ನವರಾತ್ರಿ ಹಬ್ಬವು ಅಕ್ಟೋಬರ್ 15ರಿಂದ ಪ್ರಾರಂಭವಾಗಿ ಅಕ್ಟೋಬರ್ 24ರಂದು ಕೊನೆಗೊಳ್ಳುತ್ತದೆ. ನವರಾತ್ರಿ ಭಾರತದಲ್ಲಿ 9 ದಿನಗಳ ಕಾಲ ನಡೆಯುವ ಹಬ್ಬವಾಗಿದೆ. ನವರಾತ್ರಿಯು ದೇವಿ ದುರ್ಗೆಯ ಮತ್ತು ಅವಳ 9 ರೂಪಗಳ ಆಚರಣೆಯಾಗಿದ್ದು, ಹಿಂದೂಗಳು ಈ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸುತ್ತಾರೆ. ದೇವಿ ದುರ್ಗೆಯ ಒಂಬತ್ತು ರೂಪಗಳನ್ನು ನೋಡುವುದಾದರೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ಆದಿ ಶಕ್ತಿಯ ಈ 9 ರೂಪಗಳನ್ನು ನವದುರ್ಗೆ ಎಂದು ಕರೆಯಲಾಗುತ್ತದೆ. ಈ ಹಬ್ಬವು ವಿಜಯದಶಮಿ ಆಚರಣೆಗಳೊಂದಿಗೆ ಕೊನೆಗೊಳ್ಳುತ್ತದೆ. ಮೊದಲನೇ ದಿನ ಪೂಜಿಸಲ್ಪಡುವ ಶೈಲಪುತ್ರಿಯ ಮಹತ್ವವನ್ನು ಇಲ್ಲಿ ವಿವರಿಸಲಾಗಿದೆ.
ಶೈಲ ಪುತ್ರಿಯ ಮಹತ್ವ:
ಪರ್ವತರಾಜ ಹಿಮವಂತನ ಪುತ್ರಿಯೇ ಶೈಲ ಪುತ್ರಿ. ಈ ದೇವಿಯ ಅವತಾರದ ಹಿಂದೆ ಒಂದು ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ವರಿಸಿದಳು. ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ, ಕುತ್ತಿಗೆಯಲ್ಲಿ ನಾಗರ ಹಾವನ್ನು ಸುತ್ತಿಕೊಂಡಿರುವ ಶಿವನಿಗಿಂತ, ಚೆಲುವೆಯಾಗಿರುವ ತನ್ನ ಮಗಳಿಗೆ ಉತ್ತಮ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.
Advertisement
ಶಿವನ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ದಕ್ಷ ಒಮ್ಮೆ ಒಂದು ದೊಡ್ಡ ಯಜ್ಞವನ್ನು ಆಯೋಜಿಸಿದ್ದ. ಈ ಯಜ್ಞಕ್ಕೆ ಆಗಮಿಸುವಂತೆ ಎಲ್ಲಾ ಮಕ್ಕಳಿಗೆ, ಬಂಧುಮಿತ್ರರಿಗೆ ಆಹ್ವಾನ ನೀಡಿದ್ದ. ಈ ಸಮಾರಂಭಕ್ಕೆ ದಕ್ಷ ಪ್ರವೇಶಿಸುತ್ತಿದ್ದಂತೆ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಈಗ ದಕ್ಷ, ಶಿವ ದೇವರು ಆಗಿರಬಹುದು. ಆದರೆ ಅವನಿಗೆ ನಾನು ಮಾವ. ಸಂಬಂಧದಲ್ಲಿ ನಾನು ಆತನಿಗಿಂತ ದೊಡ್ಡವ. ಶಿವ ಎದ್ದು ನಿಂತು ನನಗೆ ಗೌರವ ನೀಡಬಹುದಿತ್ತು. ಈ ರೀತಿ ಅಗೌರವ ಸಲ್ಲಿಸಿದ್ದು ಸರಿಯಲ್ಲ ಎಂದು ಮನಸ್ಸಿನಲ್ಲೇ ಉರಿದು ಬಿದ್ದ. ಇದಕ್ಕೆ ಪ್ರತೀಕಾರವೆಂಬಂತೆ ದಕ್ಷ ಶಿವನಿಗೆ ಅವಮಾನ ಮಾಡಬೇಕೆಂದು ಇನ್ನೊಂದು ಯಜ್ಞವನ್ನು ಆಯೋಜಿಸಿದ. ಆದರೆ ಮಗಳು ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಹ್ವಾನ ನೀಡದೇ ಉಳಿದ ಎಲ್ಲಾ ಮಕ್ಕಳಿಗೂ ಆಹ್ವಾನ ನೀಡಿದ್ದ.
Advertisement
ತಂದೆಯು ಯಾಗವನ್ನು ಆಯೋಜಿಸಿರುವುದನ್ನು ತಿಳಿದ ದಾಕ್ಷಾಯಿಣಿ ಶಿವನೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣವೇ ಎಂದು ಕೇಳುತ್ತಾಳೆ. ಅದಕ್ಕೆ ಶಿವ ಯಾವುದೇ ಶುಭ ಸಮಾರಂಭಕ್ಕೆ ಆಹ್ವಾನ ಇಲ್ಲದೇ ಹೋಗಬಾರದು. ತವರು ಮನೆಯಾದರೂ ಹೋಗಬಾರದು ಎಂದು ಹೇಳುತ್ತಾನೆ. ಇದಕ್ಕೆ ದಾಕ್ಷಾಯಿಣಿ ಕೆಲಸದ ಒತ್ತಡದಲ್ಲಿ ಯಾವುದೋ ಅನಿವಾರ್ಯ ಕಾರಣದಿಂದಾಗಿ ತಂದೆಗೆ ಮರೆತು ಹೋಗಿರಬಹುದು. ತವರು ಮನೆಗೆ ಹೋಗಲು ಮಗಳಿಗೆ ಏಕೆ ಆಹ್ವಾನ ಬೇಕು ಎಂದು ಪ್ರಶ್ನಿಸುತ್ತಾಳೆ. ತೆರಳುವುದು ಬೇಡ ಎಂದು ಹೇಳಿದರೂ ಪತ್ನಿ ದಾಕ್ಷಾಯಿಣಿಯ ಹಠಕ್ಕೆ ಕರಗಿ ಶಿವ ಅನುಮತಿ ನೀಡುತ್ತಾನೆ.
Advertisement
ಶಿವನಿಂದ ಅನುಮತಿಯನ್ನು ಪಡೆದು ದಾಕ್ಷಾಯಿಣಿ ತಂದೆಯ ಯಾಗಕ್ಕೆ ಹೋಗುತ್ತಾಳೆ. ಆದರೆ ದಕ್ಷನು ಯಾಗಕ್ಕೆ ಬಂದ ಮಗಳನ್ನು ನೋಡಿ ನಾನು ಆಹ್ವಾನ ನೀಡದಿದ್ದರೂ ಬಂದಿದ್ದು ಯಾಕೆ? ನಿನ್ನ ಪತಿಯನ್ನೂ ಕರೆದುಕೊಂಡು ಬಂದಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾನೆ. ತಂದೆ ಮನ ನೋಯಿಸಿದರೂ ನೋವನ್ನು ತಡೆದುಕೊಳ್ಳುತ್ತಾಳೆ. ಯಜ್ಞ ಆರಂಭವಾದ ಬಳಿಕವೂ ದಕ್ಷ ಮತ್ತೆ ಶಿವನನ್ನು ಅವಮಾನಿಸುತ್ತಾನೆ. ಎಲ್ಲರ ಮುಂದೆ ಪತಿಗೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿ ತನ್ನ ಮುಂದಿದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ. ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸಿ ಶೈಲ ಪುತ್ರಿ ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಾಳೆ. ಮತ್ತೆ ಶಿವನ ಮಡದಿ ಸತಿಯಾಗಿ ಹೆಸರು ಪಡೆಯುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.
Advertisement
ಶೈಲಪುತ್ರಿಯ ಸ್ವರೂಪ ಹೇಗೆ?
ಶೈಲ ಪುತ್ರಿಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ. ಆಕೆಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ವೃಷರುಧ ಎಂದೂ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿದ್ದಾಳೆ. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲಪುತ್ರಿ ಮಲ್ಲಿಗೆ ಪ್ರಿಯಳು.
ಶೈಲಪುತ್ರಿಯ ರೂಪವೂ ನಾವು ಪಾಲಿಸಬೇಕಾದ ಬದುಕಿನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಪರ್ವತರಾಜನ ಮಗಳಾಗಿ ಪರ್ವತ ಎಂದರೆ ಪ್ರಕೃತಿಯನ್ನು ಪ್ರೀತಿಸಿ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವಳು. ಗೂಳಿಯ ಮೇಲೆ ಕುಳಿತಿರುವ ಮೂಲಕ ಮೂಕಪ್ರಾಣಿಗಳು ದೇವ- ದೇವತೆಯರ ವಾಹನವಾಗಿದ್ದು ಅವುಗಳನ್ನು ಹಿಂಸಿಸಬಾರದೆಂಬುದರ ಸಂಕೇತ ನೀಡುತ್ತಾಳೆ. ಒಂದು ಕೈಯಲ್ಲಿರುವ ತ್ರಿಶೂಲ ತಾಪತ್ರಯಗಳ ನಿವಾರಣೆಯ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ದೃಷ್ಟಿ ಹಾಯಿಸಬಾರದು, ಅದರಿಂದ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುದನ್ನು ಸಾರುತ್ತದೆ. ಇನ್ನೊಂದು ಕೈಯಲ್ಲಿರುವ ಕಮಲವು ಕೋಮಲವಾದ ಎಸಳುಗಳುಳ್ಳ, ನೀರಿನಲ್ಲಿ ಅರಳುವ ಸುಂದರ ಹೂವು ವಿನಯ ಮತ್ತು ತಾಳ್ಮೆಯ ಸಂಕೇತ. ಇದು ತಿಳಿಯಾದ ಮನಸ್ಸಿನಲ್ಲಿ ತಳಮಳವಿರುವುದಿಲ್ಲ ಎಂಬುದನ್ನು ಸೂಚಿಸುತ್ತದೆ.
Web Stories