ಮುಂಬೈ: ಉದ್ಧವ್ ಠಾಕ್ರೆ (Uddhav Thackeray) ಅವರ ಒಂದು ನಿರ್ಧಾರಿಂದ ಮಹಾರಾಷ್ಟ್ರದಲ್ಲಿ (Maharashtra) ಈಗ ಟ್ರಿಪಲ್ ಎಂಜಿನ್ ಸರ್ಕಾರ ಬಂದಿದೆ. ದೇಶದಲ್ಲಿ ಮೋದಿಯನ್ನು (PM Narendra modi) ಸೋಲಿಸಲು ವಿಪಕ್ಷಗಳನ್ನು ಒಗ್ಗೂಡಿಸುತ್ತಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ (Sharad Pawar) ಅವರ ಪಕ್ಷವೇ ಈಗ ಇಬ್ಭಾಗವಾಗಿದೆ. ವಿರೋಧ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ (Ajit Pawar) ಆಡಳಿತ ಪಕ್ಷವನ್ನು ಬೆಂಬಲಿಸಿ ಡಿಸಿಎಂ ಪಟ್ಟವನ್ನು ಅಲಂಕರಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿಂಧೆ ಬಣದ ಶಿವಸೇನೆ, ದೇವೇಂದ್ರ ಫಡ್ನಾವೀಸ್ (Devendra Fadnavis) ನೇತೃತ್ವದ ಬಿಜೆಪಿ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ (NCP) ಅಧಿಕಾರಕ್ಕೆ ಬರಲು ಕಾರಣವಾಗಿದ್ದು ಉದ್ಧವ್ ಠಾಕ್ರೆಯ ಒಂದು ನಿರ್ಧಾರ.
Advertisement
2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಮತ್ತು ಶಿವಸೇನೆ (Shiv Sena) ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. ಈ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಎನ್‌ಸಿಪಿ 54, ಕಾಂಗ್ರೆಸ್ 44, ಇತರರು 29 ಸ್ಥಾನಗಳಲ್ಲಿ ಜಯಗಳಿಸಿದ್ದರು.
Advertisement
Advertisement
ನಿರೀಕ್ಷೆಯಂತೆ ಬಿಜೆಪಿ ಮತ್ತು ಶಿವಸೇನೆ ಸರ್ಕಾರ ಅಧಿಕಾರಕ್ಕೆ ಏರಬೇಕಿತ್ತು. ಆದರೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಪಟ್ಟಕ್ಕೆ ಹಠ ಹಿಡಿದಿದ್ದರು. ಬಿಜೆಪಿ ಈ ಹಠಕ್ಕೆ ಬಗ್ಗಲಿಲ್ಲ. ಕೊನೆಗೆ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡ ಉದ್ಧವ್ ಠಾಕ್ರೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೂಡಿ ಮೈತ್ರಿ ಮಾಡಿಕೊಂಡರು. ಪರಿಣಾಮ ಮಹಾ ವಿಕಾಸ್ ಅಘಾಡಿ (Maha Vikas Aghadi) ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂತು. ಇದನ್ನೂ ಓದಿ: ಇಂದು ಬಾಂಬ್ ಹಾಕಿದವರ ದೇಶಕ್ಕೆ ನುಗ್ಗಿ ಹೊಡೆಯೋ ಸಾಮರ್ಥ್ಯ ನಮ್ಮಲ್ಲಿದೆ: ಜೋಶಿ
Advertisement
ಮುಂದಿನ ಲೋಕಸಭಾ ಚುನಾವಣೆಗೆ ನಾವು ಒಂದಾಗಿ ಮೋದಿಯನ್ನು ಸೋಲಿಸುತ್ತೇವೆ ಎಂದು ಮೂರು ಪಕ್ಷಗಳು ಘೋಷಣೆ ಮಾಡಿದ್ದವು. ರಾಜಕೀಯ ಚಾಣಕ್ಯ ಅಮಿತ್ ಶಾ ತಂತ್ರವನ್ನೇ ಬಳಸಿಕೊಂಡು ನಾವು ಅಧಿಕಾರಿಕ್ಕೆ ಏರಿದ್ದೇವೆ. ಇದರಲ್ಲಿ ತಪ್ಪೇನು ಎಂದು ಶರದ್ ಪವಾರ್ ಪ್ರಶ್ನಿಸಿದ್ದರು. ಆದರೆ ಎರಡು ವಿರುದ್ಧ ಸಿದ್ಧಾಂತಗಳನ್ನು ಹೊಂದಿರುವ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಇರುವುದು ಕಷ್ಟ ಎನ್ನುವಂತೆ 2022ರಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ 40 ಮಂದಿ ಶಾಸಕರು ಉದ್ಧವ್ ನಿರ್ಧಾರಕ್ಕೆ ಬೇಸತ್ತು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುವ ನಿರ್ಧಾರ ಕೈಗೊಂಡರು.
ಹಾಗೆ ನೋಡಿದರೆ ಶಿಂಧೆಗಿಂತ ಮೊದಲೇ ಅಜಿತ್ ಪವಾರ್ 2019ರಲ್ಲೇ ಬಿಜೆಪಿ ಜೊತೆ ಹೋಗಿದ್ದರು. ನವೆಂಬರ್ ತಿಂಗಳಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದರು. ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ಅಜಿತ್ ಪವಾರ್ ಡಿಸಿಎಂ ಪಟ್ಟ ಅಲಂಕರಿಸಿದ್ದರು. ಆದರೆ ಈ ಮೈತ್ರಿಗೆ ಬಹುಮತ ಇಲ್ಲದ ಕಾರಣ ಮಹಾ ವಿಕಾಸ ಅಘಾಡಿ ಸರ್ಕಾರ ಅಸ್ವಿತ್ವಕ್ಕೆ ಬಂದಿತ್ತು.
2019 ರಿಂದ 2022ರವರೆಗೆ ಮಹಾ ವಿಕಾಸ ಅಘಾಡಿ ಸರ್ಕಾರ ಪತನವಾಗುವರೆಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು. ಶಿಂಧೆ ಸರ್ಕಾರ ರಚನೆಯಾದ ಬಳಿಕ ಅಜಿತ್ ಪವಾರ್ ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಆಗಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಅಜಿತ್ ಪವಾರ್ ಮುಂಬೈನಲ್ಲಿ ನಡೆದ ಎನ್‌ಸಿಪಿ ಸಭೆಗೆ ಗೈರಾಗಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಹೊಗಳಿ ಹೇಳಿಕೆ ನೀಡಿದ್ದರು.
ಮೇ ತಿಂಗಳಿನಲ್ಲಿ ಶರದ್ ಪವಾರ್ ಅವರು ಪಕ್ಷದ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸಂದರ್ಭದಲ್ಲಿ ಅಜಿತ್ ಪವಾರ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗಬಹುದು ಎಂದು ವರದಿ ಪ್ರಕಟವಾಗಿತ್ತು.
ಜೂನ್ ತಿಂಗಳಿನಲ್ಲಿ ಎನ್‌ಸಿಪಿ ಪಕ್ಷದ ನಾಯಕತ್ವ ಬದಲಾಯಿತು. ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಇಬ್ಬರನ್ನೂ ಕಾರ್ಯಧಕ್ಷರನ್ನಾಗಿ ನೇಮಿಸಲಾಯಿತು. ಅಜಿತ್ ಪವಾರ್ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಕಾರಣ ಅವರಿಗೆ ಪಕ್ಷದಲ್ಲಿ ಯಾವುದೇ ಮಹತ್ವದ ಜವಾಬ್ದಾರಿ ನೀಡಿರಲಿಲ್ಲ.
ರಾಜಕೀಯ ಎಂಬ ಚದುರಂಗದ ಆಟದಲ್ಲಿ ಅಂದು ಅಘಾಡಿ ಸರ್ಕಾರ ರಚನೆಯಲ್ಲಿ ಶರದ್ ಪವಾರ್ ಮುಖ್ಯ ಪಾತ್ರವನ್ನು ವಹಿಸಿದ್ದರು. ಚುನಾವಣೆಗೂ ಮೊದಲು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಶಿವಸೇನೆ ಜೊತೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಮಾಡಿಕೊಂಡಿದ್ದು ಬಹಳ ಅಚ್ಚರಿಗೆ ಕಾರಣವಾಗಿತ್ತು. ಆದರೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ 1 ವರ್ಷ ಬಾಕಿ ಇರುವಾಗ ಶಿಂಧೆ ಬಣ ಶಿವಸೇನೆ, ಬಿಜೆಪಿ ಜೊತೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮೈತ್ರಿ ಮಾಡಿಕೊಂಡಿದ್ದು ಹುಬ್ಬೇರುವಂತೆ ಮಾಡಿದೆ.
ಶರದ್ ಪವಾರ್ ಏಕಪಕ್ಷೀಯ ನಿರ್ಧಾರಗಳ ಹಿನ್ನಲೆಯಲ್ಲಿ ಎನ್‌ಸಿಪಿಯಲ್ಲಿ ಬಿರುಕು ಏರ್ಪಟ್ಟಿದೆ. ಪಾಟ್ನಾದಲ್ಲಿ ವಿಪಕ್ಷಗಳ ಸಭೆಯಲ್ಲಿ ಭಾಗಿಯಾಗುವ ವಿಚಾರ ಮತ್ತು ಹಾಗೂ ರಾಹುಲ್ ಗಾಂಧಿ ಜೊತೆಗೆ ಕೈ ಜೋಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶರದ್ ಪವರ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದರು. ಶಾಸಕರ ಅಭಿಪ್ರಾಯ ಪಡೆಯದೇ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಹಿನ್ನಲೆಯಲ್ಲಿ ಸಿಟ್ಟಾದ ಶಾಸಕರು ಅಜಿತ್ ಪವಾರ್ ಅವರನ್ನು ಬೆಂಬಲಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ.
ಒಂದು ವೇಳೆ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿದ್ದಲ್ಲಿ ಶಿವಸೇನೆಯೂ ಒಡೆಯುತ್ತಿರಲಿಲ್ಲ, ಎನ್‌ಸಿಪಿಯೂ ಒಡೆಯುತ್ತಿರಲಿಲ್ಲ. ಈಗ ಶಿವಸೇನೆ ಮತ್ತು ಎನ್‌ಸಿಪಿಯ ಮನೆ ಒಡೆದು ಹೋಗಿದೆ. ಇಬ್ಭಾಗವಾಗಿರುವ ಶಿವಸೇನೆ, ಎನ್‌ಸಿಪಿ ಜೊತೆ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಅಧಿಕಾರಕ್ಕೆ ಏರಿದರೆ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನ ಗೆದ್ದರೆ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೆ ಈ ಸರ್ಕಾರದ ಮೇಲೂ ಪರಿಣಾಮ ಬೀರಲಿದೆ.
ಶಿಂಧೆ ನೇತೃತ್ವದ ಸರ್ಕಾರಕ್ಕೆ ಸಂಪೂರ್ಣ ಬಹುಮತ ಇತ್ತು. ಆದರೂ ಲೋಕಸಮರದ ದೃಷ್ಟಿಯಿಂದ `ಆಪರೇಷನ್ ಎನ್‍ಸಿಪಿ’ ಮಾಡಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿತ್ತು. `ಮಹಾ’ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿಯನ್ನು ಹಾಕಿಕೊಂಡಿದ್ದು ಎನ್‍ಸಿಪಿ ಜೊತೆ ಮೈತ್ರಿ ಮಾಡಿಕೊಂಡರೇ ಲಾಭ ಎಂಬ ಲೆಕ್ಕಾಚಾರ ಬಿಜೆಪಿಯದ್ದು. ಕುಸಿದ ಜನಪ್ರಿಯತೆಯನ್ನು ಅಜಿತ್ ಮೂಲಕ ತುಂಬಿಕೊಳ್ಳುವ ಪ್ರಯತ್ನ ಮಾಡಿದ್ದು ಲೋಕ’ಸಮರದ ಹೊತ್ತಿಗೆ `ಅಘಾಡಿ’ಯನ್ನು ಇನ್ನಷ್ಟು ದುರ್ಬಲಗೊಳಿಸಲು ಬಿಜೆಪಿ ಮುಂದಾಗಿದೆ.
Web Stories