ಸಿಗಂಧೂರು ದೇವಿ ಕುರಿತ ಭಕ್ತಿ ಪ್ರಧಾನ ಸಿನಿಮಾ ನಿರ್ಮಾಣ ಮಾಡಿದ್ದ ಶಶಿಕುಮಾರ್.ಪಿ.ಎಮ್ ಈ ಬಾರಿ ‘ವಜ್ರಮುಖಿ’ ಎನ್ನುವ ಹಾರರ್ ಚಿತ್ರಕ್ಕೆ ಕಥೆ, ಚಿತ್ರಕತೆ ಬರೆದು ಹಣ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ರಾಜ್ ಭಾಸ್ಕರ್ ಸಂಗೀತ ಸಂಯೋಜನೆಯ ಮೂರು ಹಾಡುಗಳ ಆಡಿಯೋ ಸಿಡಿ ಅನಾವರಣಗೊಂಡಿತು. ಹಾರರ್, ಸೆಂಟಿಮೆಂಟ್ ಮತ್ತು ಪ್ರೀತಿ ಕಥಾವಸ್ತು ಹೊಂದಿರುವ ತ್ರಿಕೋನ ಕತೆ ಈ ಚಿತ್ರದ್ದು ಎಂದು ಎಂದು ನಿರ್ಮಾಪಕರು ಬಣ್ಣಿಸಿದರು. ರೋಡ್ ರೋಮಿಯೋ ನಂತರ ಎರಡನೆ ಇನ್ನಿಂಗ್ಸ್ ಇದಾಗಿದೆ. ಹಾರರ್ ಅಂದ ಮಾತ್ರಕ್ಕೆ ಯಾವಾಗಲೂ ದೆವ್ವ ಕಾಣಿಸಿಕೊಳ್ಳುವುದಿಲ್ಲ. ಎಲ್ಲಿ ಬೇಕೋ ಅಷ್ಟು ಮಾತ್ರ ಬರುತ್ತದೆಂದು ಆ್ಯಡ್ ಫಿಲಂ ಮೇಕರ್ ಪಾತ್ರ ಮಾಡಿರುವ ನಾಯಕ ದಿಲೀಪ್ ಪೈ ಹೇಳಿದರು.
ನಲವತ್ತೈದು ದಿನಗಳ ಕಾಲ ಮೂರು ಹಂತಗಳಲ್ಲಿ ಸಾಗರ, ಜೋಗ್ ಜಲಪಾತ, ತಾಳಗುಪ್ಪದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬ ಮಾಹಿತಿಯನ್ನು ಸಂಕಲನ, ನಿರ್ದೇಶನ ಮಾಡಿರುವ ಎನ್.ಆದಿತ್ಯ ಕುಣಿಗಲ್ ನೀಡಿದರು.
ಶೀರ್ಷಿಕೆಯಲ್ಲಿ ಪ್ರೇಕ್ಷಕರಿಗೆ ಹೆದರಿಸುತ್ತೇನೆ. ಡಾ.ನಾಗೇಂದ್ರ ಪ್ರಸಾದ್ ಶಿಫಾರಸಿನಿಂದ ಅವಕಾಶ ಒದಗಿಬಂತು. ಬಹುತೇಕ ಚಿತ್ರೀಕರಣವು ಸಾಯಂಕಾಲ 6 ರಿಂದ ಬೆಳಿಗ್ಗಿನ ಜಾವದ ತನಕ ನಡೆದಿದೆ. ನನಗಾಗಿಯೇ ಬರೆದಿರುವ ಕಾಲ ಚಂಚಲ ಹಾಡು ಚೆನ್ನಾಗಿ ಬಂದಿದೆ. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣದಲ್ಲಿ ಎಲ್ಲರನ್ನೂ ಸುಂದರವಾಗಿ ತೋರಿಸಿದ್ದಾರೆಂದು ನಟಿ ನೀತು ಸಂತಸ ವ್ಯಕ್ತಪಡಿಸಿದರು.
80ರ ಕಾಲದಲ್ಲಿ ಆಡಿಯೋ ಕಂಪನಿಗೆ ಸುವರ್ಣಯುಗ ಎನ್ನಬಹುದು. ಅಂದು ವಾರಕ್ಕೆ ಒಂದು ಆಡಿಯೋ ಕಂಪೆನಿಗಳು ಆರಂಭವಾಗುತ್ತಿದ್ದವು. ಇದರ ಸ್ಪರ್ಧೆಯೂ ಚೆನ್ನಾಗಿತ್ತು. ಮುಂದೆ ಒಂದೊಂದೇ ಮುಚ್ಚಿಕೊಳ್ಳುತ್ತಾ, ಇಂದು ಬೆರಳಣಿಕೆಯಷ್ಟು ಮಾತ್ರ ಚಾಲ್ತಿಯಲ್ಲಿದೆ. ಯೂಟ್ಯೂಬ್‍ನಲ್ಲಿ ಲಹರಿ ಸಂಸ್ಥೆಗೆ ಹತ್ತು ಕೋಟಿ ಚಂದದಾರರು ಇದ್ದಾರೆ. ದೇವರನ್ನು ನೋಡಿದ್ದೇನೆ. ದೆವ್ವ ನೋಡಿಲ್ಲ. ರಾಜಕೀಯದಲ್ಲಿ ಮನುಷ್ಯರು ದೆವ್ವ ಆಗಿ ಕಾಣಿಸಿಕೊಳ್ಳುತ್ತಾರೆಂಬುದು ಲಹರಿವೇಲು ನುಡಿಯಾಗಿತ್ತು.
ಡಾ. ರಾಜ್‍ಕುಮಾರ್ ನಿರ್ಮಾಪಕರನ್ನು ಅನ್ನದಾತರು ಎನ್ನುತ್ತಿದ್ದರು. ಈಗ ಲಹರಿ ಸಂಸ್ಥೆಯು ಹೊಸ ನಿರ್ಮಾಪಕರಿಗೆ ಆಶ್ರಯದಾತರಾಗುತ್ತಿದ್ದಾರೆ. ಸಿಡಿಗೆ ಮಾರುಕಟ್ಟೆ ಇದೆ ಅಂತ ತೋರಿಸಿಕೊಟ್ಟವರು. ಮನ ಮೆಚ್ಚಿದ ಹುಡುಗಿ ಚಿತ್ರದ ಆಡಿಯೋ ಹಕ್ಕುಗಳಿಗೆ ಎರಡೂವರೆ ಲಕ್ಷ, ಅನುರಾಗ ಅರಳಿತು ಸಿನಿಮಾಕ್ಕೆ ನಲವತ್ತು ಲಕ್ಷ ನೀಡಿದ್ದು ದಾಖಲೆಯಾಗಿತ್ತು. ಅದರಂತೆ ನೀವು ಈಗ ಬರುವ ಚಿತ್ರಗಳನ್ನು ಮೇಲಕ್ಕೆ ಎತ್ತಬೇಕೆಂದು ನಿರ್ಮಾಪಕರ ಪರವಾಗಿ ವೇಲುರವರನ್ನು ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಕೋರಿಕೊಂಡರು.
ಹಾರರ್ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಧಾನ್ಯತೆ ಇರುವುದಿಲ್ಲ ಎನ್ನುವ ಮಾತಿದೆ. ಆದರೆ ವಜ್ರಮುಖಿಯಲ್ಲಿ ಜನ ಇಷ್ಟ ಪಡುವಂಥಾ ಮೂರು ಹಾಡುಗಳಿವೆ. ಈಗಾಗಲೇ ಸಾಕಷ್ಟು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರಾಜ್ ಭಾಸ್ಕರ್ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಲಹರಿ ಸಂಸ್ಥೆ ಹಾಡುಗಳ ಹಕ್ಕು ಪಡೆದಿದೆ ಅಂದರೆ ಆ ಹಾಡುಗಳು ಉತ್ತಮವಾಗಿ ಮೂಡಿಬಂದಿರುತ್ತದೆ ಎಂಬುದು ಖಾತರಿ.
https://www.youtube.com/watch?v=r9cMF9dKTVs