ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮತ್ತೆ ಸೂಪರ್ ಸಿಎಂ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಮೋಹನ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ಸಚಿವ ರೇವಣ್ಣ ಅವರು ತಡೆಯಾಜ್ಞೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.
Advertisement
ಏನಿದು ಪ್ರಕರಣ?:
ಯಂಟಗಾನಹಳ್ಳಿ ಗ್ರಾಮ ಪಿಡಿಓ ಮೋಹನ್ ಕುಮಾರ್ ವಿರುದ್ಧ ಕರ್ತವ್ಯಲೋಪ ಹಾಗೂ ಸರ್ವಾಧಿಕಾರಿ ಧೋರಣೆ ಆರೋಪ ಕೇಳಿಬಂದಿತ್ತು. ಈ ಸಂಬಂಧ ಗ್ರಾಮ ಪಂಚಾಯತಿ ಸದಸ್ಯರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದೂರು ನೀಡಿ, ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಎಂ ಕುಮಾರಸ್ವಾಮಿ ಅವರು ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದರು. ಆದರೆ ಮೋಹನ್ ಕುಮಾರ್ ಸಚಿವ ರೇವಣ್ಣ ಅವರ ಸಹಾಯ ಪಡೆದು ವರ್ಗಾವಣೆಗೆ ತಡೆ ತಂದಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಆರೋಪಿಸಿದ್ದಾರೆ.
Advertisement
Advertisement
ಮೋಹನ್ ಕುಮಾರ್ ಅವರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ನಾವು ಕರೆ ಮಾಡಿದರೆ ಫೋನ್ ಅಟೆಂಡ್ ಮಾಡಲ್ಲ. ಸಾಮಾನ್ಯ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿಗೆ ತರುವುದಿಲ್ಲ. ನಮಗೆ ಇಷ್ಟ ಬಂದ ನಿರ್ಣಯಗಳನ್ನು ಮಾತ್ರ ಜಾರಿಗೆ ತರುತ್ತಾರೆ. ಹೀಗೆ ಏಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರೆ ಯಾವುದೇ ಪ್ರಕ್ರಿಯೆ ನೀಡುವುದಿಲ್ಲ ಎಂದು ಸದಸ್ಯರು ದೂರಿದರು.
Advertisement
ಮೋಹನ್ ಕುಮಾರ್ ವರ್ಗಾವಣೆಗೆ ತಡೆ ಬಿದ್ದಿದ್ದರಿಂದ ಯಂಟಗಾನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರು, ಪಂಚಾಯತಿಯ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಸಚಿವ ರೇವಣ್ಣ ವಿರುದ್ಧ ಆಕ್ರೋಶ ಹೊರಹಾಕಿ, ಮೋಹನ್ ಕುಮಾರ್ ಅವರನ್ನು ವರ್ಗಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಪ್ರತಿಭಟಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv