CrimeLatestNationalSports

ಕ್ರಿಕೆಟ್ ಮೂಲಕ ಚಿನ್ನ ಬೆಳೆಯುತ್ತಿದ್ದಾರೆ ದೆಹಲಿ ರೈತರು!

ದೆಹಲಿ: ರಾಷ್ಟ್ರ ರಾಜಧಾನಿಯ ರೈತರು ತಮ್ಮ ಭೂಮಿಯಲ್ಲಿ ಕೃಷಿ ಕೆಲಸವನ್ನು ಬಿಟ್ಟು ಕ್ರಿಕೆಟ್ ಮೈದಾನಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಹೊಸ ಆದಾಯ ಮೂಲವನ್ನು ಹುಡುಕಿದ್ದಾರೆ.

ದೆಹಲಿ ಗುರ್ಗಾವ್‍ನಲ್ಲಿ ಐಟಿ ಉದ್ಯಮ ದೊಡ್ಡದಾಗಿ ಬೆಳೆದಿರುವುದರಿಂದ ಇಲ್ಲಿನ ಐಟಿ ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಕ್ರಿಕೆಟ್ ಆಡಲು ಈ ಮೈದಾನಗಳನ್ನು ಸಿದ್ಧ ಪಡಿಸಲಾಗಿದೆ. ಪ್ರತಿ ದಿನ ಈ ಮೈದಾನದಲ್ಲಿ ಕನಿಷ್ಠ ಮೂರು ಪಂದ್ಯಗಳನ್ನು ಆಯೋಜಿಸಲಾಗುತ್ತಿದ್ದು, ಪ್ರತಿ ಪಂದ್ಯಕ್ಕೆ ಸುಮಾರು 3,500 ರಿಂದ 7,500 ರೂ. ಗಳನ್ನು ನಿಗದಿ ಪಡಿಸಲಾಗುತ್ತಿದೆ.

ಈ ಹೊಸ ಉದ್ಯಮದಲ್ಲಿ ದೆಹಲಿಯ ಬಿಲಿಯಾವಾಸ್ ಹಾಗೂ ಕದಾರ್ಪುರ್ ಪ್ರದೇಶದಲ್ಲಿ ಈಗಾಗಲೇ ಸುಮಾರು 40 ಮೈದಾನಗಳು ನಿರ್ಮಾಣವಾಗಿದೆ. ಪ್ರತಿ ಪಂದ್ಯಕ್ಕೆ ಪಡೆಯುವ ಮೊತ್ತವು ಪಂದ್ಯದ ಓವರ್ ಹಾಗೂ ಅಂಪೈರ್ ಫೀಸ್ ಆಧಾರಿಸಿ ನಿರ್ಧರಿಸಲಾಗುತ್ತದೆ. ಅಲ್ಲದೇ ಕೆಲವು ಮೈದಾನಗಳಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದ್ದು ಈ ಸೇವೆಯನ್ನು ಪಡೆಯಲು ಹೆಚ್ಚಿನ ಮೊತ್ತ ನೀಡಬೇಕಾಗುತ್ತದೆ ಎಂದು ಪ್ರದೇಶದಲ್ಲಿ ಈಗಾಗಲೇ ಹಲವು ಪಂದ್ಯಗಳನ್ನು ಆಯೋಜಿಸಿರುವ ಟರ್ಫ್ ಸ್ಫೋರ್ಟ್ಸ್  ಮ್ಯಾನೇಜ್‍ಮೆಂಟ್ ಮಾಲೀಕ ಸಚಿನ್ ಖೂರನ ಅವರು ತಿಳಿಸಿದ್ದಾರೆ.

ಇಲ್ಲಿ ನಡೆಯುವ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವ 20 ವರ್ಷದ ವಿದ್ಯಾರ್ಥಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಪ್ರತಿ ವಾರಾಂತ್ಯದಲ್ಲಿ ಇಲ್ಲಿ ನಡೆಯುವ ಪಂದ್ಯಗಳ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಂಪೈರಿಂಗ್ ಆರಂಭಿಸುವ ಮೊದಲು ಪ್ರತಿಯೊಬ್ಬರಿಗೂ 7 ರಿಂದ 8 ತಿಂಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಸುಸಜ್ಜಿತ ಮೈದಾನಗಳಂತೆ ದೇಶದ ಇತರೇ ಪ್ರಮುಖ ಪ್ರದೇಶಗಳಲ್ಲಿಯೂ ಈ ಬೆಳವಣಿಗೆ ಕಂಡು ಬರುತ್ತದೆ ಎಂದು ಬೆಂಗಳೂರು ಪೂಮಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿನವಂತ್ ಸೆಹಗಲ್ ತಿಳಿಸಿದ್ದಾರೆ.

ದೆಹಲಿಯ ಗುರು ಗಾಂವ್ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿರುವ ಈ ಮೈದಾನಗಳಿಂದ ಸ್ಥಳೀಯ ವ್ಯಾಪಾರಿಗಳಿಗೂ ಉತ್ತಮ ಲಾಭ ಲಭಿಸುತ್ತಿದ್ದು, ಸ್ಥಳೀಯ ಕ್ರಿಕೆಟ್ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಗಳು ಸಿಗುತ್ತಿವೆ.

Leave a Reply

Your email address will not be published. Required fields are marked *

Back to top button