ದುಷ್ಟತನದ ವಿರುದ್ಧ ದೈವತ್ವದ ವಿಜಯವನ್ನು ಸಾರುವ ಹಬ್ಬವೇ ವಿಜಯದಶಮಿ. ಇದನ್ನು ಅಶ್ವಯುಜ ಮಾಸದ ಶುಕ್ಲ ಪಕ್ಷದ ಹತ್ತನೆಯ ದಿನದಂದು ಆಚರಿಸುತ್ತಾರೆ. ಈ ದಿನವು ಶರದ್ ನವರಾತ್ರಿಯ ಕೊನೆಯ ದಿನವಾಗಿರುತ್ತದೆ. ಮೂಲತಃ ಈ ದಿನವನ್ನು ಆದಿ ಶಕ್ತಿಯು ಶುಂಭ ಮತ್ತು ನಿಶುಂಭರ ಮೇಲೆ ಸಾಧಿಸಿದ ಜಯದ ನೆನಪಿಗಾಗಿ ಆಚರಿಸಲಾಗುತ್ತದೆ. ಇದು ದೈವತ್ವವು ದುಷ್ಟ ಶಕ್ತಿಗಳ ಅಟ್ಟಹಾಸದ ಮೇಲೆ ಸಾಧಿಸಿದ ಮೇಲೆ ಜಯದ ಆಚರಣೆಯಾಗಿರುತ್ತದೆ. ಇನ್ನೂ ಕುತೂಹಲಕಾರಿ ವಿಚಾರವೇನೆಂದರೆ, ಈ ದಿನವು ಇನ್ನೂ ಹಲವಾರು ಜಯಗಳನ್ನು ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದೆ.
ದಶಕಂಠನ ಮೇಲೆ ಶ್ರೀರಾಮನ ವಿಜಯ:
ವಿಜಯದಶಮಿಯನ್ನು ರಾವಣನ ಮೇಲೆ ಶ್ರೀರಾಮಚಂದ್ರನು ಸಾಧಿಸಿದ ವಿಜಯದ ನೆನಪಿಗಾಗಿ ಸಹ ಆಚರಿಸಲಾಗುತ್ತದೆ. ಸೀತಾ ಮಾತೆಯನ್ನು ಲಂಕೆಯಿಂದ ಬಿಡಿಸಿಕೊಂಡು ಹೋಗಲು ಬಂದ ಶ್ರೀರಾಮನು ರಾವಣನನ್ನು ಸಂಹರಿಸುತ್ತಾನೆ. ಇದರ ನೆನಪಿನಾರ್ಥವಾಗಿ ರಾವಣನ ಪ್ರತಿಕೃತಿಗಳನ್ನು ದಹನ ಮಾಡುತ್ತಾರೆ. ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲುವು ಸಾಧಿಸಿದ ಧ್ಯೋತಕ ಎಂದು ನಂಬಲಾಗುತ್ತದೆ. ರಾವಣನಿಗೆ ಹತ್ತು ತಲೆಗಳು ಇದ್ದವು. ಇವೆಲ್ಲವೂ ರಾವಣನಿಗೆ ಅಸಾಧ್ಯವಾದ ಅಹಂ ಅನ್ನು ನೀಡಿದ್ದವು. ಈ ಹತ್ತು ತಲೆಗಳನ್ನು ಸಂಹರಿಸಿದ ದಿನವೇ ‘ದಶ ಹರ’ ಎಂದು ಕರೆಯಲ್ಪಟ್ಟಿತು. ಮುಂದೆ ಇದೇ ಜನರ ಬಾಯಲ್ಲಿ ದಸರಾ ಎಂದು ಬದಲಾಯಿತು. ಅಹಂ ಅನ್ನು ಓಡಿಸುವ ದಿನ ಇದು ಎಂದು ಸಹ ಕರೆಯಲ್ಪಡುತ್ತದೆ.
Advertisement
ಪಾಂಡವರ ವನವಾಸ ಅಂತ್ಯಗೊಂಡ ದಿನ:
ಮಹಾಭಾರತದಲ್ಲಿ ಪಾಂಡವರ ಅಜ್ಞಾತವಾಸವು ಅಂತ್ಯಗೊಂಡ ದಿನವೇ ‘ವಿಜಯದಶಮಿ’. ಕೌರವರ ಜೊತೆಗೆ ನಡೆದ ಪಗಡೆಯಾಟದಲ್ಲಿ ಸೋತು, ನಿಯಮದ ಪ್ರಕಾರ ಹನ್ನೆರಡು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತ ವಾಸವನ್ನು ಮಾಡಿದ ಪಾಂಡವರು, ತಮ್ಮ ಅಜ್ಞಾತವಾಸವನ್ನು ಮುಗಿಸಿ, ತಮ್ಮ ರಾಜ್ಯವನ್ನು ತಮಗೆ ನೀಡಿರಿ ಎಂದು ಕೇಳಲು ಬಂದರು. ಆ ಕ್ರಿಯೆಗೆ ಮುನ್ನುಡಿ ಹಾಡಿದ ವಿರಾಟನ ಗೋಗ್ರಹಣಕ್ಕೆ ಪ್ರತಿಯಾಗಿ ಯುದ್ಧವೊಂದು ನಡೆಯಿತು. ಆ ಯುದ್ಧ ನಡೆದಿದ್ದು ವಿಜಯದಶಮಿಯಂದು.
Advertisement
ದಕ್ಷಿಣ ಭಾರತದಲ್ಲಿ ವಿಜಯದಶಮಿಯನ್ನು ಚಾಮುಂಡೇಶ್ವರಿ ಅಥವಾ ದುರ್ಗಾ ದೇವಿಯ ಆರಾಧನೆ ಮಾಡಲು ಆಚರಿಸುತ್ತಾರೆ. ದೇವಾನುದೇವತೆಗಳ ಬಣ್ಣ ಬಣ್ಣದ ಬೊಂಬೆಗಳನ್ನು ತಯಾರಿಸಿ ಮನೆಗಳಲ್ಲಿ ಇಡುತ್ತಾರೆ. ಇದನ್ನು ತಮಿಳು ನಾಡಿನಲ್ಲಿ ‘ಗೋಲು’ ಎಂದು, ಕರ್ನಾಟಕದಲ್ಲಿ ‘ಗೊಂಬೆ ಹಬ್ಬ’ ಎಂದು ಕರೆಯುತ್ತಾರೆ. ಕೇರಳದಲ್ಲಿ, ವಿಜಯದಶಮಿಯ ದಿನ ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ಈ ದಿನ ಎಳೆಯ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡುತ್ತಾರೆ. ಈ ದಿನ ವಿದ್ಯಾಭ್ಯಾಸವನ್ನು ಆರಂಭಿಸಲು ಒಳ್ಳೆಯ ದಿನ ಎಂಬ ನಂಬಿಕೆ ಇದೆ.
Advertisement
Advertisement
ಕೆಟ್ಟದ್ದರ ವಿರುದ್ಧ ಒಳ್ಳೆಯದು ಸಾಧಿಸಿದ ಗೆಲುವನ್ನು ಆಚರಿಸಲು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಯಾವುದೇ ಧರ್ಮ, ಮತಗಳ ಭೇದವಿಲ್ಲದೆ ಹಲವರು ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲರಿಗೂ ಸಿಹಿಗಳನ್ನು ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಶಾಂತಿ ಮತ್ತು ಸೌಹಾರ್ದತೆಯ ಜೊತೆಗೆ ಸಂಪತ್ತನ್ನು ಕರುಣಿಸು ಎಂದು ದೇವಿಯನ್ನು ಪ್ರಾರ್ಥಿಸುತ್ತಾರೆ. ಜೊತೆಗೆ ಸುಗ್ಗಿಯ ಕಾಲವನ್ನು ಬರಮಾಡಿಕೊಳ್ಳಲು ಈ ಹಬ್ಬದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.
Web Stories