ನವದೆಹಲಿ: NCERT ಪಠ್ಯಪುಸ್ತಕ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ (Union Government) ಸುಪ್ರೀಂ ಕೋರ್ಟ್ (Supreme Court) ಮುಂದೆ ಬೇಷರತ್ ಕ್ಷಮೆಯಾಚಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದ ಮುಂದೆ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾವು ಬೇಷರತ್ ಕ್ಷಮೆಯಾಚಿಸುತ್ತೇವೆ. ಈ ವಿಚಾರವನ್ನು ನಾವು ಸಮರ್ಥಿಸುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ವಿವಾದಾತ್ಮಕ ಅಧ್ಯಾಯವನ್ನು ಸಿದ್ಧಪಡಿಸಿದ ಇಬ್ಬರು ವ್ಯಕ್ತಿಗಳು ಸಚಿವಾಲಯ ಅಥವಾ ಯಾವುದೇ ಇತರ ಸಚಿವಾಲಯದೊಂದಿಗೆ ಸಂಬಂಧ ಹೊಂದಿಲ್ಲಎಂದು ಭರವಸೆ ನೀಡಿದರು.
ಸಿಜೆಐ ಪ್ರತಿಕ್ರಿಯಿಸಿ, ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರದ ಕುರಿತು ಸಂಪೂರ್ಣ ಅಧ್ಯಾಯವನ್ನು ಮೀಸಲಿಟ್ಟಿದ್ದರೂ ಈ ಪಠ್ಯದಿಂದ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ಬಗ್ಗೆ ಪಾತ್ರವನ್ನು ಮರೆ ಮಾಚುತ್ತದೆ. ಪ್ರಜಾಪ್ರಭುತ್ವದ ರಚನೆಯ ಸಂರಕ್ಷಣೆಯಲ್ಲಿ ಸಂಸ್ಥೆಯು ವಹಿಸಿದ ಪಾತ್ರವನ್ನು ಗುರುತಿಸುವಲ್ಲಿ ಪಠ್ಯವು ವಿಫಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಹಳ ಚೆನ್ನಾಗಿ ಯೋಚಿಸಿ ಯೋಜಿತವಾಗಿ ಪಠ್ಯವನ್ನು ರೂಪಿಸಲಾಗಿದೆ. ನಾನು ಈ ವಿಚಾರಣೆಯನ್ನು ಮುಕ್ತಾಯಗೊಳಿಸುವುದಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ಕಂಡುಹಿಡಿಯುತ್ತೇವೆ. ನ್ಯಾಯಾಲಯವು ಸಂಪೂರ್ಣವಾಗಿ ತೃಪ್ತಿ ಹೊಂದುವವರೆಗೆ ಈ ಪ್ರಕರಣ ಮುಂದುವರಿಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡಲ್ಲ – NCERT ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯದ ಬಗ್ಗೆ ಸುಪ್ರೀಂ ಗರಂ
ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿ, ಈ ಪ್ರಕರಣವನ್ನು ಸಮರ್ಥಿಸಿಕೊಂಡರೆ ಅದು ತಪ್ಪಾಗುತ್ತದೆ. ಭವಿಷ್ಯದಲ್ಲಿ ಯಾವುದೇ ಇಲಾಖೆಯು ಈ ರೀತಿಯ ತಪ್ಪು ಮಾಡದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಪರಿಷ್ಕೃತ ಪಠ್ಯದಲ್ಲಿ ಏನಿದೆ?
ಎನ್‌ಸಿಇಆರ್‌ಟಿಯು 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಹಾಗೂ ‘ಸಾಕಷ್ಟು ಪ್ರಕರಣಗಳು ಬಾಕಿ’ ವಿಷಯಗಳನ್ನು ಸೇರಿಸಿವೆ. ‘ಸಮಾಜದಲ್ಲಿ ನ್ಯಾಯಾಂಗ ಪಾತ್ರ’ ಶೀರ್ಷಿಕೆಯ ಅಧ್ಯಾಯದಲ್ಲಿ ಈ ವಿಚಾರಗಳು ಇವೆ. ‘ನ್ಯಾಯದಾನ ವಿಳಂಬವಾದರೆ ನ್ಯಾಯ ನಿರಾಕರಿಸಿದಂತೆ’ ಹಾಗೂ ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಎಂಬ ಭಾಗಗಳಲ್ಲಿ ಭ್ರಷ್ಟಾಚಾರ ಹಾಗೂ ಪ್ರಕರಣಗಳ ಬಾಕಿ ಸೇರಿದಂತೆ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಲಾಗಿದೆ.

