ಮಗನನ್ನು ಸೈನಿಕನನ್ನಾಗಿ ಮಾಡಬೇಕೆಂಬ ಕನಸು ಕಂಡಿದ್ದೆ: ಆರೋಪಿ ಫಯಾಜ್‌ ತಂದೆ

Public TV
4 Min Read
FAYAZ FATHER

– ನೇಹಾ ಜೊತೆ ಮದುವೆ ಬೇಡವೆಂದು ಕೈ ಮುಗಿದಿದ್ದೆ
– ಹಣಕ್ಕಾಗಿ ಮಾತ್ರ ಫಯಾಜ್ ಕಾಲ್‌ ಮಾಡ್ತಿದ್ದ
– ಮುನವಳ್ಳಿ ಜನತೆ ನನ್ನ ಪಾಲಿನ ದೇವರು‌

ಬೆಳಗಾವಿ: ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath Murder Case) ಕೊಲೆ ಪ್ರಕರಣ ಸಂಬಂಧ ಆರೋಪಿ ಫಯಾಜ್‌ (Accused Fayaz) ತಂದೆ ಬಾಬಾ ಸಾಹೇಬ್‌ ಸುಬಾನಿಯವರು ಕಣ್ಣೀರು ಹಾಕುತ್ತಲೇ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ್ದಾರೆ.

Student

ನನ್ನ ಮಗನನ್ನು ಸೈನಿಕನಾಗಿ ನೋಡುವ ಆಸೆ ನನ್ನದಾಗಿತ್ತು. ಆದರೆ ಇಂದು ಆತ ಕ್ಷಮಿಸಲಾರದ ತಪ್ಪು ಮಾಡಿದ್ದಾನೆ. ಅವನಿಗೆ ಯಾವ ಶಿಕ್ಷೆ ಕೊಟ್ಟರೂ ಸ್ವೀಕರಿಸುತ್ತೇನೆ. ಮುಂದೆ ಯಾವ ಹೆಣ್ಮಕ್ಕಳ ಮೇಲೆ ಯಾರೂ ಕೈ ಮಾಡಬಾರದು. ಇವನಿಗೆ ಕೊಡುವ ಶಿಕ್ಷೆಯಿಂದ ಅಂತಹ ಭಯ ಜನರಲ್ಲಿ ಮೂಡಬೇಕು. ಆ ರೀತಿಯ ಶಿಕ್ಷೆಯನ್ನು ನೀಡಲಿ ಎಂದು ಹೇಳುತ್ತಾ ನೇಹಾ ತಂದೆ ಹಾಗೂ ರಾಜ್ಯದ ಜನರ ಬಳಿ ಕ್ಷಮೆಯಾಚಿಸಿದ್ದಾರೆ.

ಪಬ್ಲಿಕ್‌ ಟಿವಿಗೆ ಹೇಳಿದ್ದೇನು..?: 8 ತಿಂಗಳ ಹಿಂದೆ ನೇಹಾ ಅವರ ತಂದೆ ಕರೆ ಮಾಡಿ, ಸರ್‌ ನಿಮ್ಮ ಮಗನಿಂದ ನಮ್ಮ ಮಗಳಿಗೆ ತೊಂದರೆ ಇದೆ. ದಯವಿಟ್ಟು ನಿಮ್ಮ ಮಗನಿಗೆ ಬುದ್ಧಿ ಹೇಳಿ ಎಂದಿದ್ದರು. ಈ ಕಾರಣಕ್ಕಾಗಿ ನಾನು ಅವನನ್ನು ಬೆಳಗಾವಿಗೆ ಕರೆದುಕೊಂಡು ಬಂದು ಇಲ್ಲಿ ಇಟ್ಟುಕೊಂಡಿದ್ದೆ. ಆದರೆ ಕಳೆದ 2 ವರ್ಷದಿಂದ ಆತ ನನ್ನ ಜೊತೆಗೆ ಇರಲಿಲ್ಲ. ಬದಲಾಗಿ ತಾಯಿ ಜೊತೆ ಇದ್ದ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಳ್ಳುತ್ತಾ ಇದ್ದೆ. ಈ ಘಟನೆ ನಡೆದು 6 ಗಂಟೆಗೆ ನನಗೆ ಗೊತ್ತಾಯಿತು. ಅಲ್ಲಿವರೆಗೆ ನನನಗೆ ಏನೂ ಗೊತ್ತಿಲ್ಲ ಎಂದರು.

FAYAZ FATHER.png 1

ಇನ್ನೊಂದು ಸಲ ಯಾವ ಹೆಣ್ಮಕ್ಕಳಿಗೂ ತೊಂದರೆ ಕೊಡಬಾರದು ಅಂಥ ಶಿಕ್ಷೆ ಅವನಿಗೆ ಕೊಡಬೇಕು. ನೇಹಾ ತಂದೆಯ ಬಳಿ ಕ್ಷಮೆಯಾಚಿಸುತ್ತೇನೆ. ಯಾಕೆಂದರೆ ನೇಹಾ ಕೂಡ ನನಗೆ ಮಗಳಿದ್ದಂತೆ. ಇವತ್ತು ಅವರ ಮಗಳಿಗೆ ಆದ ಕಷ್ಟನೇ ನಾಳೆ ನನ್ನ ಮಗಳಿಗೂ ಆದರೂ ಕಷ್ಟನೇ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಲವ್‌ ಜಿಹಾದ್‌ ಹೆಚ್ಚಾಗುತ್ತಿದೆ, ನಿಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಿ: ಪೋಷಕರಲ್ಲಿ ನೇಹಾ ತಂದೆ ನಿರಂಜನ್‌ ಮನವಿ

ನಾನು ಒಬ್ಬನೇ ಬೇರೆ ಇದ್ದೀನಿ: ನನ್ನ ಮಗನನ್ನು ದೇಶ ಸೈನಿಕನನ್ನಾಗಿ ಮಾಡಬೇಕು ಎಂದು ಆಸೆ ಪಟ್ಟಿದ್ದೆ. ಅದಕ್ಕಾಗಿ ಅವನನ್ನು ಬಾಡಿಬಿಲ್ಡರ್‌ ಅನ್ನಾಗಿ ಮಾಡುತ್ತಿದ್ದೆ. 2 ವರ್ಷದಿಂದ ಅವನು ನನ್ನ ಜೊತೆ ಮಾತಾಡ್ತಿರಲಿಲ್ಲ. ಶಿಕ್ಷಣಕ್ಕಾಗಿ ಹಣ ಕೊಡುತ್ತಿದ್ದೆ ಅಷ್ಟೇ. ಮಗ ಹಾಗೂ ಮಗಳು ನನ್ನ ಪತ್ನಿಯ ಜೊತೆ ವಾಸವಾಗಿದ್ದಾರೆ. ನಾನು ಒಬ್ಬನೇ ಬೇರೆ ಇದ್ದೀನಿ. 6 ವರ್ಷದಿಂದ ನಾವಿಬ್ಬರು ಗಂಡ-ಹೆಂಡತಿ ಕೌಟುಂಬಿಕ ಕಲಹದಿಂದ ಬೇರೆಯಾಗಿದ್ದೇವೆ. ಮಗ ನನ್ನ ಜೊತೆ ಮಾತಾಡದೇ 3 ತಿಂಗಳು ಆಯ್ತು. ಹಣ ಬೇಕಾದರೆ ಮಾತ್ರ ಆತ ನನಗೆ ಫೋನ್‌ ಮಾಡುತ್ತಾನೆ. ಇಲ್ಲವೆಂದರಲ್ಲಿ ಫೋನ್‌ ಮಾಡಲ್ಲ ಎಂದು ತಿಳಿಸಿದರು.

HUBBALLI MURDER

ಮುನವಳ್ಳಿ ಜನತೆಗೆ ಕೃತಜ್ಞ: ಮುನವಳ್ಳಿ ಜನತೆ ನನ್ನ ಪಾಲಿನ ದೇವರು. ಇವತ್ತು ಭವಾನಿ ಸರ್‌ (ನನ್ನ) ಉಳಿಸಿದ್ದಾರೆ, ಬೆಳೆಸಿದ್ದಾರೆ ಅಂದ್ರೆ ಅದು ಮುನವಳ್ಳಿ ಜನತೆ ನನಗೆ ಕೊಟ್ಟ ಭಿಕ್ಷೆ. ನಾನು ಈ ಋಣ ತೀರಿಸಲು ಆಗಲ್ಲ. ಅವರು ನನ್ನ ಮೇಲೆ ತುಂಬಾ ಅಭಿಮಾನ ಇಟ್ಟಿದ್ದಾರೆ. ಅವರ ಅಭಿಮಾನಕ್ಕೆ ನಾನು ಕೃತಜ್ಞನನಾಗಿದ್ದೇನೆ. ಎಲ್ಲಿ ಅನ್ಯಾಯ ಆಗುತ್ತೋ ಅಲ್ಲಿ ಪ್ರತಿಭಟನೆ ಆಗುತ್ತೆ. ಈ ಪ್ರಕರಣದಲ್ಲಿ ಜನ ಪ್ರತಿಭಟನೆ ಮಾಡುವುದರಲ್ಲಿ ತಪ್ಪಿಲ್ಲ. ಹೀಗಾಗಿ ಪ್ರತಿಭಟನೆ ಮಾಡುವವರಿಗೆ ದೊಡ್ಡ ಸಲಾಂ. ಇದರ ಉದ್ದೇಶ ಮುಂದೆ ಈ ರೀತಿಯ ಘಟನೆಗಳು ನಡೆಯಬಾರದು ಎಂಬುದಾಗಿದೆ ಎಂದರು. ಇದನ್ನೂ ಓದಿ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೀನಿ- ನೇಹಾ ಹಂತಕ ಫಯಾಜ್‌ ತಂದೆ ಕಣ್ಣೀರು

ಮದುವೆ ಬೇಡವೆಂದು ಕೈ ಮುಗಿದಿದ್ದೆ: ನನ್ನ ಮಗ ತಪ್ಪು ಮಾಡಿದ್ದಾನೆ ಒಪ್ಪಿಕೊಳ್ಳುತ್ತೇನೆ. ಆದರೆ ಅವರಿಬ್ಬರ ನಡುವೆ ಅಫೇರ್ ಇತ್ತು. ಮಗ ಅವಳನ್ನು ಮದುವೆ ಆಗುತ್ತೇನೆ ಎಂದಿದ್ದ. ಆಗ ನಾನು ಬೇಡಪ್ಪ.. ಅವರು ಗುರುಗಳು ಅಂಥವರ ಮಗಳನ್ನು ಮದುವೆ ಆಗುವುದು ನಮಗೆ ಗೌರವ ಅಲ್ಲ.. ಬೇಡ. ಮೊದಲೇ ದೇಶ ಹಾಗೂ ರಾಜ್ಯದಲ್ಲಿ ಲವ್‌ ಜಿಹಾದ್‌ ಅನ್ನೋದು ಹುಟ್ಟಿಕೊಂಡಿದೆ. ಇದಕ್ಕೆ ಬಣ್ಣ ಕಟ್ಟಿ ನಿನಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಬೇಡ ಅಂತಾ ಅವನ ಮುಂದೆಯೇ ಕೈಮುಗಿದು ಕೇಳಿಕೊಂಡಿದ್ದೆ. ಇವತ್ತು ಇಂತಹ ಘಟನೆ ನಡೆದರೂ ನಾನು ಅವನ ಪರವಾಗಿಲ್ಲ. ಯಾಕೆಂದರೆ ಯಾರ ಮಕ್ಕಳಾದರೂ ನಮ್ಮ ಮಕ್ಕಳ ಥರನೇ. ಹೆಣ್ಮಕ್ಕಳು ಕಣ್ಣೀರು ಹಾಕಿದರೆ ಯಾರಿಗೂ ಒಳ್ಳೆಯದಾಗಲ್ಲ ಎಂದು ಸುಬಾನಿ ಹೇಳಿದರು.

ಅವನಿಗೆ ಯಾವ ಶಿಕ್ಷೆ ಕೊಟ್ಟರೂ ನನಗೆ ಓಕೆ. ಮುಂದೆಯಾದರು ಇಂತಹ ಶಿಕ್ಷೆಯಿಂದ ಹೆಣ್ಮಕ್ಕಳು ಸುರಕ್ಷಿತವಾಗಿರಲಿ. ಆ ಭಯಕ್ಕಾದರೂ ಜನಗಳು ತಪ್ಪು ಮಾಡುವುದು ಬಿಡುತ್ತಾರೆ ಎಂಬುದು ನನ್ನ ನಂಬಿಕೆ ಆಗಿದೆ ಎಂದರು.

FAYAZ FATHER

ಪ್ರಕರಣ ವಿವರ: ಗುರುವಾರ ಸಂಜೆ 4.45ರ ಸುಮಾರಿಗೆ ಆರೋಪಿ ಫಯಾಜ್ ತನ್ನ ಕೈಯಲ್ಲಿ ಚಾಕು ಹಿಡಿದು, ಮಾಸ್ಕ್ ಧರಿಸಿಕೊಂಡು ಹುಬ್ಬಳ್ಳಿ ಬಿವಿಬಿ ಕಾಲೇಜು ಕ್ಯಾಂಪಸ್ ಒಳಗೆ ಎಂಟ್ರಿ ಕೊಟ್ಟಿದ್ದನು. ಇತ್ತ ವಿದ್ಯಾರ್ಥಿನಿ ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆಕೆಯ ಕುತ್ತಿಗೆ, ಹೊಟ್ಟೆ ಹಾಗೂ ಬೆನ್ನಿನ ಭಾಗಕ್ಕೆ ಮನಬಂದಂತೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ್ದಾನೆ.  ನೇಹಾಳನ್ನು ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿನಿಯರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ನೇಹಾ ಮೃತಪಟ್ಟಿದ್ದಾಳೆ.

ಇತ್ತ ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿ ಕಿಮ್ಸ್ ಆಸ್ಪತ್ರೆಯ ಹಿಂಬಂದಿ ಅವಿತಿದ್ದ ಫಯಾಜ್‍ನನ್ನು ಬಂಧಿಸಲಾಗಿದೆ. ಸುದ್ದಿ ಹಬ್ಬುತ್ತಿದ್ದಂತೆಯೇ ಹುಬ್ಬಳ್ಳಿಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಇಳಿದವು. ಆರೋಪಿಯನ್ನು ಎನ್ ಕೌಂಟರ್ ಮಾಡಿ ಇಲ್ಲವೇ ಗಲ್ಲಿಗೇರಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಇಂದು ಕೂಡ ಪ್ರತಿಭಟನೆ ಮುಂದುವರಿದಿದೆ.

Share This Article