ರಾಯಚೂರು: 25 ವರ್ಷಗಳ ನಂತರ ರಾಯಚೂರಿನಲ್ಲಿ ಮಾಜಿ ನಕ್ಸಲನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
1994, 2001ರ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿನೋದ ಅಲಿಯಾಸ್ ದೊಡ್ಡಪಾಳ್ಯ ನರಸಿಂಹಮೂರ್ತಿ ಅಲಿಯಾಸ್ ಮೂರ್ತಿ ಬಂಧಿತ ಆರೋಪಿ. ಸ್ವರಾಜ್ ಇಂಡಿಯಾ ಪಕ್ಷದಲ್ಲಿ ಸಕ್ರಿಯನಾಗಿರುವ ವಿನೋದ್ ಪತ್ರಕರ್ತನೂ ಆಗಿದ್ದ, ಹಲವಾರು ಹೋರಾಟಗಳಲ್ಲೂ ಭಾಗಿಯಾದ್ದ.
ವಾರೆಂಟ್ ಇದ್ದರೂ 2001ರ ನಂತರ ತಲೆಮರೆಸಿಕೊಂಡಿದ್ದ. ಇದೀಗ ಪೊಲೀಸರು ಬಂಧಿಸಿ ರಾಯಚೂರಿನ 3ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈತನ ವಿರುದ್ಧ ರಾಯಚೂರು ಗ್ರಾಮೀಣ, ಯಾಪಲದಿನ್ನಿ, ನೇತಾಜಿನಗರ ಪೊಲೀಸ್ ಠಾಣೆಗಳಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದ್ದವು.
ಕೊಲೆಯತ್ನ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಗಳಡಿ ಈತ ಆರೋಪಿಯಾಗಿದ್ದಾನೆ. ಕರ್ನಾಟಕ ವಿಮೋಚನಾ ರಂಗದಲ್ಲಿದ್ದ ವಿನೋದ ಹೆಸರು ಬದಲಾಯಿಸಿಕೊಂಡು ಬೇರೆ ಬೇರೆ ಹೆಸರುಗಳಲ್ಲಿ ಓಡಾಡಿಕೊಂಡಿದ್ದ. ಸ್ಥಳೀಯ ಸಾಕ್ಷಿ ಆಧಾರದಲ್ಲಿ ಗುರುತು ಸಿಕ್ಕಿದ್ದರಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ವಿನೋದ್ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ, ಪ್ರಗತಿಪರ ಎನ್ನುವ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ. ಅವರು ತಲೆ ಮರೆಸಿಕೊಂಡಿರಲಿಲ್ಲ ವಿವಿಧ ಸಮಾಜಿಕ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೋರಾಟಗಾರ ಜನಶಕ್ತಿ ಸಂಘಟನೆಯ ಕುಮಾರ ಸಮತಾಳ ಹೇಳಿದ್ದಾರೆ.