ಚಂಡೀಗಢ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಕಾಂಗ್ರೆಸ್ ತೊರೆದಿದ್ದಾರೆ.
ಪೂರ್ವ ಅಮೃತಸರದ ಮಾಜಿ ಶಾಸಕಿ ಹಾಗೂ ಮಾಜಿ ಸಂಸದೀಯ ಪ್ರಧಾನ ಕಾರ್ಯದರ್ಶಿ ಕೌರ್ ಅವರಿಗೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಚಂಡೀಗಢ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಲಾಗಿತ್ತು.
Advertisement
Advertisement
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಶಾ ಕುಮಾರಿ ಅವರಿಂದಾಗಿ ಚಂಡೀಗಢ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗಲಿಲ್ಲ ಎಂದು ಕೌರ್ ಆರೋಪಿಸಿದ್ದರು. ಈ ಹೇಳಿಕೆಯನ್ನು ಸಿಧು ಸಹ ಸಮರ್ಥಿಸಿಕೊಂಡು ಅವರು ಎಂದೂ ಸುಳ್ಳು ಹೇಳುವುದಿಲ್ಲ. ನನ್ನ ಪತ್ನಿಗೆ ಶಕ್ತಿ ಹಾಗೂ ನೈತಿಕತೆ ಇದೆ, ಅವರು ಎಂದಿಗೂ ಸುಳ್ಳು ಹೇಳುವುದಿಲ್ಲ, ಇದೇ ನನ್ನ ಉತ್ತರ ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
Advertisement
ಈ ಕುರಿತು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರತಿಕ್ರಿಯಿಸಿ, ಅವರಿಗೆ ಅಮೃತಸರ ಅಥವಾ ಬಂಟಿಂಡಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ನಿರಾಕರಿಸಿದರು. ಚಂಡೀಗಢ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪುವಲ್ಲಿ ನನ್ನ ಪಾತ್ರವಿಲ್ಲ. ಕಾಂಗ್ರೆಸ್ ಹೈ ಕಮಾಂಡ್ ಟಿಕೆಟ್ ಹಂಚಿಕೆ ಮಾಡಿತ್ತು ಎಂದು ಸ್ಪಷ್ಟಪಡಿಸಿದ್ದರು.
Advertisement
ಮುಖ್ಯಮಂತ್ರಿಯೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಜುಲೈನಲ್ಲಿ ನವಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಕೆಲವು ತಿಂಗಳುಗಳ ನಂತರ ಕೌರ್ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಕೌರ್ ಅವರು 2016ರಲ್ಲಿ ಬಿಜೆಪಿ ತೊರೆದ ನಂತರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.