ಬಾಗಲಕೋಟೆ: ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆಗೆ ಏರಿದ ಕಾಂಗ್ರೆಸ್ (Congress) ಪಕ್ಷ, ಸದ್ಯ ಆಡಳಿತದಲ್ಲಿದೆ. ರಾಜ್ಯದ ದೊರೆಯಾಗಿ ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ. ಆದರೆ ಇದೇ ಕಾಂಗ್ರೆಸ್ ನಾಯಕರು ಚುನಾವಣೆ ಪೂರ್ವದಲ್ಲಿ ಜಿಲ್ಲೆಯ ಜನರಿಗೆ ಅನೇಕ ಭರವಸೆಗಳನ್ನು ನೀಡಿದ್ದರು. ಆದರೆ ಆ ಭರವಸೆಗಳು ಕೇವಲ ಮಾತಾಗಿ ಉಳಿದಿವೆ.
ಮುಳುಗಡೆ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ವಿಜಯಪುರ-ಬಾಗಲಕೋಟೆ ಅಖಂಡ ಜಿಲ್ಲೆಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಇದೇ ಸೆಪ್ಟೆಂಬರ್ 2 ರಂದು ಆಲಮಟ್ಟಿ ಅಣೆಕಟ್ಟೆಗೆ ಗಂಗಾ ಪೂಜೆ ಮತ್ತು ಬಾಗಿನ ಅರ್ಪಿಸಲು ಆಗಮಿಸಲಿದ್ದಾರೆ. ಈ ನಡುವೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗೆ ಒತ್ತು ನೀಡಿ ಉತ್ತರ ಕರ್ನಾಟಕ ಜ್ವಲಂತ ಸಮಸ್ಯೆಗಳ ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಜಿಲ್ಲೆಯ ಜನರಲ್ಲಿದೆ.
ಬಾಗಲಕೋಟೆ ಜಿಲ್ಲೆಯ ಕೃಷ್ಣ ಮೇಲ್ದಂಡೆ (Upper Krishna Project) 3ನೇ ಹಂತದ ಭೂಸ್ವಾಧೀನ ಕಾರ್ಯ ಆಮೆ ಗತಿಯಲ್ಲಿ ಸಾಗುತ್ತಿದೆ. ಮುಳುಗಡೆ ಸಂತ್ರಸ್ತರಿಗೆ ಶಾಶ್ವಾತ ಸೂರು ಕಲ್ಪಿಸುವುದು ಹಾಗೂ ಪರಿಹಾರ ಘೋಷಣೆ ಹೀಗೆ ಸಮಸ್ಯೆಗಳ ಸರಮಾಲೆ ಜಿಲ್ಲೆಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯಗೆ ಸವಾಲಾಗಿ ಪರಿಣಮಿಸಲಿದೆ.
ನಮ್ಮ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಘೋಷಣೆಗಳ ನೆಪ ಹೇಳಿ ಮುಳುಗಡೆ ಪ್ರದೇಶದ ಭೂಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಯಾವುದೇ ವಿಶೇಷ ಅನುದಾನ ಇಡದೇ, ಜಿಲ್ಲೆಯ ಜನರು ನಿರಾಸೆಗೊಳ್ಳುವಂತೆ ಮಾಡಿದೆ. ಇನ್ನು 2014-15ರಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ (ಮೆಡಿಕಲ್) ಕಾಲೇಜು ಘೋಷಣೆ ಮಾಡಿದ್ದರು. ಆದರೆ ಇಂದಿಗೂ ಅದರ ಕಾರ್ಯ ಒಂದು ಸಣ್ಣ ಪ್ರಗತಿ ಕಂಡಿಲ್ಲ.
ಮೆಡಿಕಲ್ ಕಾಲೇಜಿಗೆ ಬೇಕಾದ ಭೂಮಿ ಈಗಾಗಲೇ 12 ಎಕರೆ ಜಾಗ ಕಾಯ್ದಿರಿಸಿ ಇಟ್ಟಿದ್ದರೂ ಸಹ ಕಟ್ಟಡ ಕಾರ್ಯವಾಗಲಿ ಅಥವಾ ಯಾವುದೇ ಕಾರ್ಯ ಶುರುವಾಗಿಲ್ಲ. ಬಜೆಟ್‌ನಲ್ಲಿ ಅನುದಾನ ಒದಗಿಸದೇ ನಿರ್ಲಕ್ಷ್ಯ ವಹಿಸಲಾಗಿದೆ. ಹೀಗೆ ಹಲವಾರು ಸವಾಲುಗಳು ಬರುವ ಸೆಪ್ಟೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಎದುರಾಗಲಿವೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಿದ್ಧ – ಸುಪ್ರೀಂ ಕೋರ್ಟ್‍ಗೆ ಕೇಂದ್ರ
ಹೀಗಿರುವಾಗಲೇ ಕೃಷ್ಣೆಯ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆಶಿ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ಜೊತೆ ಜಂಟಿ ಸಭೆ ನಡೆಸಲಿದ್ದಾರೆ. ಹೀಗಾಗಿ ಈ ಎಲ್ಲ ಸವಾಲುಗಳನ್ನು ಸಿಎಂ, ಡಿಸಿಎಂ ಹೇಗೆ ಎದುರಿಸುತ್ತಾರೆ? ಮುಳುಗಡೆ ಜಿಲ್ಲೆಯ ಜನರಿಗೆ ಸಿಹಿ ಸುದ್ದಿಯನ್ನು ಕೊಡ್ತಾರಾ? ಇಲ್ಲವೇ ಕೇವಲ ಬಾಗಿನ ಅರ್ಪಣೆ ಮಾಡಿ ಹೋಗ್ತಾರಾ? ಎಂಬುದನ್ನು ಕಾಯ್ದು ನೋಡಬೇಕಿದೆ. ಇದನ್ನೂ ಓದಿ: ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು
Web Stories