ನವರಾತ್ರಿಯ ಎಂಟನೆಯ ದಿನ ದುರ್ಗಾ ದೇವಿಯ 9 ಅವತಾರಗಳಲ್ಲಿ ಎಂಟನೆಯ ಅವತಾರವಾದ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತದ ಮಗಳೆಂದು ಹೇಳಲಾಗುತ್ತದೆ. ಗೂಳಿ ಮೇಲೆ ಪ್ರಯಾಣಿಸುವ ಗೌರಿಯು ತನ್ನ ಕೈಯಲ್ಲಿ ತ್ರಿಶೂಲ, ಡಮರುಗವನ್ನು ಹಿಡಿದು ಕೊಂಡು ಬಿಳಿ ವಸ್ತ್ರವನ್ನು ಧರಿಸಿರುತ್ತಾಳೆ. ಆಕೆಯ ಮುಖವು ತಂಪಾಗಿರುವ ಚಂದ್ರನಂತೆ ಕಂಗೊಳಿಸುತ್ತಿದ್ದು, ಭಕ್ತರಿಗೆ ಅಭಯ ನೀಡುತ್ತಾಳೆ ಎಂಬ ಪ್ರತೀತಿ ಇದೆ.
ಮಹಾಗೌರಿಯ ಕಥೆ:
ಒಮ್ಮೆ ತಾಯಿ ದುರ್ಗೆಯು ಭೂಮಿ ಮೇಲೆ ಜನ್ಮವನ್ನು ಪಡೆದಳು. ಆದರೆ ಆಕೆ ಮರಳಿ ದೇವ ಲೋಕಕ್ಕೆ ಹೋಗಲು ಶಿವನನ್ನು ಒಲಿಸಿಕೊಳ್ಳಲು ಹಲವಾರು ತಪಸ್ಸನ್ನು ಮಾಡುತ್ತಾಳೆ. ಆಕೆ ತಪಸ್ಸಿನಲ್ಲಿ ಸಂಪೂರ್ಣವಾಗಿ ಮಗ್ನಳಾಗಿರುವ ವೇಳೆ ದೇಹದಲ್ಲಿ ಧೂಳು ಹಾಗೂ ಕೊಳೆ ತುಂಬಿತ್ತದೆ.
ಆಹಾರ ಹಾಗೂ ನೀರನ್ನು ಬಿಟ್ಟು ಘೋರ ತಪಸ್ಸಿನಲ್ಲಿ ತೊಡಗಿದ್ದ ಕಾರಣ ಬಿಸಿಲಿನಿಂದಾಗಿ ಆಕೆಯ ದೇಹವು ಕಪ್ಪಾಗುತ್ತದೆ. ಆಕೆ ಸಾವಿರಾರು ವರ್ಷಗಳ ಕಾಲ ಹೀಗೆ ದೀರ್ಘ ತಪಸ್ಸಿನಲ್ಲಿರುತ್ತಾಳೆ. ಕೊನೆಗೆ ಆಕೆಯ ಭಕ್ತಿಗೆ ಮೆಚ್ಚಿದ ಶಿವನು, ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಇಳಿಸುತ್ತಾನೆ. ಇದರಿಂದಾಗಿ ಮಹಾಗೌರಿಯು ಕಾಂತಿಯುತ, ಬಿಳಿ ಹಾಗೂ ಧ್ಯಾನಾಸಕ್ತಳಾಗಿದ್ದಾಳೆ ಎಂಬ ನಂಬಿಕೆ ಜನಜನಿತವಾಗಿದೆ.
ಮಹಾಗೌರಿ ತಾಯಿಯ ಪೂಜೆಯ ಮಹತ್ವ:
ಮಹಾಗೌರಿಯು ರಾಹುವಿನ ಅಧಿಪತಿಯಾಗಿದ್ದಾಳೆ. ಜನ್ಮ ಕುಂಡಲಿಯಲ್ಲಿ ರಾಹುವಿನಿಂದ ಆಗಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಿ, ತನ್ನ ಭಕ್ತರಿಗೆ ಸಮೃದ್ಧಿ ಹಾಗೂ ಆಧ್ಯಾತ್ಮಿಕ ಧಾನ್ಯ ನೀಡುತ್ತಾಳೆ. ಮನಸ್ಸಿನಲ್ಲಿರುವಂತಹ ಗೊಂದಲ ನಿವಾರಣೆ ಮಾಡಿ, ಯಶಸ್ವಿ ಜೀವನ ಸಾಗಿಸಲು ಹಾದಿ ತೋರುವವಳು ಎಂದು ಹೇಳಲಾಗುತ್ತದೆ.
ಮಹಾಗೌರಿಯ ಪೂಜಾ ವಿಧಾನ:
ಮಹಾಗೌರಿ ದೇವಿಯ ಪೂಜೆಗೆ ರಾತ್ರಿ ಅರಳುವಂತಹ ಮಲ್ಲಿಗೆಯ ಹೂವು ಬಹಳ ವಿಶೇಷ ಪುಷ್ಪ. ಪೂಜೆಯ ವೇಳೆ ಗುಲಾಬಿ ಬಣ್ಣದ ವಸ್ತ್ರವನ್ನು ಧರಿಸಿರಬೇಕು. ಭಕ್ತಿ ಹಾಗೂ ಶ್ರದ್ಧೆಯಿಂದ ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯ ಪೂಜೆ ಮಾಡಬೇಕು. ಗಣೇಶನ ಪ್ರಾರ್ಥನೆಯ ಮೂಲಕ ಪೂಜೆ ಆರಂಭಿಸಿ, ತಾಯಿಗೆ ಷೋಡೋಶೋಪಚಾರ ಪೂಜೆ ಸಲ್ಲಿಸಬೇಕು. ಬಳಿಕ ಮಂಗಳಾರತಿ ಮಾಡಿದಲ್ಲಿ ದೇವಿ ಪುನೀತಳಾಗುತ್ತಾಳೆ.
Web Stories