ಬಾಗ್‌ಬಜಾರ್‌ನ ದುರ್ಗಾಪೂಜೆಗೆ ಒಂದು ಶತಮಾನದ ಇತಿಹಾಸ ಇದೆ. ಬಂಗಾಳದ ಸಂಸ್ಕೃತಿಯಲ್ಲಿ ಮಹತ್ತ್ವದ ಪಾತ್ರ ವಹಿಸಿರುವ ಇಲ್ಲಿನ ದುರ್ಗಾಪೂಜೆ ಸಾಂಪ್ರದಾಯಿಕವಾಗಿ ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.
ಬಾಗ್‌ಬಜಾರ್‌ನ ಮೊಟ್ಟಮೊದಲ ದುರ್ಗಾಪೂಜೆ 1919ರಲ್ಲಿ ನಡೆದಿತ್ತು. ಆ ಕಾಲದಲ್ಲಿ ಇದಕ್ಕೆ ನೆಬುಬಾಗನ್ ಬಾರೋವಾರಿ ದುರ್ಗಾಪೂಜಾ ಎಂಬ ಹೆಸರಿತ್ತು. ಇದರ ಜಾಗ ಹಲವು ಬಾರಿ ಬದಲಾಗಿತ್ತು. 1930ರಲ್ಲಿ ಇದಕ್ಕೆ ಮೆಟಲ್ ಯಾರ್ಡ್ ಎಂಬಲ್ಲಿ ಶಾಶ್ವತ ನೆಲೆ ಸಿಕ್ಕಿತು. ಆ ಕಾಲದಲ್ಲಿ ಕೊಲ್ಗೊತಾದ ರಸ್ತೆ ರಿಪೇರಿ ಇಲಾಖೆ ಈ ಜಾಗವನ್ನು ಗೋಡೌನ್ ಆಗಿ ಬಳಸುತ್ತಿತ್ತು, ಆಗಿನ ಕೋಲ್ಕತ್ತಾ ಮೇಯರ್ ಆಗಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಇಲ್ಲಿ ದುರ್ಗಾಪೂಜೆ ನಡೆಸಲು ಆನುಮತಿ ನೀಡಿದ್ದರು. ಇಂದು ಇಲ್ಲೊಂದು ಉದ್ಯಾನವನ ನಿರ್ಮಾಣವಾಗಿದೆ. ಪ್ರತಿವರ್ಷ ಈ ಜಾಗದಲ್ಲಿ ದುರ್ಗಾಪೂಜೆಯ ಪೆಂಡಾಲ್ ತಲೆ ಎತ್ತುತ್ತದೆ.
1938-39ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಈ ಬಾಗ್‌ಬಜಾರ್ ದುರ್ಗಾಪೂಜಾ ಸಮಿತಿಯ ಅಧ್ಯಕ್ಷರಾಗಿದ್ದರು. ಇಲ್ಲಿನ ದುರ್ಗಾಪೂಜೆಯಲ್ಲಿ ನೇತಾಜಿ ಮಾತ್ರವಲ್ಲದೆ, ಆಚಾರ್ಯ ಪ್ರಫುಲ್ಲಚಂದ್ರ ರಾಯ್, ಸರ್ ಹರ್ ಶಂಕರ್ ಪಾಲ್ ಮುಂತಾದ ನೇತಾರರು ಕಾಲಕಾಲಕ್ಕೆ ಭಾಗವಹಿಸಿದ್ದರು. ಸ್ವದೇಶೀ ಚಳವಳಿಯ ವೇಳೆ ಈ ಸಮಿತಿ ಕೋಲ್ಕತ್ತಾದ ಜನರನ್ನು ಸಂಘಟಿಸಿತ್ತು. ಮುಂದೆ ʻಕ್ವಿಟ್ ಇಂಡಿಯಾ’ ಚಳವಳಿಯಲ್ಲಿ ಕೂಡ ಈ ಸಮಿತಿ ಮಹತ್ತ್ವದ ಪಾತ್ರ ವಹಿಸಿತು.
ಇಲ್ಲಿನ ಅಲಂಕಾರ ಸರಳವಾಗಿದ್ದು, ಪೂಜೆ ಸಂಪ್ರದಾಯಬದ್ಧವಾಗಿರುತ್ತದೆ. ಈ ಪೆಂಡಾಲ್‌ನಲ್ಲಿ ಅಷ್ಟಮಿಯ ದಿನ ನಡೆಯುವ ಬೀರಾಷ್ಟಮಿ ಉತ್ಸವ ಮತ್ತು ವಿಜಯದಶಮಿಯ ಮುಂಜಾನೆ ನಡೆಯುವ ಸಿಂಧೂರ್ ಖೇಲಾ ಉತ್ಸವ ಸುಪ್ರಸಿದ್ಧವಾಗಿದೆ. ವಿಸರ್ಜನೆಯ ಮೆರವಣಿಗೆಗೂ ಮುನ್ನ ವಿವಾಹಿತ ಮಹಿಳೆಯರು ದೇವಿಗೆ ಸಿಂಧೂರ ಹಚ್ಚುವ ಸಂಭ್ರಮ ಇದು.
ಬಾಗ್‌ಬಜಾರ್ ಪೆಂಡಾಲ್ ಇರುವುದು ಉತ್ತರ ಕೋಲ್ಕತ್ತಾದ ಬಾಗ್ ಬಜಾರ್ ನದಿಯ ಬಳಿ. ಬಾಗ್‌ಬಜಾರ್ ಲಾಂಚ್ ಘಾಟ್‌ಗೆ ಇದು ಸಮೀಪದಲ್ಲಿದೆ. ಶ್ಯಾಮ್‌ಬಜಾರ್ ಮೆಟ್ರೋ ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಅಲ್ಲದೇ ಟ್ಯಾಕ್ಸಿ, ಅಟೋ, ಬಸ್ ಸೌಲಭ್ಯಗಳೂ ಇರಲಿದೆ.