ಮುಂಬೈ: ಅಜಿತ್ ಪವಾರ್ (Ajit Pawar) ಅವರ ಮರಣದಿಂದ ತೆರವಾದ ಮಹಾರಾಷ್ಟ್ರ (Maharashtra) ಉಪಮುಖ್ಯಮಂತ್ರಿ ಸ್ಥಾನಕ್ಕೆ ಅವರ ಪತ್ನಿ ಸುನೇತ್ರಾ ಪವಾರ್ (Sunetra Pawar) ಅವರ ಹೆಸರನ್ನು ಪಕ್ಷ ಪ್ರಸ್ತಾಪಿಸಿಸಲು ಮುಂದಾಗಿದೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮೂಲಗಳು ತಿಳಿಸಿವೆ. ಸುನೇತ್ರಾ ಪವಾರ್ ಅವರು ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ.
ಸುನೇತ್ರಾ ಪವಾರ್ ಅವರನ್ನು ರಾಜ್ಯ ಸಚಿವಾಲಯಕ್ಕೆ ಸೇರಿಸಿಕೊಳ್ಳಬೇಕೆಂದು ಸಾರ್ವಜನಿಕರು ಬಯಸುತ್ತಿದ್ದಾರೆ ಎಂದು ಎನ್‌ಸಿಪಿಯ ಹಿರಿಯ ನಾಯಕ ಮತ್ತು ಮಹಾರಾಷ್ಟ್ರದ ಸಚಿವ ನರಹರಿ ಜಿರ್ವಾಲ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಇದನ್ನೂ ಓದಿ: ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಜಿತ್ ಪವಾರ್ ಅಂತ್ಯಕ್ರಿಯೆ
ಎನ್‌ಸಿಪಿಯ ಹಿರಿಯ ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್, ಧನಂಜಯ್ ಮುಂಡೆ ಮತ್ತು ಸುನಿಲ್ ತತ್ಕರೆ ಅವರು ಈ ಬಗ್ಗೆ ಸುನೇತ್ರಾ ಪವಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಜಿತ್ ಪವಾರ್ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಸುನೇತ್ರಾ ಪವಾರ್ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರ ಚರ್ಚಿಸಲು ಎನ್‌ಸಿಪಿ ನಾಯಕರು ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಜ.28 ರಂದು ಬಾರಾಮತಿಯಲ್ಲಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಚಾರ್ಟರ್ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿತ್ತು. ಈ ಅವಘಡದಲ್ಲಿ ಅವರು ಸೇರಿದಂತೆ ಅವರ ಭದ್ರತಾ ಸಿಬ್ಬಂದಿ ವಿದೀಪ್ ಜಾಧವ್, ಫ್ಲೈಟ್ ಅಟೆಂಡೆಂಟ್ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಮತ್ತು ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್ ಮೃತಪಟ್ಟಿದ್ದರು. ಇದನ್ನೂ ಓದಿ: ದಟ್ಟ ಮಂಜಿನಿಂದಾಗಿ ವಿಮಾನ ಪತನ; ವಾಚ್, ಬಟ್ಟೆಯಿಂದ ಅಜಿತ್ ಪವಾರ್ ಗುರುತು ಪತ್ತೆ

