ಸೆ.26, 27 ಎರಡು ದಿನ ಬ್ಯಾಂಕ್ ಮುಷ್ಕರ

Public TV
2 Min Read
bank strike 2

ಬೆಂಗಳೂರು: 10 ರಾಷ್ಟ್ರೀಕೃತ ಬ್ಯಾಂಕ್‍ಗಳ ಮಹಾ ವಿಲೀನವನ್ನು ಖಂಡಿಸಿ ನಾಲ್ಕು ಬ್ಯಾಂಕ್ ನೌಕರರ ಸಂಘಗಳು ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ಹಮ್ಮಿಕೊಂಡಿವೆ.

ಈ ಕುರಿತು ಗುರುವಾರ ಸಂಘಟನೆಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದು, ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುವುದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ. ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

Bank Strike

10 ರಾಷ್ಟ್ರೀಕೃತ ಬ್ಯಾಂಕ್‍ಗಳ ವಿಲೀನ ತಡೆಯುವುದು ಹಾಗೂ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದು ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಕಾನ್ಫೆಡರೇಶನ್(ಎಐಬಿಓಸಿ)ನ ಪ್ರಧಾನ ಕಾರ್ಯದರ್ಶಿ ದೀಪಲ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

ಕಾಲ ಕಾಲಕ್ಕೆ ವೇತನ ಪರಿಷ್ಕರಣೆ, ವಾರದಲ್ಲಿ 5 ದಿನ ಮಾತ್ರ ಕೆಲಸದ ವ್ಯವಸ್ಥೆ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಸಲಾಗುತ್ತಿದೆ. ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಓಎ), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್‍ಬಿಓಸಿ) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ಎನ್‍ಓಬಿಓ) ಬೆಂಬಲ ಸೂಚಿಸಿವೆ.

Bank Strike 1

ದೇಶಾದ್ಯಂತ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳು ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ 27ರ ವರೆಗೆ ಪ್ರತಿಭಟನೆ ನಡೆಸಲಿವೆ. ಸರ್ಕಾರ ಈ ಕುರಿತು ಎಚ್ಚರಿಕೆ ವಹಿಸದಿದ್ದಲ್ಲಿ ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 30ರಂದು 10 ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ನಾಲ್ಕು ಬ್ಯಾಂಕ್‍ಗಳಿಗೆ ವಿಲೀನಗೊಳಿಸಿರುವ ಕುರಿತು ಘೋಷಣೆ ಮಾಡಿದ್ದರು. ಐದು ವರ್ಷಗಳ ಆರ್ಥಿಕತೆಯ ಕುಂಠಿತವನ್ನು ಸರಿ ದಾರಿಗೆ ತಂದು, ಬೆಳೆವಣಿಗೆಯತ್ತ ಕೊಂಡೊಯ್ಯಬೇಕು. ಹೀಗಾಗಿ ಸಣ್ಣ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ಬೃಹತ್ ಬ್ಯಾಂಕ್‍ಗಳನ್ನಾಗಿ ಮಾಡಿ, ವಿಶ್ವ ದರ್ಜೆಗೆ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

CKD Hukkeri SBI Bank

 

ಇದರ ಭಾಗವಾಗಿ ರಾಜ್ಯದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳನ್ನು ಸಹ ವಿಲೀನ ಮಾಡಲಾಗುತ್ತಿದೆ. ಈ ಕುರಿತು ಆಗಸ್ಟ್ 30ರಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ನಿರ್ಮಲಾ ಸೀತಾರಾಮನ್ ಅವರು, 2017ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್‍ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಿವೆ.

Share This Article