ಕಾರವಾರ: ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿದ್ದ ಅವಶೇಷಗಳ ಚಿತ್ರಗಳನ್ನು ಭಾರತೀಯ ನೌಕಾಸೇನೆಯು ಇಂದು ಬಿಡುಗಡೆಗೊಳಿಸಿದೆ.
ಮಲ್ಪೆಯಿಂದ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ಮಾಲ್ವಾನ್‍ನ ಅರಬ್ಬೀ ಸಮುದ್ರದಲ್ಲಿ ಡಿಸೆಂಬರ್ 16 ರಂದು ಮುಳುಗಡೆಯಾಗಿ ನಾಪತ್ತೆಯಾಗಿತ್ತು. ನಾಲ್ಕು ತಿಂಗಳ ಹುಡುಕಾಟದ ನಂತರ ಕೆಲ ದಿನಗಳ ಹಿಂದಷ್ಟೇ ಬೋಟಿನ ಅವಶೇಷಗಳು ನೌಕಾಸೇನೆ ಮಲ್ಪೆಯ ಮೀನುಗಾರರೊಂದಿಗೆ ತೆರಳಿ ಪತ್ತೆ ಹಚ್ಚಿತ್ತು.
ಉಡುಪಿಯ ಮಲ್ಪೆ ಬಂದರಿನಿಂದ ಹೊರಟಿದ್ದ ಬೋಟ್ ನಲ್ಲಿ ಉತ್ತರಕನ್ನಡ ಜಿಲ್ಲೆಯ 5, ಉಡುಪಿಯ ಇಬ್ಬರು ಸೇರಿ 7 ಮಂದಿ ಮೀನುಗಾರಿಕೆಗೆ ತೆರಳಿದ್ದು, ಎಲ್ಲರೂ ಬೋಟ್ ನಲ್ಲಿ ಜಲಸಮಾಧಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ನೌಕಾದಳದವರು ಮಾಹಿತಿಯನ್ನು ಹೊರಹಾಕಬೇಕಿದೆ.
ಡಿಸೆಂಬರ್ 13 ರಂದು ಉಡುಪಿಯ ಮಲ್ಪೆಯಿಂದ ಹೊರಟ ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ರತ್ನಗಿರಿ ಪ್ರದೇಶದ ಸಮುದ್ರದಲ್ಲಿ ಡಿಸೆಂಬರ್ 15 ರ ರಾತ್ರಿ 1 ಘಂಟೆ ವರೆಗೆ ಸಂಪರ್ಕದಲ್ಲಿತ್ತು. ನಂತರ ಸಂಪರ್ಕ ಕಳೆದುಕೊಂಡಿತ್ತು. ಸಹಜವಾಗಿ ಮೀನುಗಾರರು ಅಪಾಯದಲ್ಲಿ ಸಿಲುಕಿದಾಗ ಜಿಪಿಎಸ್ ಅಥವಾ ಮೊಬೈಲ್ ಸಂಪರ್ಕ ದಲ್ಲಿ ಒಬ್ಬರಿಗೊಬ್ಬರು ಸಂಪರ್ಕದಲ್ಲಿರುತ್ತಾರೆ. ಆದರೆ ಸುವರ್ಣ ತ್ರಿಭುಜ ಬೋಟ್ ನ ಯಾವೊಬ್ಬ ಮೀನುಗಾರರೂ ಬೇರೆ ಮೀನುಗಾರರ ಸಂಪರ್ಕ ಮಾಡಿಲ್ಲ. ಇದಲ್ಲದೇ ಜಿಪಿಎಸ್ ಮೊಬೈಲ್ ಸಿಗ್ನಲ್ ಸಹ ಸಂಪರ್ಕ ಕಳೆದುಕೊಂಡಿತ್ತು. ಈ ಕಾರಣದಿಂದ ಯಾವುದೋ ಕಡಲಗಳ್ಳರು ಬೋಟನ್ನು ಅಪಹರಿಸಿರಬಹುದು ಎಂದು ಹೇಳಲಾಗಿತ್ತು.
ಕಾಣೆಯಾದ ಒಂದೂವರೆ ತಿಂಗಳಲ್ಲಿ ಬೋಟಿನ ಮೀನು ತುಂಬುವ ಬಾಕ್ಸ್ ಸಿಕ್ಕಿದ್ದು ಯಾವುದೋ ಹಡಗು ಡಿಕ್ಕಿ ಹೊಡೆದಿದೆ ಎನ್ನಲಾಗಿತ್ತು. ಇದರ ಅವಶೇಷಗಳು ಅಥವಾ ಮೀನುಗಾರರ ಶವವಾದರೂ ಸಿಗಬೇಕಿತ್ತು, ಅದೂ ಕೂಡ ದೊರೆಯದೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ನೌಕಾದಳ ನಿರಂತರ ಐದು ತಿಂಗಳಿಂದ ಹುಡುಕಾಟ ನಡೆಸಿ ಮಹಾರಾಷ್ಟ್ರದ ಮಲ್ವಾನ್ ನ ಕಡಲತೀರದಿಂದ ಅರಬ್ಬೀ ಸಮುದ್ರದ 33 ಕಿಲೋಮೀಟರ್ ದೂರದಲ್ಲಿ ಅವಶೇಷಗಳನ್ನು ಪತ್ತೆ ಮಾಡಿದೆ.