ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವಳ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ತಲೆಯ ಕೂದಲೂ ಬಿಟ್ಟುಕೊಂಡು ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುತ್ತಿರುವ ಮಾಲೆ ಇದ್ದು, ಮೂರುಕಣ್ಣುಗಳಿವೆ. ಈ ಮೂರು ಕಣ್ಣುಗಳು ಬ್ರಹ್ಮಾಂಡದಂತೆ ಗೋಲವಾಗಿದೆ. ಇವುಗಳ ಕಿರಣಗಳು ವಿದ್ಯುತ್ತಿನಂತೆ ಪಸರಿಸಿಕೊಂಡಿವೆ. ಇವಳ ವಾಹನ ಕತ್ತೆಯಾಗಿದ್ದು ನಾಲ್ಕು ಭುಜಗಳನ್ನು ಹೊಂದಿದ್ದಾಳೆ.
ಮೇಲಕ್ಕೆ ಎತ್ತಿರುವ ಬಲಕೈಯ ವರಮುದ್ರೆಯಿಂದ ಎಲ್ಲರಿಗೂ ವರದಾನ ನೀಡಿದರೆ ಕೆಳಗಿನ ಬಲಕೈಯಲ್ಲಿ ಅಭಯ ಮುದ್ರೆ ಇದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಕಾಲರಾತ್ರಿ ದುರ್ಗೆಯ ಸ್ವರೂಪವು ನೋಡಲು ಅತ್ಯಂತ ಭಯಂಕರವಾಗಿ ಕಂಡರೂ ಇವಳು ಶುಭಫಲವನ್ನೇ ನೀಡುವ ಕಾರಣ ಈಕೆಯನ್ನು ಶುಭಂಶರೀ ಎಂದು ಕರೆಯುತ್ತಾರೆ.
ನವರಾತ್ರಿಯ ಏಳನೇ ದಿನ ಕಾಲರಾತ್ರಿಯ ಉಪಾಸನೆಯ ವಿಧಾನವಿದೆ. ಈ ದಿನ ಸಾಧಕನ ಮನಸ್ಸು ‘ಸಹಸ್ರಾರ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಅವನಿಗಾಗಿ ಬ್ರಹ್ಮಾಂಡದ ಎಲ್ಲ ಸಿದ್ಧಿಗಳ ಬಾಗಿಲು ತೆರೆದುಕೊಳ್ಳುತ್ತದೆ. ಈ ಚಕ್ರದಲ್ಲಿ ಸ್ಥಿತವಾದ ಸಾಧಕನ ಮನಸ್ಸು ಪೂರ್ಣವಾಗಿ ತಾಯಿ ಕಾಲರಾತ್ರಿಯ ಸ್ವರೂಪದಲ್ಲೇ ಸ್ಥಿರವಾಗುತ್ತದೆ. ಅವಳ ಸಾಕ್ಷಾತ್ಕಾರದಿಂದ ಸಿಗುವ ಪುಣ್ಯಕ್ಕೆ ಅವನು ಭಾಗಿಯಾಗುತ್ತಾನೆ. ಅವನ ಸಮಸ್ತ ಪಾಪ-ವಿಘ್ನಗಳ ನಾಶವಾಗುತ್ತದೆ. ಅವನಿಗೆ ಅಕ್ಷಯ ಪುಣ್ಯ ಲೋಕಗಳ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ. ಇದನ್ನೂ ಓದಿ: ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ
ಜಗನ್ಮಾತೆಯ ಕಾಲರಾತ್ರಿಯು ದುಷ್ಟರ ವಿನಾಶ ಮಾಡುವವಳಾಗಿದ್ದಾಳೆ. ದಾನವ, ದೈತ್ಯ, ರಾಕ್ಷಸ, ಭೂತ-ಪ್ರೇತ ಮುಂತಾದವು ಇವಳ ಸ್ಮರಣೆಯಿಂದಲೇ ಭಯಭೀತರಾಗಿ ಓಡಿ ಹೋಗುತ್ತವೆ. ಇವಳು ಗ್ರಹಬಾಧೆಗಳನ್ನೂ ಕೂಡ ದೂರ ಮಾಡುತ್ತಾಳೆ. ಇವಳ ಉಪಾಸಕರಿಗೆ ಅಗ್ನಿಯ, ಜಲ, ಶತು, ಮತ್ತು ರಾತ್ರಿಯ ಭಯ ಮುಂತಾದವುಗಳು ಎಂದೂ ಆಗುವುದಿಲ್ಲ. ಇವಳ ಕೃಪೆಯಿಂದ ಅವನು ಸರ್ವಥಾ ಭಯ ಮುಕ್ತನಾಗಿ ಹೋಗುತ್ತಾನೆ.
ಕಾಲರಾತ್ರಿ ದೇವಿಯ ಸ್ವರೂಪದ ವಿಗ್ರಹವನ್ನು ತನ್ನ ಹೃದಯದಲ್ಲಿ ನೆಲೆಗೊಳಿಸಿ ಮನುಷ್ಯನು ಏಕನಿಷ್ಠ ಭಾವದಿಂದ ಅವಳ ಉಪಾಸನೆ ಮಾಡಬೇಕು. ಯಮ, ನಿಯಮ, ಸಂಮಯವನ್ನು ಅವನು ಪೂರ್ಣವಾಗಿ ಪಾಲಿಸಬೇಕಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ