ಚಂಡೀಗಢ: ರಾಷ್ಟ್ರ ಮಟ್ಟದ ಶೂಟಿಂಗ್ ಕೋಚ್ (National Shooting Coach) ಅಂಕುಶ್ ಭಾರದ್ವಾಜ್ (Ankush Bhardwaj) ವಿರುದ್ಧ ಲೈಗಿಂಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. 17 ವರ್ಷದ ಅಪ್ರಾಪ್ತ ರಾಷ್ಟ್ರೀಯ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಘಟನೆಯು ಡಿಸೆಂಬರ್ 2025ರಲ್ಲಿ ಹರಿಯಾಣದ (Haryana) ಫರೀದಾಬಾದ್‌ನ (Faridabad) ಸೂರಜ್‌ಕುಂಡ್‌ನಲ್ಲಿರುವ ತಾಜ್ ಹೋಟೆಲ್‌ನಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. ಆರೋಪದ ಬಳಿಕ ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ತಕ್ಷಣವೇ ಕೋಚ್ ಅಂಕುಶ್ ಭಾರದ್ವಾಜ್ ಅವರನ್ನ ಅಮಾನತುಗೊಳಿಸಿದೆ. ಪೊಲೀಸರು ಈ ಸಂಬಂಧ ಪೋಕ್ಸೋ ಕಾಯ್ದೆ (POCSO Case) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಅಣ್ಣ-ತಂಗಿಯ ಅಕ್ರಮ ಸಂಬಂಧ – ತಂಗಿ ಸಾವಿನಲ್ಲಿ ಅಂತ್ಯ
ಸಂತ್ರಸ್ಥ ಅಥ್ಲೀಟ್ (17 ವರ್ಷ ವಯಸ್ಸಿನ ರಾಷ್ಟ್ರೀಯ ಮಟ್ಟದ ಶೂಟರ್) ಆಗಸ್ಟ್ 2025ರಿಂದ ಅಂಕುಶ್ ಭಾರದ್ವಾಜ್ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದರು. 2025 ಡಿಸೆಂಬರ್ 16ರಂದು ದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆದ ಸ್ಪರ್ಧೆಯ ನಂತರ, ಕೋಚ್ ಪಂದ್ಯದ ಕುರಿತು ಚರ್ಚಿಸುವುದಕ್ಕಾಗಿ ಆಕೆಯನ್ನು ಹೋಟೆಲ್‌ಗೆ ಕರೆಸಿದ್ದರು. ವಾಟ್ಸಾಪ್ ಮೂಲಕ ಸಂಪರ್ಕಿಸಿ, ಹೋಟೆಲ್ ಲಾಬಿಯಲ್ಲಿ ಭೇಟಿಯಾಗುವಂತೆ ಹೇಳಿದ್ದರು.
ಹೋಟೆಲ್‌ನ ಮೂರನೇ ಮಹಡಿಯ ಕೊಠಡಿಯಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ, “ಬ್ಯಾಕ್ ಕ್ರ್ಯಾಕ್ ಮಸಾಜ್” ಮಾಡುವುದಕ್ಕಾಗಿ ಹಾಸಿಗೆಯ ಮೇಲೆ ಮಲಗುವಂತೆ ಒತ್ತಾಯ ಮಾಡಿದ್ದರು. ಆಕೆ ನಿರಾಕರಿಸಿದಾಗ, ಒತ್ತಡಕ್ಕೆ ಒಳಪಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿರೋಧ ತೋರಿದಾಗ “ನಿನ್ನ ಕ್ರೀಡಾ ವೃತ್ತಿಯನ್ನು ಹಾಳುಮಾಡಿಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಅಥ್ಲೀಟ್ ತಿಳಿಸಿದ್ದಾರೆ.
ಈ ಘಟನೆಯಿಂದ ಆಘಾತಕ್ಕೊಳಗಾದ ಅಥ್ಲೀಟ್ ಹಲವು ದಿನಗಳ ಕಾಲ ಮೌನವಹಿಸಿದ್ದರು. ಜನವರಿ 6ರಂದು ತಾಯಿಗೆ ಎಲ್ಲವನ್ನೂ ಹೇಳಿದ ಬಳಿಕ, ತಾಯಿ ಫರೀದಾಬಾದ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೋಕ್ಸೋ ಕಾಯ್ದೆಯ ಸೆಕ್ಷನ್ 6 ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಹಣಕ್ಕಾಗಿ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಪಾಪಿ ತಂದೆ – ಕಾಫಿನಾಡಲ್ಲೊಂದು ಹೃದಯವಿದ್ರಾವಕ ಘಟನೆ!

