– ಒತ್ತೆಯಾಳಾಗಿರಿಸಿಕೊಂಡಿದ್ದ ಭಾರತೀಯರಿಂದ ದಿನಕ್ಕೆ 15 ಗಂಟೆ ಕೆಲಸ
ನವದೆಹಲಿ: ಉದ್ಯೋಗ (Job) ಅರಸಿ ವಿದೇಶಕ್ಕೆ ತೆರಳಿ ವಂಚನೆಗೆ ಒಳಗಾಗಿದ್ದ ನಾಲ್ವರು ಮಹಿಳೆಯರು ಸೇರಿ 28 ಮಂದಿ ಕನ್ನಡಿಗರನ್ನು ವಿದೇಶಾಂಗ ಸಚಿವಾಲಯ (Ministry of External Affairs) ರಕ್ಷಣೆ ಮಾಡಿದೆ. ರಕ್ಷಣೆಗೊಳಗಾದವರನ್ನು ದೆಹಲಿಯ ಕರ್ನಾಟಕ ಭವನದ ಅಧಿಕಾರಗಳ ನೆರವಿನೊಂದಿಗೆ ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ಉದ್ಯೋಗ ನೀಡುವ ಭರವಸೆ ನೀಡಿ 283 ಭಾರತೀಯರನ್ನು ಥೈಲ್ಯಾಂಡ್‌ಗೆ ಕರೆಸಿಕೊಳ್ಳಲಾಗಿತ್ತು. ಥೈಲ್ಯಾಂಡ್‌ಗೆ (Thailand) ತೆರಳಿದ್ದ ಭಾರತೀಯರನ್ನ (Indians) ರಸ್ತೆ ಮಾರ್ಗದ ಮೂಲಕ ಮಯನ್ಮಾರ್‌ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪಾಸ್‌ಪೊರ್ಟ್ ಕಿತ್ತುಕೊಂಡು ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು.
ಒತ್ತೆಯಾಳಾಗಿಟ್ಟುಕೊಂಡಿದ್ದ ಭಾರತೀಯರನ್ನು ದಿನಕ್ಕೆ 15 ಗಂಟೆಗೂ ಅಧಿಕ ಕೆಲಸ ಮಾಡಿಸಲಾಗುತ್ತಿತ್ತು. ಈ ವಿಷಯ ವಿದೇಶಾಂಗ ಸಚಿವಾಲಯ ಗಮನಕ್ಕೆ ಬಂದ ಬಳಿಕ ವಂಚನೆಗೊಳಾದವರನ್ನು ಗುರುತಿಸಿ ಮಯನ್ಮಾರ್, ಥೈಲ್ಯಾಂಡ್ ರಾಯಭಾರ ಕಚೇರಿಗಳ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಲಾಯಿತು.
ಭಾರತಕ್ಕೆ ಬಂದ 28 ಕನ್ನಡಿಗರನ್ನು ಕರ್ನಾಟಕ ಭವನದ ಅಧಿಕಾರಿಗಳು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಯಿತು.