸ್ರೇಲ್‌ ವೈಮಾನಿಕ ದಾಳಿಗೆ 10 ತಿಂಗಳ ಮಗು ಬಲಿಯಾಗಿದೆ: ಹಮಾಸ್‌ ಆರೋಪ

same sex marriage nepal 1

2007 ರಲ್ಲಿ ನೇಪಾಳದ ಸುಪ್ರೀಂ ಕೋರ್ಟ್ ಸಲಿಂಗ ವಿವಾಹಕ್ಕೆ (Same Sex Marriage) ಅನುಮತಿ ನೀಡಿತ್ತು. 2015 ರಲ್ಲಿ ಅಂಗೀಕರಿಸಲ್ಪಟ್ಟ ನೇಪಾಳದ ಸಂವಿಧಾನವು ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಯಾವುದೇ ತಾರತಮ್ಯ ಇರುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ.

2023, ಜೂನ್ 27 ರಂದು ಗುರುಂಗ್ ಸೇರಿದಂತೆ ಅನೇಕ ಜನರು ಸಲ್ಲಿಸಿದ ರಿಟ್ ಅರ್ಜಿಯಲ್ಲಿ ನೇಪಾಳದಲ್ಲಿ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿತು. ಆದರೆ ಸಲಿಂಗ ವಿವಾಹವನ್ನು ತಾತ್ಕಾಲಿಕವಾಗಿ ನೋಂದಾಯಿಸುವ ಐತಿಹಾಸಿಕ ಆದೇಶದ ಹೊರತಾಗಿಯೂ, ನಾಲ್ಕು ತಿಂಗಳ ಹಿಂದೆ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಅಗತ್ಯ ಕಾನೂನುಗಳ ಕೊರತೆಯನ್ನು ಉಲ್ಲೇಖಿಸಿ ಈ ಕ್ರಮವನ್ನು ತಿರಸ್ಕರಿಸಿತು. ಇದನ್ನೂ ಓದಿ: ಜಪಾನ್ ಕರಾವಳಿ ತೀರದಲ್ಲಿ ಅಮೆರಿಕ ಸೇನಾ ವಿಮಾನ ಪತನ – 8 ಸಿಬ್ಬಂದಿ ದುರ್ಮರಣ

ಆ ಸಮಯದಲ್ಲಿ ಸುರೇಂದ್ರ ಪಾಂಡೆ ಮತ್ತು ಮಾಯಾ ಅವರ ವಿವಾಹದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಈಗ ವಿವಾಹವನ್ನು ನೋಂದಣಿ ಮಾಡಲಾಗಿದೆ. ಈ ಕುರಿತು ಪಿಂಕಿ ಸೊಸೈಟಿ ಪ್ರತಿಕ್ರಿಯಿಸಿ, ವಿಚಾರ ತಿಳಿದು ತುಂಬಾ ಸಂತೋಷವಾಗಿದೆ. ಇದು ನೇಪಾಳದ ಮೂರನೇ ಲಿಂಗ ಸಮುದಾಯವಾದ ನಮಗೆ ಉತ್ತಮ ಸಾಧನೆಯಾಗಿದೆ. ಇದು ನೇಪಾಳಕ್ಕೆ ಮಾತ್ರವಲ್ಲದೆ ಇಡೀ ದಕ್ಷಿಣ ಏಷ್ಯಾದಲ್ಲಿ ಮೊದಲ ಪ್ರಕರಣವಾಗಿದೆ. ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದೆ.

ಕುಟುಂಬದ ಒಪ್ಪಿಗೆಯೊಂದಿಗೆ ಸಾಂಪ್ರದಾಯಿಕ ರೀತಿಯಲ್ಲಿ ವಿವಾಹವಾದ ನವಲಪರಸಿ ಜಿಲ್ಲೆಯ ನಿವಾಸಿ ಸುರೇಂದ್ರ ಮತ್ತು ಲಾಮ್‌ಜಂಗ್ ಜಿಲ್ಲೆಯ ಮಾಯಾ ಅವರು ಕಳೆದ ಆರು ವರ್ಷಗಳಿಂದ ಪತಿ-ಪತ್ನಿಯಾಗಿ ಒಟ್ಟಿಗೆ ವಾಸಿಸುತ್ತಿದ್ದಾರೆ.

Share This Article