ಚಂಡೀಗಢ: ಮೋದಿ ಸಮಸ್ಯೆ ಅನುಭವಿಸಿದ್ದು ಕೇವಲ 15 ನಿಮಿಷಗಳಷ್ಟೇ, ರೈತರು ಒಂದು ವರ್ಷ ಪ್ರತಿಭಟಿಸಿದ್ದಾರೆ ಎಂದು ಪಂಜಾಬ್ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರೈತ ಸಹೋದರರು ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ಪ್ರತಿಭಟನೆ ನಡೆಸಿದ್ದರು. ಒಂದೂವರೆ ವರ್ಷ ಅಲ್ಲಿಯೇ ಮೊಕ್ಕಾಂ ಹೂಡಿದ್ದರು. ಈ ಬಗ್ಗೆ ನಿಮ್ಮ ಮಾಧ್ಯಮಗಳು ಏನನ್ನೂ ಹೇಳಲಿಲ್ಲ, ಆದರೆ ನೀವು 15 ನಿಮಿಷ ಅನುಭವಿಸಿದ್ದ ಸಂಕಷ್ಟ ದೊಡ್ಡ ಸುದ್ದಿಯಾಗಿದೆ. ಈ ರೀತಿಯ ದ್ವಿಮುಖ ಧೋರಣೆ ಏಕೆ ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ
ಫಿರೋಜ್‍ಪುರದಲ್ಲಿ ಮೋದಿ ಭಾಷಣ ಮಾಡಲಿದ್ದ ಬಿಜೆಪಿ ರ‍್ಯಾಲಿಗೆ ಕೇವಲ 500 ಮಂದಿ ಮಾತ್ರ ಬಂದಿದ್ದರು. ನಾಚಿಕೆಯಿಲ್ಲದೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಖಾಲಿ ಖುರ್ಚಿಗಳ ನಡುವೆಯೂ ಭಾಷಣ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಹಾಗಲ್ಲ. ರ‍್ಯಾಲಿಯಿಂದ ದೂರ ಉಳಿಯಲು, ಮಾಧ್ಯಮಗಳ ಗಮನ ಸೆಳೆಯಲು ಭದ್ರತಾ ಲೋಪ ಆರೋಪ ಮಾಡಿದ್ದಾರೆ. ಈ ಬೆಳವಣಿಗೆಯು ಪಂಜಾಬ್‍ನಲ್ಲಿ ಬಿಜೆಪಿಯ ವೈಫಲ್ಯತೆಯನ್ನು ತೋರಿಸುತ್ತಿದೆ. ಬಿಜೆಪಿ ಒಡೆದ ಬಲೂನ್ ನಂತಾಗಿದೆ ಎಂದು ಬಿಜೆಪಿ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್ ಸಿಎಂ
ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫ್ಲೈ ಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿತ್ತು. ಪ್ರತಿಭಟನೆ ಕಾರಣದಿಂದಾಗಿ ಪಿಎಂ ಮೋದಿ ಅವರ ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿ ಬಟಿಂಡಾ ವಿಮಾನ ನಿಲ್ದಾಣಕ್ಕೆ ಮರಳಿದ್ದರು.