Connect with us

Districts

ಎನ್‌ಆರ್‌ಸಿ ಚರ್ಚೆ ಬಿಟ್ಟು ದಾಖಲೆ ಸರಿ ಮಾಡಿಕೊಳ್ಳಿ: ವಕ್ಫ್

Published

on

ಗ ದೇಶದ ಎಲ್ಲಾ ಕಡೆ ಎನ್‌ಆರ್‌ಸಿ( ರಾಷ್ಟ್ರೀಯ ಪೌರತ್ವ ನೋಂದಣಿ) ಮತ್ತು ಪೌರತ್ವ ಕಾಯ್ದೆಯದ್ದೇ ಚರ್ಚೆ. ಇದರ ಬಗ್ಗೆ ಪರ-ವಿರೋಧ ಚರ್ಚೆ, ಟೀಕೆ ಜೋರಾಗಿ ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರ ಸದ್ದಿಲ್ಲದೇ ಒಂದು ಕೆಲಸಕ್ಕೆ ಕೈ ಹಾಕಿದೆ. ಅದೇನೆಂದ್ರೆ ಪರ-ವಿರೋಧಗಳು ಏನೇ ಇರಲಿ, ಈ ವಿಚಾರದ ಸುತ್ತ ಗಿರಕಿ ಹೊಡೆಯುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ದಾಖಲೆಗಳನ್ನು ಸರಿ ಮಾಡಿಸಿಕೊಳ್ಳುವ ಅಭಿಯಾನಕ್ಕೆ ಕೈಹಾಕಿದೆ. ಏನಪ್ಪಾ ಇದು, ಎನ್‌ಆರ್‌ಸಿ, ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ಜಾರಿಗೆ ತರುತ್ತಿರೋದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ. ರಾಜ್ಯದಲ್ಲಿರುವುದೂ ಬಿಜೆಪಿ ಸರ್ಕಾರ. ಇದು ಹೇಗಪ್ಪಾ ಸಾಧ್ಯ ಅಂತಾ ನಿಮಗೆ ಆಶ್ಚರ್ಯ ಆಗಲೇಬೇಕು. ಹೌದು, ಇದು ಅಚ್ಚರಿಯಾದ್ರೂ ನಿಜ.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಂ ಧರ್ಮೀಯರನ್ನು ಹೊರಗಿಟ್ಟು ಬಿಜೆಪಿ ಸರ್ಕಾರ ಧರ್ಮ ಬೇಧ ಮಾಡುತ್ತಿದೆ ಎಂದು ವಿರೋಧ ಪಕ್ಷಗಳೆಲ್ಲಾ ಬೀದಿಗೆ ಬಂದಿದೆ. ಜೊತೆಗೆ ಮುಸ್ಲಿಂ ಸಮುದಾಯದ ಬಹುತೇಕ ಮಂದಿ ಕೂಡಾ ಇದನ್ನು ವಿರೋಧಿಸುತ್ತಿದ್ದಾರೆ. ಸಹಜವಾಗಿ ಈ ವಿಚಾರದಲ್ಲಿ ರಾಜಕೀಯ ಇದೆ ಅನ್ನೋದ್ರಲ್ಲಿ ಸಂಶಯವಿಲ್ಲ. ಪ್ರಣಾಳಿಕೆಯ ಭರವಸೆಯನ್ನು ಈಡೇರಿಸ್ತಿರೋ ಬಿಜೆಪಿ, ತನ್ನ ಮತಬ್ಯಾಂಕ್ ಗಟ್ಟಿ ಮಾಡಿ ಸಂದೇಶವೊಂದನ್ನು ರವಾನಿಸುತ್ತಾ ಇರುವುದಂತೂ ಸತ್ಯ. ಅದೇ ರೀತಿ ನಾವು ಮುಸ್ಲಿಂ ಸಮುದಾಯದ ಪರ ಎಂದು ಬಿಂಬಿಸುತ್ತಾ ಕಾಂಗ್ರೆಸ್, ಎಡಪಕ್ಷ ಸೇರಿದಂತೆ ಇನ್ನಿತರ ಪಕ್ಷಗಳು ಕಾಯ್ದೆ ತಿದ್ದುಪಡಿ ವಿರೋಧಿಸಿ ತನ್ನ ಮತ ಬ್ಯಾಂಕ್ ಪರ ನಿಲ್ಲುತ್ತಿದೆ. ಆದರೆ ಈ ಕಾಯ್ದೆ ಇಲ್ಲಿನ ಮುಸ್ಲಿಮರಿಗೆ ಸದ್ಯಕ್ಕೇನೂ ಅಪಾಯವಿಲ್ಲ, ಆದ್ರೆ ಭವಿಷ್ಯದಲ್ಲಿ ಇದು ಖಂಡಿತಾ ಮುಸ್ಲಿಂ ಸಮುದಾಯಕ್ಕೆ ಅಪಾಯಕಾರಿ ಎಂಬ ವಿಶ್ಲೇಷಣೆಯೂ ಇದೆ. ಬೇರೆ ದೇಶದಿಂದ ಬಂದಿದ್ದಾರೆ ಎನ್ನಲಾಗಿರುವ ಮುಸ್ಲಿಮರಿಗೆ ಮಾತ್ರ ಅನ್ವಯವಾಗುತ್ತದೆ ಎಂಬ ಕಾರಣಕ್ಕೆ ಇಲ್ಲಿನ ಮುಸ್ಲಿಮರು ಸದ್ಯಕ್ಕೆ ನಿಟ್ಟುಸಿರು ಬಿಡಬಹುದು.

ಆದ್ರೆ ಎನ್‌ಆರ್‌ಸಿ ಜಾರಿಗೆ ತಂದರೆ ಅಕ್ರಮವಾಗಿ ವಲಸೆ ಬಂದ ಎಲ್ಲಾ ಮುಸ್ಲಿಮರ ಜೊತೆಗೆ ಇಲ್ಲಿರುವ ಮೂಲ ನಿವಾಸಿ ಮುಸ್ಲಿಮರ ಬುಡಕ್ಕೂ ಬರುತ್ತೆ ಎಂಬ ಆತಂಕ ಸಮುದಾಯದಲ್ಲಿ ಇರುವುದಂತೂ ಸತ್ಯ. ದಾಖಲೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಇಲ್ಲಿನ ಮುಸ್ಲಿಮರು ಪೌರತ್ವ ಕಳೆದುಕೊಳ್ಳಬಹುದು ಅಥವಾ ಸೌಲಭ್ಯ ವಂಚಿತರಾಗಬಹುದು, ಅತಂತ್ರರಾಗಬಹುದು ಎಂಬುದು ಆತಂಕಕ್ಕೆ ಮೂಲಕಾರಣ. ಪರಿಸ್ಥಿತಿ ಹೀಗಿರುವಾಗ ಮೂಲ ಭಾರತೀಯರೇ ಆಗಿರುವ ಮುಸ್ಲಿಮರು ನಿಜವಾಗಿಯೂ ಏನು ಮಾಡಬೇಕು ಎಂಬ ಅರಿವಿಲ್ಲದೇ ಗೊಂದಲದಲ್ಲಿರುವಾಗ, ಕರ್ನಾಟಕದ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೊಂದು ಸಂದೇಶ ರವಾನಿಸಿದೆ. ಅದೇನಪ್ಪಾ ಅಂದ್ರೆ, ಕೇಂದ್ರ ಸರ್ಕಾರ ಎನ್‌ಆರ್‌ಸಿಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, 2012ರ ರಾಷ್ಟ್ರೀಯ ಜನಗಣತಿಗೂ ಮುನ್ನ, ರಾಷ್ಟ್ರೀಯ ಜನಸಂಖ್ಯಾ ದಾಖಲೆಗಳನ್ನು ಮಾಡಲು 2020ರಲ್ಲಿ ಗಣತಿ ಮಾಡಲಿದೆ. ಹೀಗಾಗಿ ಮುಂದಿನ ವರ್ಷ ನಡೆಯುವ ಈ ಮಾಹಿತಿ ಸಂಗ್ರಹದ ಗಣತಿ ಸಂದರ್ಭದಲ್ಲಿ ದಾಖಲೆ ರಹಿತ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ, ಕೆಲವು ಕನಿಷ್ಠ ದಾಖಲೆಗಳನ್ನು ಮಾಡಿಕೊಳ್ಳುವ ಅಭಿಯಾನಕ್ಕೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮುನ್ನುಡಿ ಬರೆದಿದೆ. ಕಳೆದ ನವೆಂಬರಿನಲ್ಲೇ ಸುತ್ತೋಲೆ ಹೊರಡಿಸಿರುವ ವಕ್ಫ್ ಬೋರ್ಡ್, ರಾಜ್ಯದ ಎಲ್ಲಾ ಮಸೀದಿಗಳಿಗೆ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ.

ಸುಮಾರು 35,000 ಆಸ್ತಿಗಳಿಗೆ ಸರಿಸುಮಾರು 32,000 ಮಸೀದಿಗಳು ವಕ್ಫ್ ವ್ಯಾಪ್ತಿಗೊಳಪಟ್ಟಿದ್ದು, ಎಲ್ಲಾ ಮಸೀದಿಗಳು ತಮ್ಮ ಮೊಹಲ್ಲಾ ವ್ಯಾಪ್ತಿಯ ಮುಸ್ಲಿಂ ಸಮುದಾಯದವರ ಮಾಹಿತಿ, ದಾಖಲೆಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಇಡುವಂತೆ ಸೂಚಿಸಿದೆ. ಎಲ್ಲಾ ಮಸೀದಿಗಳ ಮೂಲಕ ಮುಸ್ಲಿಂ ಸಮುದಾಯದವರಿಗೆ ಕೆಲವು ಅಗತ್ಯ ದಾಖಲೆಗಳ ಬಗ್ಗೆ ಜಾಗೃತಿ ನೆರವು ನೀಡಬೇಕು. ಅಗತ್ಯವಿರುವ ಕಡೆ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಅರಿವು ಮೂಡಿಸಬೇಕು. ನಗರಪ್ರದೇಶದ ಮಸೀದಿಗಳು ಸಮುದಾಯದವರ ದಾಖಲೆ ಮಾಹಿತಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಡಬೇಕು. ಹೊರಗಿನವರು ಯಾರು? ಸ್ಥಳೀಯರು ಯಾರು? ಅಪರಿಚಿತರು ಯಾರು ಮತ್ತು ಯಾವಾಗ ಎಲ್ಲಿಂದ ವಲಸೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದರೆ ಮುಂದಿನ ದಿನಗಳಲ್ಲಿ ಜನಗಣತಿಗಾಗಿ ಅಥವಾ ಇನ್ನಿತರ ಕಾರ್ಯಗಳಿಗೆ ಸರ್ಕಾರದ ಪ್ರತಿನಿಧಿಗಳು ಬಂದಾಗ ಸಹಕಾರಿಯಾಗಲಿದೆ ಎಂಬುದು ವಕ್ಫ್ ಸುತ್ತೋಲೆಯ ಮೂಲ ಉದ್ದೇಶ.

ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಹಲವು ಕಡೆ ಸೂಕ್ತ ದಾಖಲೆಗಳಿಲ್ಲದೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ವಕ್ಫ್ ಮಂಡಳಿ ಗಮನಿಸಿದೆ. ಸಮುದಾಯಾದ ಅನಕ್ಷರಸ್ಥರು, ಅರಿವಿನ ಕೊರತೆಯಿಂದ ಸರಿಯಾಗಿ ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಮಳೆ, ಅತಿವೃಷ್ಟಿ, ಪ್ರವಾಹ, ಪ್ರಕೃತಿ ವಿಕೋಪಗಳ ಪರಿಣಾಮ ದಾಖಲೆ ಕಳೆದುಕೊಂಡವರೂ ಇದ್ದಾರೆ. ಮತದಾರರ ಗುರುತಿನ ಚೀಟಿ ಇಲ್ಲದೇ ಮತದಾನದಿಂದ ವಂಚಿತರಾಗುತ್ತಿರುವ ಬಗ್ಗೆ ಇತ್ತೀಚೆಗೆ ಸಾಕಷ್ಟು ದೂರುಗಳಿವೆ. ಹೀಗಿರುವಾಗ ಸರ್ಕಾರದ ದಾಖಲೆಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಮೊಹಲ್ಲಾ ಮಸೀದಿಗಳು, ಸ್ವಯಂಸೇವಾ ಸಂಸ್ಥೆಗಳು ನೆರವಾಗಬೇಕು ಎನ್ನುವುದು ವಕ್ಫ್ ಮಂಡಳಿಯ ಆಶಯ. ಈ ಬಗ್ಗೆ ಸಮುದಾಯದ ಸುಶಿಕ್ಷಿತರು, ಜಾಗೃತಿಗೆ ಕೈಜೋಡಿಸಿದರೆ ಸೌಲಭ್ಯವಂಚಿತ ಹಾಗೂ ಅಭದ್ರತೆ ಕಾಡುತ್ತಿರುವ ಹಿಂದುಳಿದ ಸಮುದಾಯಕ್ಕೆ ಸಹಕಾರಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಎನ್‌ಆರ್‌ಸಿ ಬಗ್ಗೆ ಪರ ವಿರೋಧಗಳು, ಪ್ರತಿಭಟನೆ ಬಹಿಷ್ಕಾರದ ಮಾತುಗಳು ಏನೇ ಇರಲಿ, ತಮ್ಮ ಅಗತ್ಯ ದಾಖಲೆಗಳನ್ನು ಸರಿಯಾಗಿ ಮಾಡಿಸಿಕೊಂಡು ಇಟ್ಟುಕೊಂಡರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಡೆಯಬಹುದು. ಪ್ರತಿ ಚುನಾವಣೆ ಸಂದರ್ಭದಲ್ಲೂ ವೋಟರ್ ಐಡಿ ಇಲ್ಲ ಎಂಬ ಕಾರಣಕ್ಕೆ ಮತದಾನದಿಂದ ವಂಚಿತರಾದಾಗ ಕೂಗಾಟ, ವಾಗ್ವಾದ ಪ್ರತಿಭಟನೆ ಆಕ್ರೋಶ ವ್ಯಕ್ತವಾಗುತ್ತಿರುವುದು ಹಲವು ಬಾರಿ ವರದಿಯಾಗಿದೆ. ಆದ್ರೆ ಏನೇ ಕೂಗಾಡಲಿ ಅವರಿಗೆಲ್ಲಾ ಮತದಾನಕ್ಕೆ ತಕ್ಷಣ ಅವಕಾಶ ಕೊಡಿಸಿದ ಉದಾಹರಣೆ ಇಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಪಕ್ಷಗಳು ನಂತರ ಮುಂದಿನ ಚುನಾವಣೆವರೆಗೂ ಕಣ್ಮರೆಯಾಗುತ್ತವೆ. ಮತ್ತೆ ಅವಕಾಶ ವಂಚಿತರಾಗೋದು ಮಾತ್ರ ಆ ಮುಗ್ಧ ಜನರು. ಹೀಗಾಗಿ ಎನ್‌ಆರ್‌ಸಿ ಜಾರಿಯಾಗುತ್ತೋ ಬಿಡುತ್ತೋ, ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಏನೆಲ್ಲಾ ಮಾಡ್ತಾರೋ ಮಾಡಲಿ. ಅಲ್ಪಸಂಖ್ಯಾತ ಸಮುದಾಯದ ಜನತೆ ದಾಖಲೆಗಳನ್ನು ಮಾಡಿಸಿಕೊಂಡು ಜಾಣತನ ಮೆರೆಯಬೇಕು. ಯಾಕೆಂದರೆ, ನಾವು ಎನ್‌ಆರ್‌ಸಿ  ವಿರೋಧಿಸ್ತೀವಿ, ದಾಖಲೆ ನೀಡಿ ನಾನು ಪ್ರಜೆ ಎಂದು ಸಾಬೀತು ಮಡಲ್ಲ ಎಂದು ಭಾಷಣ ಬಿಗಿಯುವ ಎಲ್ಲಾ ಮಹಾನುಭಾವರುಗಳ ಬಳಿ ಎಲ್ಲಾ ದಾಖಲೆಗಳು ಸರಿಯಾಗಿಯೇ ಇರುತ್ತವೆ. ಆದರೆ, ಅವರ ಭಾಷಣ ಕೇಳಿ ಚಪ್ಪಾಳೆ ತಟ್ಟಿ ಮನೆಗೆ ಹೋಗುವ ಮುಗ್ಧ ಜನರ ಬುಡಕ್ಕೆ ಬಂದಾಗ ಇವರು ಯಾರೂ ಇರುವುದಿಲ್ಲ. ಮತ್ತೆ ಬೀದಿಗೆ ಬರುವುದು ಆ ಮುಗ್ಧ ಸೌಲಭ್ಯವಂಚಿತರೇ. ಆದ್ದರಿಂದ ಈ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಪಕ್ಷಗಳ ಲಾಭ ನಷ್ಟ ಲೆಕ್ಕಾಚಾರದಲ್ಲಿ ಜನಸಾಮಾನ್ಯರು ಬಲಿಪಶುಗಳಾಗುತ್ತಾರೆ.

ಹಾಗಾಗಿ ರಾಜಕೀಯ ಕಾರಣಗಳಿಗಾಗಿ ನಡೆಯುವ ಈ ಎಲ್ಲಾ ಪರ ವಿರೋಧ ಪ್ರಹಸನಗಳಿಂದ ಮುಗ್ಧ ಜನರು ಬಲಿಪಶುಗಳಾಗುವುದನ್ನು ತಪ್ಪಿಸಲು ಪ್ರಜ್ಞಾವಂತರು ದಾಖಲೆಗಳಿಲ್ಲದೇ ಪರದಾಡುತ್ತಿರುವ ಈ ಬಡಜನರ ನೆರವಿಗೆ ಬರಬೇಕಾದ್ದು ಇಂದಿನ ಅಗತ್ಯತೆ. ಆದ್ದರಿಂದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸೂಚಿಸಿರುವಂತೆ ಎಲ್ಲಾ ಮಸೀದಿ, ಮೊಹಲ್ಲಾಗಳ ಪ್ರಜ್ಞಾವಂತರು ಯಾವುದೇ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಿವಿಕೊಡದೇ ದಾಖಲೆವಂಚಿತ ಮುಸ್ಲಿಂ ಸಮುದಾಯದ ಬಡವರ್ಗಕ್ಕೆ ನೆರವಾಗುವುದು ಎಲ್ಲಾ ದೃಷ್ಟಿಯಿಂದಲೂ ಒಳಿತು.

Click to comment

Leave a Reply

Your email address will not be published. Required fields are marked *