ಧಾರವಾಡ: ಗ್ರಾಹಕರ ಜೊತೆ ನಿರ್ಲಕ್ಷ್ಮ ತೋರಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‍ಬಿಐ)ಗೆ 1 ಲಕ್ಷದ 10 ಸಾವಿರ ರೂ. ದಂಡವನ್ನು ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವಿಧಿಸಿದೆ.
ಸಾಲದ ಬಾಕಿ ಅಥವಾ ಬೇರೆ ಯಾವುದೇ ರೀತಿಯ ಹಣ ಕೊಡುವುದು ಬಾಕಿ ಇರದಿದ್ದರೂ ಗ್ರಾಹಕರೊಬ್ಬರಿಗೆ ನಿಮ್ಮ ಹೆಸರಿನಲ್ಲಿ ನಮ್ಮ ಬ್ಯಾಂಕಿನಲ್ಲಿ ಸಾಲದ ಬಾಕಿ ಇದೆ. ನೀವು ಸುಸ್ತಿ ಬಾಕಿದಾರರಾಗಿದ್ದೀರಿ ಎಂದು ಧಾರವಾಡದ ಎಚ್.ಡಿ.ಎಮ್.ಸಿ ಮತ್ತು ಹುಬ್ಬಳ್ಳಿ ಕೇಶ್ವಾಪುರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನಿಂದ ನೋಟಿಸ್ ಕಳಿಸಲಾಗಿತ್ತು. ಇದನ್ನೂ ಓದಿ: ಪಾಪ, ಅವರಿಗೆ ದುಡ್ಡು ವಾಪಸ್ ಕೊಟ್ಟು ಕಳಿಸಿದ್ದೀವಿ: ಸಿದ್ದರಾಮಯ್ಯ
ಧಾರವಾಡದ ಯಾದಗಿರಿ ಚಾಳಿನ ಕರುಣಾಕರ ಶೆಟ್ಟಿ ಅವರಿಗೆ ಹಲವಾರು ಬಾರಿ ನೋಟಿಸ್ ಕೊಡಲಾಗಿತ್ತು. ಇದರಿಂದ ತನ್ನ ಗೌರವಕ್ಕೆ ಚ್ಯುತಿ ಬಂದಿದೆ ಮತ್ತು ತನಗೆ ಬ್ಯಾಂಕಿನವರಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ಬ್ಯಾಂಕ್ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಕರುಣಾಕರ ಶೆಟ್ಟಿ ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಆಯೋಗ, ಯಾವುದೇ ರೀತಿಯ ಸಾಲ ಕೊಡುವುದು ಬಾಕಿ ಇರದಿದ್ದರೂ ಗ್ರಾಹಕ ಕರುಣಾಕರ ಶೆಟ್ಟಿಗೆ ಸುಸ್ತಿ ಬಾಕಿದಾರ ಇತ್ಯಾದಿಯಾಗಿ ಹೆಸರಿಸಿ, ಹಲವು ಬಾರಿ ನೋಟಿಸ್ ನೀಡಿರುವುದರಿಂದ ಗ್ರಾಹಕನ ವರ್ಚಸ್ಸಿಗೆ ಕುಂದು ಉಂಟಾಗಿದೆ. ಇದರ ಪರಿಣಾಮವಾಗಿ ಸೇವಾ ನ್ಯೂನ್ಯತೆ ಆಗಿದೆ ಎಂದು ಅಭಿಪ್ರಾಯಪಟ್ಟು ಸ್ಟೇಟ್ ಬ್ಯಾಂಕ್ ಅವರು ದೂರುದಾರ ಕರುಣಾಕರ ಶೆಟ್ಟಿಗೆ 1,10,000 ರೂ. ಪರಿಹಾರ ಕೊಡಬೇಕು ಎಂದು ತೀರ್ಪು ನೀಡಿದೆ. ಇದನ್ನೂ ಓದಿ: 44 ಕಿಮೀ ಸುತ್ತಾಡಿ ಕಾರಿನಲ್ಲಿಯೇ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಅರೆಸ್ಟ್