ನವದೆಹಲಿ: ಕೇಂದ್ರ ಸರ್ಕಾರದಿಂದ ಹೆಸರುಗಳ ಮರುನಾಮಕರಣ ರಾಜಕೀಯ ಮುಂದುವರಿದಿದ್ದು, ಈ ಸಂಬಂಧ ಕಾಂಗ್ರೆಸ್ ಗರಂ ಆಗಿದೆ.
ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ (ಎನ್‍ಎಂಎಂಎಲ್) ವಿಶೇಷ ಸಭೆಯಲ್ಲಿ ಅದರ ಹೆಸರನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಶುಕ್ರವಾರ ತಿಳಿಸಿದೆ. ದೆಹಲಿಯ ನೆಹರೂ ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿ (Nehru Memorial Museum & Library) ಹೆಸರನ್ನು ಪ್ರಧಾನಮಂತ್ರಿ ಮ್ಯೂಸಿಯಂ ಅಂಡ್ ಸೊಸೈಟಿ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದೆ. ಈ ಸೊಸೈಟಿಗೆ ಪ್ರಧಾನಿ ಮೋದಿ (Narendra Modi) ಅಧ್ಯಕ್ಷರಾಗಿದ್ದಾರೆ.
ಈ ಸಂಬಂಧ ಸಭೆಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ (Rajnath Singh) ಮಾತನಾಡಿ, ಹೆಸರಿನ ಬದಲಾವಣೆಯ ಪ್ರಸ್ತಾಪವನ್ನು ಸ್ವಾಗತಿಸಿದರು. ಪ್ರಧಾನ ಮಂತ್ರಿಗಳು ಒಂದು ಸಂಸ್ಥೆ ಇದ್ದ ಹಾಗೆ, ಕಾಮನಬಿಲ್ಲಿನ ಎಲ್ಲಾ ಬಣ್ಣಗಳನ್ನು ಸುಂದರವಾಗಿಸಲು ಪ್ರಮಾಣಾನುಗುಣವಾಗಿ ಪ್ರತಿನಿಧಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಕುಶಾಲನಗರದಲ್ಲಿ ದ್ವಿಚಕ್ರ ವಾಹನಗಳ ಡಿಕ್ಕಿ ವಿದ್ಯಾರ್ಥಿನಿ ಸಾವು
ಇತ್ತ ಈ ಬೆಳವಣಿಗೆ ಬಗ್ಗೆ ಸಹಜವಾಗಿಯೇ ಕಾಂಗ್ರೆಸ್ (Congress) ಗರಂ ಆಗಿದೆ. ಸಣ್ಣತನ, ಸೇಡಿನ ಪ್ರತಿರೂಪವೇ ನರೇಂದ್ರ ಮೋದಿ. ಕಳೆದ 59 ವರ್ಷದಿಂದ ಎನ್‍ಎಂಎಂಎಲ್ ಜಾಗತಿಕ ಮಟ್ಟದಲ್ಲಿ ಬೌದ್ಧಿಕತೆಯ ಹೆಗ್ಗುರುತಾಗಿದೆ. ನವಭಾರತದ ನಿರ್ಮಾತೃ ನೆಹರೂ ಹೆಸರಿಗೆ, ಹೆಗ್ಗಳಿಕೆಗೆ ಧಕ್ಕೆ ತರಲು ಮೋದಿ ಎಲ್ಲವನ್ನು ಮಾಡ್ತಾರೆ. ಸ್ವಯಂಘೋಷಿತ ವಿಶ್ವಗುರು ಅಭದ್ರತೆ ಭಾವದಲ್ಲಿ ಕುಗ್ಗಿಹೋಗುತ್ತಿರುವ ಸೂಕ್ಷ್ಮಜೀವಿ. ಅದಕ್ಕೆ ಹೀಗೆಲ್ಲಾ ಮಾಡ್ತಿದ್ದಾರೆ ಎಂದು ಜೈರಾಮ್ ರಮೇಶ್ (Jairam Ramesh) ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.