ಬೆಂಗಳೂರು: ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು ಈ ಬಾರಿಯೂ ಕೇಂದ್ರದಲ್ಲಿ ಎನ್‍ಡಿಎಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಭವಿಷ್ಯ ನುಡಿದಿವೆ. ಕೆಲವು ಸಮೀಕ್ಷೆಗಳು ಎನ್‍ಡಿಎ ಒಕ್ಕೂಟ 300ರ ಗಡಿ ದಾಟಿದರೆ ಕೆಲವೊಂದು ಸಮೀಕ್ಷೆಗಳು ಬಿಜೆಪಿಯೊಂದೇ 300ರ ಗಡಿ ದಾಟಲಿದೆ ಎಂದು ಹೇಳಿದೆ. ಚುನಾವಣಾ ಪೂರ್ವ ಸಮೀಕ್ಷೆಗಳಿಗಿಂತ ಎಕ್ಸಿಟ್ ಪೋಲ್ ಸಮೀಕ್ಷೆಗಳು ಫಲಿತಾಂಶದ ಹತ್ತಿರ ಇರುತ್ತದೆ ಎನ್ನುವುದು ಚುನಾವಣಾ ಪಂಡಿತರ ಮಾತು.
ಫಲಿತಾಂಶದ ಹತ್ತಿರ ಇರುತ್ತದೆ ಎನ್ನುವ ಒಂದೇ ಕಾರಣಕ್ಕೆ ಎಕ್ಸಿಟ್ ಪೋಲ್‍ಗಳನ್ನು ನಂಬುವಂತಿಲ್ಲ. ಈ ಹಿಂದೆ ಎಕ್ಸಿಟ್ ಪೋಲ್ ನಲ್ಲಿ ಒಂದು ಅಂಕಿ ನೀಡಿದ್ದರೆ ಫಲಿತಾಂಶ ಬಂದಾಗ ಅಂಕಿ ಸಂಖ್ಯೆ ಬದಲಾದ ಉದಾಹರಣೆ ಇದೆ. ಹೀಗಾಗಿ ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಕ್ಸಿಟ್ ಪೋಲ್ ಗಳು ಏನು ಹೇಳಿತ್ತು ಫಲಿತಾಂಶ ಏನು ಬಂದಿತ್ತು ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
Advertisement
Real answer lies with EVMs but a look at all #ExitPoll2019 and how Exit Polls of past five general elections fared pic.twitter.com/JhHOgcMvVU
— Sanjay Bragta (@SanjayBragta) May 20, 2019
Advertisement
1998 ಚುನಾವಣೆ:
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲ್ಲಿದ್ದು ಮೂರು ಸಮೀಕ್ಷೆಗಳು ಬಿಜೆಪಿ ಮೈತ್ರಿಕೂಟ 235 ಸ್ಥಾನಗಳಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಅಂತಿಮ ಫಲಿತಾಂಶದ ವೇಳೆ ಬಿಜೆಪಿ ಮೈತ್ರಿಕೂಟ 252 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
1999 :
ಈ ಚುನಾವಣೆಯಲ್ಲೂ ಬಿಜೆಪಿ ಮೈತ್ರಿಕೂಟ ಅತಿದೊಡ್ಡ ಪಕ್ಷವಾಗಲಿ ಎಂದು ಎಲ್ಲ ಸಮೀಕ್ಷೆಗಳು ಹೇಳಿತ್ತು. ಅದರಲ್ಲಿ 4 ಸಮೀಕ್ಷೆಗಳು ಬಿಜೆಪಿ 300ರ ಗಡಿ ದಾಟಲಿದೆ ಎಂದು ಭವಿಷ್ಯ ನುಡಿದಿತ್ತು. ಅಂತಿಮ ಫಲಿತಾಂಶ ಪ್ರಕಟವಾದಾಗ ಬಿಜೆಪಿ ಮೈತ್ರಿಕೂಟ 296 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
2004:
ಎರಡನೇ ಬಾರಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅಧಿಕಾರಕ್ಕೆ ಏರಲಿದ್ದು, ಕಾಂಗ್ರೆಸ್ಸಿಗೆ ಮತ್ತೆ ಸೋಲಾಗಲಿದೆ ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ ಫಲಿತಾಂಶ ತಲೆಕೆಳಗೆ ಮಾಡಿತ್ತು. ಬಿಜೆಪಿ ಮೈತ್ರಿಗೆ 189 ಸ್ಥಾನಗಳು ಬಂದಿದ್ದರೆ ಕಾಂಗ್ರೆಸ್ ಮೈತ್ರಿಗೆ 222 ಸ್ಥಾನ ಸಿಕ್ಕಿತ್ತು.
2009:
ಈ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದರೂ ಬಹುಮತ ಸಿಗುವುದು ಕಷ್ಟ ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ ಫಲಿತಾಂಶ ಬಂದಾಗ ಬಿಜೆಪಿ ಮೈತ್ರಿಕೂಟ 159 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಮೈತ್ರಿಕೂಟ 262 ಸ್ಥಾನಗಳನ್ನು ಗೆದ್ದುಕೊಂಡಿತ್ತು.
2014:
ಮೋದಿ ಅಲೆಯಿಂದಾಗಿ ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿತ್ತು. ಆದರೆ ಬಿಜೆಪಿ ಮೈತ್ರಿಕೂಟ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಧಿಕೃತವಾಗಿ ಟುಡೇಸ್ ಚಾಣಕ್ಯ ಮಾತ್ರ ಹೇಳಿತ್ತು. ಅಂತಿಮ ಫಲಿತಾಂಶ ಬಂದಾಗ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 336 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ವಿಧಾನ ಸಭಾ ಚುನಾವಣಾ ಫಲಿತಾಂಶ ಏನಿತ್ತು?
ಕರ್ನಾಟಕ:
ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲ್ಲಿದ್ದು, ಆದರೆ ಯಾರಿಗೂ ಬಹುಮತ ಸಿಗುವುದಿಲ್ಲ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿತ್ತು. ಅದರಂತೆ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 37 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ತಮಿಳುನಾಡು:
ಆಡಳಿತ ವಿರೋಧಿ ಅಲೆ ಇರುವ ಕಾರಣ ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಏರುವುದಿಲ್ಲ ಎಂದು ಬಹುತೇಕ ಎಲ್ಲ ಸಮೀಕ್ಷೆಗಳು ಹೇಳಿತ್ತು. ಆದರೆ ಫಲಿತಾಂಶ ಉಲ್ಟಾ ಆಗಿದ್ದು ಎಐಎಡಿಎಂಕೆ ಮತ್ತೆ ಅಧಿಕಾರಕ್ಕೆ ಏರಿತ್ತು.
ಅಸ್ಸಾಂ:
ಎಲ್ಲ ಎಕ್ಸಿಟ್ ಪೋಲ್‍ಗಳು ಬಿಜೆಪಿ ಐತಿಹಾಸಿಕ ಜಯವನ್ನು ದಾಖಲಿಸುತ್ತದೆ ಎಂದು ಭವಿಷ್ಯ ನುಡಿದಿತ್ತು. ಟುಡೇಸ್ ಚಾಣಕ್ಯ 90 ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸುತ್ತದೆ ಎಂದಿದ್ದರೆ ಎಬಿಪಿ 81 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಅಂತಿಮವಾಗಿ ಬಿಜೆಪಿ 86 ಸ್ಥಾನಗಳನ್ನು ಗೆದ್ದು ಸರ್ಕಾರ ಸ್ಥಾಪಿಸಿತ್ತು.
ಪಶ್ಚಿಮ ಬಂಗಾಳ:
ಒಟ್ಟು 243 ಕ್ಷೇತ್ರಗಳಿರುವ ಬಂಗಾಳದಲ್ಲಿ ಟಿಎಂಸಿ ಭರ್ಜರಿಯಾಗಿ ಜಯಗಳಿಸುತ್ತದೆ ಎಂದು ಎಲ್ಲ ಸಮೀಕ್ಷೆಗಳು ಹೇಳಿತ್ತು. ಟುಡೇಸ್ ಚಾಣಕ್ಯ ಟಿಎಂಸಿ 210 ರಲ್ಲಿ ಜಯಗಳಿಸಲಿದೆ ಎಂದಿದ್ದರೆ, ಸಿ ವೋಟರ್ 167 ರಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಅಂತಿಮ ಫಲಿತಾಂಶ ಬಂದಾಗ ಟಿಎಂಸಿ 211 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಬಿಹಾರ:
2015ರ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ ಒಟ್ಟಾಗಿ ಮಹಾಮೈತ್ರಿ ಮಾಡಿಕೊಂಡಿದ್ದ ಪರಿಣಾಮ ಯಾವ ಸಂಸ್ಥೆಗೂ ನಿಖರವಾಗಿ ಫಲಿತಾಂಶದ ಭವಿಷ್ಯ ಹೇಳಲು ಸಾಧ್ಯವಾಗಿರಲಿಲ್ಲ. ಒಂದೊಂದು ಸಂಸ್ಥೆಗಳು ಬೇರೆ ಬೇರೆ ಫಲಿತಾಂಶ ಪ್ರಕಟಿಸಿತ್ತು. ಜನರ ನಾಡಿಮಿಡಿತ ಕಂಡು ಹಿಡಿಯಲು ವಿಫಲವಾಗಿತ್ತು. ಟುಡೇಸ್ ಚಾಣಕ್ಯ ಬಿಜೆಪಿ ಮೈತ್ರಿಗೆ 155 ಸ್ಥಾನ ಕೊಟ್ಟಿದ್ದರೆ 83 ಸ್ಥಾನಗಳನ್ನು ಮಹಾಮೈತ್ರಿಗೆ ನೀಡಿತ್ತು. ನ್ಯೂಸ್ ಎಕ್ಸ್ 130 -140 ಸ್ಥಾನಗಳನ್ನು ಮಹಾಮೈತ್ರಿಗೆ ನೀಡಿದ್ದರೆ ಎಬಿಪಿ ನ್ಯೂಸ್ 130 ಸ್ಥಾನ ನೀಡಿತ್ತು. ಫಲಿತಾಂಶ ಪ್ರಕಟವಾದಾಗ ನಿತೀಶ್ ನೇತೃತ್ವದ ಮಹಾಮೈತ್ರಿಕೂಟ 178 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.