ಮುಂಬೈ: ಓಮನ್ ಕರಾವಳಿಯಲ್ಲಿ ಇರಾನಿನ (Iran) ಮೀನುಗಾರಿಕಾ ಹಡಗಿನಲ್ಲಿದ್ದ ಪಾಕಿಸ್ತಾನಿ (Pakistan) ಸಿಬ್ಬಂದಿಗೆ ಭಾರತೀಯ ನೌಕಾಪಡೆ (Indian Navy) ತುರ್ತು ವೈದ್ಯಕೀಯ ನೆರವು ನೀಡಿ, ಮಾನವೀಯತೆ ಮೆರೆದಿದೆ.
ಹಡಗಿನ ಸಿಬ್ಬಂದಿಯೊಬ್ಬರು ಎಂಜಿನ್‌ನ ಕೆಲಸ ಮಾಡುವಾಗ ಅವರ ಕೈ ಬೆರಳುಗಳಿಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಈ ವೇಳೆ ಇರಾನಿನ ಧೋ ಅಲ್ ಒಮೀದಿಯಿಂದ ಬಂದ ತುರ್ತು ಕರೆಗೆ ಭಾರತೀಯ ನೌಕಪಡೆ ಸ್ಪಂದಿಸಿದೆ. ಬಳಿಕ ಓಮನ್ ಕರಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕಾಪಡೆಯ ರಹಸ್ಯ ಯುದ್ಧನೌಕೆ ಐಎನ್ಎಸ್ ತ್ರಿಕಾಂಡ್ (INS Trikand), ತಕ್ಷಣವೇ ಘಟನಾ ಸ್ಥಳಕ್ಕೆ ತಲುಪಿದೆ. ಅಲ್ಲದೇ ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಿದೆ. ಇದನ್ನೂ ಓದಿ: ಅಯೋಧ್ಯೆ ಸೂರ್ಯ ತಿಲಕದ ವೇಳೆಯೇ ರಾಮಸೇತು ದರ್ಶನ ಪಡೆದ ಮೋದಿ
ತ್ರಿಕಂಡ್‌ನ ವೈದ್ಯಕೀಯ ಸಿಬ್ಬಂದಿ ಅರಿವಳಿಕೆ ನೀಡಿ, ಬೆರಳುಗಳಿಗೆ ಹೊಲಿಗೆ ಹಾಕಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ಮಾಡಿದರು. ಚಿಕಿತ್ಸೆಯಿಂದಾಗಿ ಕೈ ಬೆರಳುಗಳ ಶಾಶ್ವತವಾಗಿ ಕಳೆದುಕೊಳ್ಳುವುದನ್ನು ತಡೆಯಲಾಯಿತು. ಅಲ್ಲದೇ ಇರಾನ್ ತಲುಪುವವರೆಗೆ ಗಾಯಗೊಂಡ ಸಿಬ್ಬಂದಿಗೆ ಅಗತ್ಯ ಔಷಧವನ್ನು ನೀಡಲಾಯಿತು ಎಂದು ನೌಕಾಪಡೆ ತಿಳಿಸಿದೆ.
ಮೀನುಗಾರಿಕಾ ಬೋಟ್‌ನಲ್ಲಿ 11 ಪಾಕಿಸ್ತಾನಿಗಳು (ಒಂಬತ್ತು ಬಲೂಚ್ ಮತ್ತು ಇಬ್ಬರು ಸಿಂಧಿ) ಮತ್ತು ಐದು ಇರಾನಿನ ಸಿಬ್ಬಂದಿ ಇದ್ದರು. ಗಾಯಗೊಂಡ ಪಾಕಿಸ್ತಾನಿ (ಬಲೂಚ್) ಪ್ರಜೆಯ ಕೈಗೆ ತೀವ್ರ ಗಾಯಗಳಾಗಿತ್ತು. ಇದರ ಪರಿಣಾಮವಾಗಿ ಭಾರೀ ರಕ್ತಸ್ರಾವವಾಗಿತ್ತು ಎಂದು ನೌಕಾಪಡೆ ತಿಳಿಸಿದೆ.
ತಮ್ಮ ಸಿಬ್ಬಂದಿಯ ಜೀವವನ್ನು ಉಳಿಸುವಲ್ಲಿ ನೆರವು ನೀಡಿದ್ದಕ್ಕೆ ಭಾರತೀಯ ನೌಕಾಪಡೆಗೆ ಹಡಗಿನ ಸಿಬ್ಬಂದಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ ಮಾಡಿದ ಮೋದಿ – ಈ ಸೇತುವೆ ವಿಶೇಷತೆ ಏನು?