ದೇಶಾದ್ಯಂತ ವಿವಿಧೆಡೆ ವಿವಿಧ ರೀತಿಯಲ್ಲಿ ನವರಾತ್ರಿ ಹಬ್ಬ (Navaratri Festival) ಆಚರಿಸಲಾಗುತ್ತದೆ. 9 ದಿನಗಳ ಕಾಲ ಆಚರಿಸುವ ಪ್ರಮುಖ ಹಿಂದೂ ಹಬ್ಬಗಳಲ್ಲಿ ಇದೂ ಒಂದು. ಆ 9 ದಿನಗಳು ನವದುರ್ಗೆಯರಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗುತ್ತವೆ. ಎಲ್ಲೆಲ್ಲೂ ರಂಗುರಂಗಾದ ಬಣ್ಣಗಳು ಹಬ್ಬದಲ್ಲಿ ಮೇಳೈಸುತ್ತವೆ. ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿರುತ್ತವೆ. ನವರಾತ್ರಿಯ 9 ಬಣ್ಣಗಳ ವಿಶೇಷತೆ ಏನು ಎಂಬುದನ್ನು ಯೋಚಿಸಿದ್ದೀರಾ? ಹೌದು, ನವರಾತ್ರಿಯ 9 ಬಣ್ಣಗಳಿಗೆ ಒಂದೊಂದು ಅರ್ಥವಿದೆ. ಆ ಒಂದೊಂದು ಬಣ್ಣಗಳು ನವದುರ್ಗೆಯರನ್ನು ಪ್ರತಿನಿಧಿಸುತ್ತವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ…..
ಮೊದಲ ದಿನ
ನವರಾತ್ರಿಯ ಮೊದಲ ದಿನ ಹಳದಿ ಬಣ್ಣದ ಸಂಕೇತವಾಗಿರುತ್ತದೆ. ಪರ್ವತಗಳ ತಾಯಿ ಶೈಲಪುತ್ರಿಯನ್ನು ಈ ಬಣ್ಣ ಪ್ರತಿನಿಧಿಸುತ್ತದೆ. ತಾಯಿ ಶೈಲಪುತ್ರಿ ದೇವಿಯು ಪರಿಸರದ ತಾಯಿಯಾಗಿದ್ದು ಶಕ್ತಿ ಸ್ವರೂಪಿಣಿ ಕೂಡ ಹೌದು. ಹಳದಿಯು ಉಜ್ವಲತೆ, ಖುಷಿ ಮತ್ತು ಉತ್ಸಾಹದ ಸಂಕೇತ. ನವರಾತ್ರಿಯ ಶುಭಾರಂಭಕ್ಕೆ ಹಳದಿಯು ಒಂದು ಶಕ್ತಿಯಾಗಿದೆ.
2ನೇ ದಿನ
ನವರಾತ್ರಿಯ 2ನೇ ದಿನವು ಬ್ರಹ್ಮಚಾರಿಣಿ ಮಾತೆಗೆ ಅರ್ಪಣೆ. ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಕಠಿಣ ತಪಸ್ಸು ಮಾಡಿದ್ದರಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ಬ್ರಹ್ಮಚಾರಿಣಿಯ ತಪಸ್ಸಿಗೆ ಮೆಚ್ಚಿ ಶಿವನು ಒಲಿಯುತ್ತಾನೆ. ಈ ದಿನ ಬಿಳಿ ಬಣ್ಣದ ಸಂಕೇತವಾಗಿದೆ. ಶ್ವೇತ ವರ್ಣವು ಶಾಂತಿಯನ್ನು ಸೂಚಿಸುತ್ತದೆ.
3ನೇ ದಿನ
ನವರಾತ್ರಿಗಳಲ್ಲಿ ಬರುವ 9 ವರ್ಣಗಳಲ್ಲಿ ಕೆಂಪು ಬಣ್ಣ ಅತ್ಯಂತ ಶಕ್ತಿಶಾಲಿ. ಈ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಪ್ರಕಾಶಮಾನವಾದ ಕೆಂಪು ಹೂವುಗಳಿಂದ ಮನೆಯನ್ನು ಅಲಂಕರಿಸಬಹುದು. ಜೊತೆಗೆ ಕೆಂಪು ಬಣ್ಣದ ಹಣ್ಣುಗಳನ್ನ ಪ್ರಸಾದವಾಗಿ ಅರ್ಪಿಸಬೇಕು. ಕೆಂಪು ಬಣ್ಣವು ಕೋಪದ ಸಂಕೇತ.
4ನೇ ದಿನ
ಕೂಷ್ಮಾಂಡ ದೇವಿಗೆ ನವರಾತ್ರಿಯ 4ನೇ ದಿನ ಅರ್ಪಣೆ. ಅಂದು ನೀಲಿ ಬಣ್ಣದ ಬಟ್ಟೆ ಧರಿಸಬೇಕು. ಈ ವರ್ಣವನ್ನು ಕೂಷ್ಮಾಂಡ ದುರ್ಗಾದೇವಿ ಮೆಚ್ಚಿಸಲು ಬಳಸಲಾಗುತ್ತದೆ. ನವರಾತ್ರಿಯಲ್ಲಿ ನೀಲಿ ಬಣ್ಣದ ಬಟ್ಟೆ ಧರಿಸಿ ದೇವಿಯನ್ನ ಪೂಜಿಸುವುದರಿಂದ ಆರೋಗ್ಯ, ಆಯಸ್ಸು, ಸಂಪತ್ತು ಲಭಿಸುತ್ತದೆ ಅನ್ನುವುದು ನಂಬಿಕೆ.
5ನೇ ದಿನ
ನವರಾತ್ರಿಯ 5ನೇ ದಿನವು ತಾಯಿ ಸ್ಕಂದಮಾತೆಗೆ ಅರ್ಪಣೆ. ಕಾರ್ತಿಕೇಯ ಅಥವಾ ಸ್ಕಂದನ ತಾಯಿಯೇ ಸ್ಕಂದ ಮಾತೆ. ಯುದ್ಧದ ಸಮಯದಲ್ಲಿ ಪೂಜಿಸುವ ದೇವಿ ಇವಳು. ಕೇಸರಿ ಬಣ್ಣವು ಖುಷಿ ಹಾಗೂ ಶಕ್ತಿಯ ಸಂಕೇತವಾಗಿರುವುದರಿಂದ ಅಂದು ಕೇಸರಿ ಬಣ್ಣವನ್ನು ಬಳಸಿದರೆ ಒಳಿತು.
6ನೇ ದಿನ
ನವರಾತ್ರಿಯ 6ನೇ ದಿನವು ಕಾತ್ಯಾಯನಿ ದೇವಿಗೆ ಮೀಸಲು. ಈ ದೇವಿಯ ಪ್ರಕಾಶಮಾನವಾದ ನಗುವು ಸೂರ್ಯನಿಗೆ ಭೂಮಿಯನ್ನು ಬೆಳಗುವ ಶಕ್ತಿ ನೀಡುತ್ತದೆ. ಸೂರ್ಯನು ಜೀವಂತವಾಗಿರುವಂತೆ ಈ ತಾಯಿ ನೋಡಿಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಅಂದು ಹಸಿರು ಬಣ್ಣದ ಬಟ್ಟೆ ಧರಿಸಬೇಕು. ಹಸಿರು ಪ್ರಕೃತಿ, ಶಕ್ತಿ, ಪರಿಸರ ಹಾಗೂ ಬೆಳವಣಿಗೆಯ ಸಂಕೇತ.
7ನೇ ದಿನ
ನವರಾತ್ರಿಯ 7ನೇ ದಿನವನ್ನು ತಾಯಿ ಕಾಳರಾತ್ರಿಗೆ ಅರ್ಪಿಸಲಾಗುತ್ತದೆ. ಅಂದು ಬೂದು ಬಣ್ಣ ಹೆಚ್ಚು ಸೂಕ್ತ. ಬೂದು ಬಣ್ಣವು ನಮ್ಮ ಮನಸ್ಸಿನ ಭಾವನೆಗಳ ಸಂಕೇತವಾಗಿದೆ. ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ತಾಯಿ ತೊಡೆದುಹಾಕುತ್ತಾಳೆ ಎಂಬುದು ಭಕ್ತರ ನಂಬಿಕೆ.
8ನೇ ದಿನ
ನವರಾತ್ರಿ 8ನೇ ದಿನ ತಾಯಿ ಮಹಾಗೌರಿಗೆ ಮೀಸಲಾಗಿದೆ. ಮಹಾಗೌರಿ ಆಧ್ಯಾತ್ಮಿಕ ಶಕ್ತಿಯೊಂದಿಗೆ ಜನರನ್ನು ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿ ಇದೆ. ಅಂದು ದೇವಿಗೆ ಪ್ರಿಯವಾದ ಗುಲಾಬಿ ಬಣ್ಣ ಧರಿಸುವುದು ಒಳಿತು. ಗುಲಾಬಿ ಬಣ್ಣವು ಶಾಂತಿ ಮತ್ತು ಬುದ್ಧಿವಂತಿಕೆಯ ಬಣ್ಣವಾದ್ದರಿಂದ ಅಂದು ದೇವಿ ಅಲಂಕಾರಕ್ಕೆ ಬಳಸಲಾಗುತ್ತದೆ.
9ನೇ ದಿನ
ನವರಾತ್ರಿಯ 9ನೇ ದಿನವು ತಾಯಿ ಸಿದ್ಧಿಧಾತ್ರಿಗೆ ಅರ್ಪಣೆ. ದೇವಿಯು ಜ್ಞಾನವನ್ನು ಕರುಣಿಸುತ್ತಾಳೆ. ಜೊತೆಗೆ ನಮ್ಮೆಲ್ಲರ ಗುರಿ ಮುಟ್ಟಲು ನೆರವಾಗುತ್ತಾಳೆ. ಅಂದು ದೇವಿಗೆ ಪ್ರಿಯವಾದ ನೇರಳೆ ಬಣ್ಣ ಧರಿಸಬೇಕು. ನೇರಳೆ ಬಣ್ಣವು ಆಕಾಂಕ್ಷೆಗಳ ಹಾಗೂ ಶಕ್ತಿಯ ಸಂಕೇತವಾಗಿರುತ್ತದೆ.
Web Stories