ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಬರುವ ನವರಾತ್ರಿ ಹಬ್ಬವನ್ನು (Navratri Festival) ಹಿಂದೂಗಳು (Hindu) ವೈಭವದಿಂದ ಆಚರಿಸುತ್ತಾರೆ. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ (Ayudha Puja) ವಿಶೇಷ ಮಹತ್ವವಿದೆ.
ಆಯುಧಗಳನ್ನು ಪೂಜಿಸುವ ಮತ್ತು ಅವುಗಳಿಗೆ ಕೃತಜ್ಞರಾಗಿರುವ ದಿನವೇ ಆಯುಧ ಪೂಜೆ. ರೈತರು ನೇಗಿಲು ಕೃಷಿಗೆ ಬಳಸುವ ವಸ್ತುಗಳಿಗೆ ಪೂಜೆ ಮಾಡಿದರೆ ಸೈನಿಕರು ಬಂದೂಕು, ಫಿರಂಗಿ, ಯುದ್ಧ ಟ್ಯಾಂಕರ್, ವಿಮಾನಗಳಿಗೆ ಪೂಜೆ ಮಾಡುತ್ತಾರೆ. ಮನೆಯಲ್ಲಿರುವ ಪುಟಾಣಿಯ ಸೈಕಲಿನಿಂದ ಹಿಡಿದು ದೊಡ್ಡ ವಾಹನಗಳಿಗೆ ಪೂಜೆ ನಡೆದರೆ ಕಚೇರಿಗಳಲ್ಲಿ ಕಂಪ್ಯೂಟರ್, ಉತ್ಪಾದನಾ ಯಂತ್ರಗಳಿಗೆ ಪೂಜೆ ನಡೆಯುತ್ತದೆ. ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ಉಪಕರಣಗಳನ್ನು ಪೂಜಿಸುತ್ತಾರೆ, ಕಲೆಗೆ ಸಂಬಂಧಿಸಿದ ಜನರು ತಮ್ಮ ವಾದ್ಯಗಳನ್ನು ಪೂಜಿಸುತ್ತಾರೆ. ಈ ದಿನ ವಸ್ತುಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ.
Advertisement
ಆಯುಧ ಪೂಜೆಯು ದುರ್ಗಾ ಮಾತೆಯನ್ನು ಪೂಜಿಸಿದರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ. ರಾಜರ ಆಡಳಿತ ಅವಧಿಯಲ್ಲಿ ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ಯುದ್ಧಕ್ಕೆ ಹೊರಟರೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಇತ್ತು. ಈ ಕಾರಣಕ್ಕೆ ನವಮಿಯಂದೇ ಪೂಜೆ ಸಲ್ಲಿಸಿ ಜೈತ್ರಯಾತ್ರೆಗೆ ತೆರಳುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದೆ. ಸಾಂಕೇತಿಕವಾಗಿ ಕೆಲ ರಾಜವಂಶಸ್ಥರು ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಮರಳುತ್ತಾರೆ. ಇದನ್ನೂ ಓದಿ: ಕೈ ಬೀಸಿ ಕರೆಯುತ್ತಿದೆ ಮಂಗಳೂರು ದಸರಾ – ಬರೋಬ್ಬರಿ 22 ಲಕ್ಷ ಬಲ್ಬುಗಳಿಂದ ಅಲಂಕಾರ
Advertisement
Advertisement
ಪೌರಾಣಿಕ ಕಥೆ ಏನು?
ಆಯುಧ ಪೂಜೆಯ ಹಿಂದೆ ಪೌರಾಣಿಕ ಕಥೆಯೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು (Pandavas) 12 ವರ್ಷಗಳ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡುತ್ತಾರೆ. ಅಜ್ಞಾತವಾಸವನ್ನು ಮತ್ಸ್ಯನಗರದ ವಿರಾಟರಾಯನ ಅರಮನೆಯಲ್ಲಿ ಕಳೆಯುತ್ತಾರೆ. ಅಜ್ಞಾತಕ್ಕೆ ತೆರಳುವ ಮುನ್ನ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಬನ್ನಿ ವೃಕ್ಷದಲ್ಲಿ ಅಡಗಿಸಿ ಇಡುತ್ತಾರೆ.
Advertisement
ವಿರಾಟನ ಆಸ್ಥಾನದಲ್ಲಿ ಆಗ ಧರ್ಮರಾಜ ಕಂಕಭಟ್ಟ, ಭೀಮ ಬಾಣಸಿಗನಾದ ವಲಲನಾಗಿ, ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ವೇಷ ಧರಿಸಿದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಆಪ್ತ ಸಖಿಯಾಗಿ ಕೆಲಸ ಮಾಡುತ್ತಿರುತ್ತಾಳೆ.
ಅಜ್ಞಾತ ವಾಸದ ಕೊನೆಯಲ್ಲಿ ವಿರಾಟರಾಯನ ಗೋವುಗಳನ್ನು ಕೌರವರು ಅಪಹರಿಸುತ್ತಾರೆ. ಈ ವೇಳೆ ವಿರಾಟ ರಾಜನ ಪುತ್ರ ಉತ್ತರ ಕುಮಾರ ಕುರು ಸೇನೆಯನ್ನು ಸೋಲಿಸಿ ಗೋವುಗಳನ್ನು ನಾನು ತರುತ್ತೇನೆ ಎಂದು ಜಂಬ ಕೊಚ್ಚಿಕೊಳ್ಳುತ್ತಾನೆ. ಈತನ ರಥಕ್ಕೆ ಸಾರಥಿಯಾಗಿ ಬೃಹನ್ನಳೆಯಾಗಿರುವ ಅರ್ಜುನನು ತೆರಳುತ್ತಾನೆ. ಕೌರವರ ಬಾಣಗಳನ್ನು ನೋಡಿ ರಥ ತಿರುಗಿಸುವಂತೆ ಉತ್ತರ ಕುಮಾರ ಬೃಹನ್ನಳೆಯ ಬಳಿ ಪರಿ ಪರಿಯಾಗಿ ಕೇಳುತ್ತಾನೆ. ಇದಕ್ಕೆ ಒಪ್ಪದ ಅರ್ಜುನ ಶಮಿ ವೃಕ್ಷದ ಬಳಿ ಬಂದು ಆಯುಧ ಇಳಿಸುತ್ತಾನೆ. ಅರ್ಜುನ ತನ್ನ ಗಾಂಡೀವವನ್ನು ಧರಿಸಿ ಯುದ್ಧ ಮಾಡಿ ಗೋವುಗಳನ್ನು ಕೌರವರ ಸೆರೆಯಿಂದ ಬಿಡಿಸುತ್ತಾನೆ. ಪಾಂಡವರು 12 ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.
ಹಿಂದೆ ರಾಜರಿಗೆ ಆಯುಧಗಳ ಬಹಳ ಮುಖ್ಯವಾಗಿದ್ದವು. ಈ ಕಾರಣಕ್ಕೆ ನಮ್ಮನ್ನು ರಕ್ಷಿಸುವ ಕತ್ತಿ, ಖಡ್ಗಗದಂತಹ ಆಯುಧಗಳಿಗೆ ಒಂದು ದಿನ ವಿರಾಮ ನೀಡಿ ಅವುಗಳಿಗೆ ಕೃತಜ್ಞತೆ ಅರ್ಪಿಸಲು ಆಯುಧ ಪೂಜೆ ದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ. ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ.