ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದು ಕಾರಿನ ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಆದರೆ ವಿಪರ್ಯಾಸವೆಂದರೆ ಘಟನಾ ಸ್ಥಳದ ಮುಂದೆಯೇ ಕಾರಿನಲ್ಲಿ ತೆರಳಿದ ಅಡಿಷನಲ್ ಎಸ್‍ಪಿ ಮಾತ್ರ ಕಾರಿನಿಂದ ಕೆಳಗಿಳಿಯದೆ, ಘಟನೆ ಬಗ್ಗೆ ವಿಚಾರಿಸದೆ ಬೇಜವಾಬ್ದಾರಿ ಮೆರೆದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಬಳಿ ಈ ಘಟನೆ ನಡೆದಿದೆ. ಗಾಯಗೊಂಡ ಕಾರಿನ ಚಾಲಕ ರಾಜಾನುಕುಂಟೆ ನಿವಾಸಿ ಆನಂದ್ ಎಂದು ಗುರುತಿಸಲಾಗಿದೆ. ಮೈಲನಹಳ್ಳಿ ಬಳಿ ಆನಂದ್ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ರಸ್ತೆ ಪಕ್ಕದಲ್ಲಿದ್ದ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಆನಂದ್ ತಲೆಗೆ ಹಾಗೂ ಕೈಕಾಲಿಗೆ ಗಂಭೀರ ಗಾಯವಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಆನಂದ್‍ನನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಚಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.
Advertisement
Advertisement
ಘಟನೆ ನಡೆದ ವೇಳೆಯೇ ಅಡಿಷನಲ್ ಎಸ್‍ಪಿ ಅವರು ಇದೇ ಮಾರ್ಗದಲ್ಲಿ ತೆರೆಳುತ್ತಿದ್ದರು. ಆದರೆ ಘಟನೆಯನ್ನು ಗಮನಿಸಿದರೂ ಕೂಡ ಬಂದು ಘಟನೆ ಬಗ್ಗೆ ಕೇಳದೆ, ಗಾಯಾಳು ಬಗ್ಗೆ ವಿಚಾರಿಸದೆ ತಮ್ಮ ಪಾಡಿಗೆ ತಾವು ಹೋದರು. ಇದನ್ನು ಕಂಡು ಸ್ಥಳೀಯರು ಅಧಿಕಾರಿ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಜೊತೆಗೆ ಘಟನೆ ಬಳಿಕ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.