ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ರಾಜಕಾರಣಿಗಳು ಭಾರತದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ಮಾತನಾಡುತ್ತಿದ್ದಂತೆ ಈಗ ಮಾಜಿ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನ ಕಾರ್ಗಿಲ್ ಯುದ್ಧ ಮಾಡಿದ್ದು ತಪ್ಪು ಎಂದು ಅಧಿಕೃತವಾಗಿ ಹೇಳಿದ್ದಾರೆ.
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee ) ಜೊತೆ 1999 ರಲ್ಲಿ ಸಹಿ ಹಾಕಿದ್ದ ಒಪ್ಪಂದವನ್ನು ನಾವು ಉಲ್ಲಂಘನೆ ಮಾಡಿದ್ದೆವು ಎಂದು ನವಾಜ್ ಷರೀಫ್ (Nawaz Sharif) ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
Advertisement
ಸುಪ್ರೀಂ ಕೋರ್ಟ್ 6 ವರ್ಷ ಅನರ್ಹಗೊಳಿಸಿದ ನಂತರ ಇಂದು ಲಾಹೋರ್‌ನಲ್ಲಿ (Lahore) ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಪಕ್ಷದ ಅಧ್ಯಕ್ಷರನ್ನಾಗಿ ನವಾಜ್ ಷರೀಫ್ ಅವರನ್ನು ಮರು ಆಯ್ಕೆ ಮಾಡಲಾಯಿತು.
Advertisement
Advertisement
ಈ ವೇಳೆ ಅವರು ಮಾತನಾಡಿದ ಅವರು, ಮೇ 28, 1998 ರಂದು, ಪಾಕಿಸ್ತಾನವು ಐದು ಪರಮಾಣು ಪರೀಕ್ಷೆಗಳನ್ನು (Nuclear Test) ನಡೆಸಿತು. ಅದರ ನಂತರ ವಾಜಪೇಯಿ ಅವರು ಇಲ್ಲಿಗೆ ಬಂದು ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡರು. ಆದರೆ ನಾವು ಆ ಒಪ್ಪಂದವನ್ನು ಉಲ್ಲಂಘಿಸಿ ಕಾರ್ಗಿಲ್ ಯುದ್ಧ (Kargil War) ಮಾಡಿದೆವು. ಇದು ನಾವು ಮಾಡಿದ ತಪ್ಪು ಎಂದು ಹೇಳಿದರು.
Advertisement
ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಪರಮಾಣು ಪರೀಕ್ಷೆಗಳನ್ನು ನಡೆಸುವುದನ್ನು ತಡೆಯಲು ಪಾಕಿಸ್ತಾನಕ್ಕೆ 5 ಬಿಲಿಯನ್ ಡಾಲರ್ ನೀಡುವುದಾಗಿ ಹೇಳಿದ್ದರು. ಆದರೆ ನಾನು ಈ ಪ್ರಸ್ತಾಪವನ್ನು ನಿರಾಕರಿಸಿದೆ. ಒಂದು ವೇಳೆ ನನ್ನ ಸ್ಥಾನದಲ್ಲಿ ಇಮ್ರಾನ್ ಖಾನ್ ಇದ್ದಿದ್ದರೆ ಕ್ಲಿಂಟನ್ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಿದ್ದರು ಎಂದು ತಿಳಿಸಿದರು.
1999ರಲ್ಲಿ ಏನಾಗಿತ್ತು?
ಐತಿಹಾಸಿಕ ಶೃಂಗಸಭೆಯ ನಂತರ ನವಾಜ್ ಷರೀಫ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಫೆಬ್ರವರಿ 21, 1999 ರಂದು ಲಾಹೋರ್ ಘೋಷಣೆಗೆ ಸಹಿ ಹಾಕಿದ್ದರು. ಉಭಯ ದೇಶಗಳ ನಡುವಿನ ಶಾಂತಿ ಮತ್ತು ಸ್ಥಿರತೆಯ ಕಾಪಾಡುವ ದೃಷ್ಟಿಯಿಂದ ಈ ಐತಿಹಾಸಿಕ ಒಪ್ಪಂದ ಭಾರೀ ಮಹತ್ವ ಪಡೆದಿತ್ತು. ಇದನ್ನೂ ಓದಿ: ಚನ್ನಗಿರಿ ಗಲಭೆ ಕೇಸ್ – ಬಂಧನ ಭೀತಿಯಿಂದ ಗ್ರಾಮವನ್ನೇ ತೊರೆದ ಜನ
ಈ ಒಪ್ಪಂದ ನಡೆದ ಬಳಿಕ ಪಾಕಿಸ್ತಾನವು ತನ್ನ ಪಡೆಗಳನ್ನು ಮತ್ತು ಅರೆಸೈನಿಕ ಪಡೆಗಳನ್ನು ಆಪರೇಷನ್ ಬದ್ರ್ ಅಡಿಯಲ್ಲಿ ಎಲ್‍ಒಸಿಯ(ಗಡಿ ನಿಯಂತ್ರಣ ರೇಖೆ) ಭಾರತದ ಕಾರ್ಗಿಲ್‌ಗೆ ರಹಸ್ಯವಾಗಿ ಕಳುಹಿಸಿತ್ತು. ನಂತರ ಪಾಕಿಸ್ತಾನವು ಕಾರ್ಗಿಲ್‍ನ 130 ರಿಂದ 200 ಚದರ ಕಿ.ಮೀ ನಡುವಿನ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಈ ವಿಚಾರ ಭಾರತೀಯ ಸೈನಿಕರಿಗೆ ತಿಳಿದ ಬಳಿಕ ಮೇ 3 ರಿಂದ ಯುದ್ಧ ಆರಂಭವಾಯಿತು. ಮೂರು ತಿಂಗಳು ಕಾದಾಟ ನಡೆದು ಜುಲೈ 26ರಂದು ಆಕ್ರಮಿತ ಭಾರತೀಯ ಪ್ರದೇಶಗಳನ್ನು ತೊರೆಯುವಂತೆ ಪಾಕಿಸ್ತಾನಿ ಪಡೆಗಳಿಗೆ ಸೂಚಿಸುವ ಮೂಲಕ ಯುದ್ಧ ಕೊನೆಗೊಂಡಿತು.
ಅಚ್ಚರಿಯ ವಿಷಯ ಏನೆಂದರೆ ನಾವು ಭಾರತದ ಮೇಲೆ ದಾಳಿ ಮಾಡುತ್ತಿದ್ದೇವೆ ಎಂಬ ವಿಚಾರ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರಿಗೆ ತಿಳಿದಿರಲಿಲ್ಲ. ಕಾರ್ಗಿಲ್ ಯುದ್ಧದ ಹಿಂದಿನ ಮಾಸ್ಟರ್ ಮೈಂಡ್ ಪಾಕಿಸ್ತಾನದ ಆಗಿನ ಆರ್ಮಿ ಜನರಲ್ ಪರ್ವೇಜ್ ಮುಷರಫ್, ಪಾಕಿಸ್ತಾನ್ ಎಕ್ಸ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮಹ್ಮದ್ ಅಹ್ಮದ್, ಮೇಜರ್ ಜನರಲ್ ಜಾವೇದ್ ಹಸನ್, ಪಾಕಿಸ್ತಾನದ ಸೇನೆಯ ಮೇಜರ್ ಜನರಲ್ ಅಶ್ರಫ್ ರಶೀದ್ ಆಗಿದ್ದರು.
ಕಾರ್ಗಿಲ್ ಬೆಟ್ಟದ ಎತ್ತರದ ಪ್ರದೇಶದಲ್ಲಿ ಪಾಕ್ ಸೈನಿಕರು ಅವಿತಿದ್ದರೆ ಭಾರತದ ಸೈನಿಕರು ಕೆಳಗಡೆ ಇದ್ದರು. ಭಾರತ ಸೈನಿಕರ ಚಲನವಲನಗಳನ್ನು ತಿಳಿದುಕೊಳ್ಳುತ್ತಿದ್ದ ಪಾಕ್ ಸೈನಿಕರು ಸುಲಭವಾಗಿ ಮೇಲಿನಿಂದ ದಾಳಿ ಮಾಡುತ್ತಿದ್ದರು. ಪರಿಸ್ಥಿತಿ ಕಠಿಣವಾಗಿದ್ದರೂ ಕಾರ್ಗಿಲ್‍ನ್ನು ರಕ್ಷಿಸಲು ಭಾರತ ವಿಶೇಷ ಪಡೆಗಳೊಂದಿಗೆ ಸುಮಾರು 30,000 ಸೈನಿಕರನ್ನು ಕಾರ್ಗಿಲ್ ದ್ರಾಸ್ ಪ್ರದೇಶಕ್ಕೆ ಕಳುಹಿಸಿತ್ತು. ಈ ಯುದ್ಧದಲ್ಲಿ 527ಕ್ಕೂ ಹೆಚ್ಚು ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು.