ಜಸ್ ಕರಣ್ ಸಿಂಗ್ ಧ್ವನಿಯಾದ ಹಾಡಿನೊಂದಿಗೆ ಎದೆಗಿಳಿದ ಅಂಶು!

Public TV
1 Min Read
Jaskaran Singh

ಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ (Nisha Ravikrishnan) ನಾಯಕಿಯಾಗಿ ನಟಿಸಿರುವ ಚಿತ್ರ ‘ಅಂಶು’. ಇದುವರೆಗೂ ತನ್ನದೇ ಆದ ಗಟ್ಟಿತನದ ಸುಳಿವಿನೊಂದಿಗೆ ಸೆಳೆಯುತ್ತಾ ಬಂದಿರುವ ಈ ಚಿತ್ರದ ಅರ್ಥಪೂರ್ಣ ಹಾಡೊಂದು ಇದೀಗ ಬಿಡುಗಡೆಯಾಗಿದೆ. ಕೇಳಿದಾಕ್ಷಣವೇ ನೇರವಾಗಿ ಎದೆಗಿಳಿದು ಬಿಡುವ ಈ ಹಾಡಿಗೀಗ ಕೇಳುಗರಿಂದ ಭರಪೂರ ಮೆಚ್ಚುಗೆ ಹರಿದು ಬರಲಾರಂಭಿಸಿದೆ. ಚಿತ್ರ ಸನ್ನಿವೇಶಗಳಿಗೆ ತಕ್ಕುದಾಗಿ ರೂಪುಗೊಂಡಂತಿರುವ ಸದರಿ ಹಾಡು, ಒಂದಿಡೀ ಕಥೆಯ ಆತ್ಮವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗುತ್ತಿದೆ. ಇದೇ ನವೆಂಬರ್ 21ರಂದು ಬಿಡುಗಡೆಯಾಗಲಿರುವ ‘ಅಂಶು’ (Anshu Film) ಈ ಹಾಡಿನ ಮೂಲಕವೇ ಪ್ರೇಕ್ಷಕರಿಗೆಲ್ಲ ಮತ್ತಷ್ಟು ಆಪ್ತವಾಗಿದೆ.

Jaskaran Singh 1
ಮೂಲತಃ ಪಂಜಾಬಿನವರಾಗಿದ್ದರೂ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಕನ್ನಡದವರೇ ಎಂಬಂತಾಗಿರುವಾತ ಗಾಯಕ ಜಸ್ ಕರಣ್ ಸಿಂಗ್. ಕನ್ನಡದಲ್ಲಿ ಬಹು ಬೇಡಿಕೆ ಹೊಂದಿರುವ ಜಸ್ ಕರಣ್ (Jaskaran Singh) ಈ ಹಾಡಿಗೆ ಧ್ವನಿಯಾಗಿದ್ದಾರೆ. ‘ನೀರಾ ಮೇಲೆ ಗುಳ್ಳೆ ಬಿಂಬ ಕಾಣೋ ವೇಳೆ, ನಿಜವು ಒಂದು ಸಳ್ಳೇ ಅಲೆಮಾರಿ’ ಎಂಬ ಸಮ್ಮೋಹಕ ಸಾಲುಗಳನ್ನು ಬರೆದಿರುವವರು ಮಹೇಂದ್ರ ಗೌಡ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಹಾಡಿಗೆ ಕೇಳುಗರ ಕಡೆಯಿಂದ ಬರುತ್ತಿರೋ ಪ್ರತಿಕ್ರಿಯೆಗಳೇ ಎಲ್ಲವನ್ನೂ ಹೇಳುವಂತಿವೆ. ಇದರ ದೃಶ್ಯಗಳ ಮೂಲಕ ನಿಶಾ ರವಿಕೃಷ್ಣನ್ ಪಾತ್ರದ ಒಂದಷ್ಟು ಚಹರೆಗಳನ್ನೂ ಕೂಡ ಚಿತ್ರತಂಡ ಜಾಹೀರು ಮಾಡಿದೆ.

ಇದು ಎಂ.ಸಿ ಚನ್ನಕೇಶವ ನಿರ್ದೇಶನದ ಚೊಚ್ಚಲ ಚಿತ್ರ. ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚೆಲುವರಾಜ್, ಜಯಚಂದ್ರ ಯಲ್ಲಪ್ಪ, ಪ್ರಮೋದ್ ಚಿನ್ನಸ್ವಾಮಿ, ಡಾ.ಮಧುರಾಜ್, ವೀರನ್ ಗೌಡ ಸಹ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಣ, ಆಶಾ ಎಂ ಥಾಮಸ್ ವಸ್ತ್ರವಿನ್ಯಾಸದ ಮೂಲಕ ಈ ಚಿತ್ರ ಕಳೆಗಟ್ಟಿಕೊಂಡಿದೆ. ನವ ಪ್ರತಿಭೆ ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದೇ ನವೆಂಬರ್ 21ರ ಗುರುವಾರ ಅಂಶು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

Share This Article