ನವದೆಹಲಿ: ಕೊರಿಯರ್ (Courier) ಒಂದರಲ್ಲಿ ಸುಮಾರು 900 ಕೋಟಿ ರೂ. ಮೌಲ್ಯದ 82.53 ಕೆಜಿ ಹೈಗ್ರೇಡ್ ಕೊಕೇನ್‌ನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಲ್ಲಿ (Delhi) ಅಧಿಕಾರಿಗಳು ನಡೆಸಿದ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿ 900 ಕೋಟಿ ರೂ. ಮೌಲ್ಯದ ಉನ್ನತ ದರ್ಜೆಯ ಕೊಕೇನ್‌ನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಗುಜರಾತ್‌ನಲ್ಲೂ ಅಧಿಕಾರಿಗಳು 700 ಕೆಜಿ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಒಂದೇ ದಿನ ಡ್ರಗ್ಸ್ ವಿರುದ್ಧದ ಪ್ರಮುಖ ಕಾರ್ಯಾಚರಣೆ ನಡೆದಿದೆ. ಇದು ಮಾದಕ ದ್ರವ್ಯ ಮುಕ್ತ ಭಾರತವನ್ನು ನಿರ್ಮಿಸುವ ಮೋದಿ ಸರ್ಕಾರದ ಅಚಲ ಸಂಕಲ್ಪವನ್ನು ತೋರಿಸುತ್ತದೆ ಎಂದು ಅವರು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಡ್ರಗ್ ಸಿಂಡಿಕೇಟ್‌ನ್ನು ವಿದೇಶಗಳಲ್ಲಿನ ಗುಂಪು ನಡೆಸುತ್ತಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ವಶಪಡಿಸಿಕೊಂಡ ಕೊಕೇನ್‌ನ ಒಂದು ಭಾಗವನ್ನು ಕೊರಿಯರ್ ಕಾರ್ಗೋ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸಲು ತಯಾರಿ ನಡೆದಿತ್ತು. ಇನ್ನೂ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಗುಪ್ತ ಹೆಸರುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.