ರಾಯ್ಪುರ: ಚಲಿಸುತ್ತಿದ್ದ ಬಸ್ಸೊಂದನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿ ನಕ್ಸಲರು ಅಟ್ಟಹಾಸ ಮೆರೆದ ಘಟನೆ ಛತ್ತಿಸ್‍ಗಢದಲ್ಲಿ ನಡೆದಿದೆ.
ಛತ್ತೀಸ್‍ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರದಂದು ನಕ್ಸಲರ ಗುಂಪೊಂದು ಸಾರ್ವಜನಿಕರ ಮೇಲೆ ಅಟ್ಟಹಾಸ ಮೆರೆದಿದೆ. ಸಂಜೆ ಬಿಜಾಪುರದಿಂದ ಬೆದ್ರೆ ಪ್ರದೇಶಕ್ಕೆ ಖಾಸಗಿ ಬಸ್ ತೆರಳುತಿತ್ತು. ಈ ವೇಳೆ ಕುತ್ರಿ ಹಾಗೂ ಫರ್ಸೆಗಢ ಗ್ರಾಮದ ನಡುವೆ ಬಸ್ಸಿಗೆ ನಕ್ಸಲರು ಬೆಂಕಿ ಹಚ್ಚಿ ಕ್ರೌರ್ಯ ಮೆರೆದು ಪ್ರಯಾಣಿಕರನ್ನು ಹೆದರಿಸಿದ್ದಾರೆ.
Advertisement
Advertisement
ಬಸ್ಸಿಗೆ 10ರಿಂದ 12 ಮಂದಿ ನಕ್ಸಲರು ಮೊದಲು ಅಡ್ಡಕಟ್ಟಿ, ಪ್ರಯಾಣಿಕರನ್ನು ಹೆದರಿಸಿ ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಬಳಿಕ ಬಸ್ಸಿಗೆ ಬೆಂಕಿ ಹಾಕಿದ್ದು, ವಾಹನ ಸಂಪೂರ್ಣ ಸುಟ್ಟುಹೋಗಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.
Advertisement
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಭದ್ರತಾ ಪಡೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಬಸ್ತರ್ ಪ್ರದೇಶದಲ್ಲಿ ನಕ್ಸಲರು `ಜನ್ ಪಿತೂರಿ’ಯನ್ನು ಜೂನ್ 5ರಿಂದ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಹೀಗಾಗಿ ಈ ರೀತಿ ಕೃತ್ಯವೆಸೆಗಿರಬಹುದು ಎಂದು ಭದ್ರತಾ ಸಿಬ್ಬಂದಿ ಶಂಕಿಸಿದ್ದಾರೆ.
Advertisement
ಪ್ರತಿ ವರ್ಷನಕ್ಸಲ್ ಪಡೆಯಲ್ಲಿ ಹತರಾದ ನಾಯಕರಿಗೆ ನಮನ ಸಲ್ಲಿಸಲಾಗುತ್ತದೆ. ಹೀಗಾಗಿ ಪ್ರತಿ ವರ್ಷ ಜೂನ್ ತಿಂಗಳಲ್ಲಿ ತಮ್ಮ ತಂಡಕ್ಕೆ ಹೊಸ ಅಭ್ಯರ್ಥಿಗಳನ್ನು ಸೇರಿಸಿಕೊಂಡು ತಮ್ಮ ನಾಯಕರನ್ನು ನಕ್ಸಲರು ನೆನೆಯುತ್ತಾರೆ ಇದನ್ನ `ಜನ್ ಪಿತೂರಿ’ ಎಂದು ಕರೆಯಲಾಗುತ್ತದೆ. ಹೀಗಾಗಿ ತಮ್ಮ ಗುರಿ, ವಿಚಾರಗಳ ಬಗ್ಗೆ ಪ್ರಚಾರ ಮಾಡಲು ಹಾಗೂ ತಮ್ಮ ಬಗ್ಗೆ ಜನರಲ್ಲಿ ಭಯ ಹುಟ್ಟಿಸಲು ಈ ರೀತಿ ನಕ್ಸಲರು ಕೃತ್ಯ ಎಸಗುತ್ತಾರೆ.