ಅಸ್ಸಾಂನಲ್ಲಿ NRC ಪಟ್ಟಿ ಅಂತಿಮ- 19 ಲಕ್ಷ ಜನರು ಪಟ್ಟಿಯಿಂದ ಹೊರಗೆ

Public TV
2 Min Read
NRC

ಗುವಾಹಟಿ: ಅಸ್ಸಾಂನಲ್ಲಿ ನಡೆಸಲಾಗಿದ್ದ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿ ಸಿದ್ಧಗೊಂಡಿದೆ. ಎನ್ಆರ್​ಸಿ ಅಂತಿಮ ಪಟ್ಟಿಯಲ್ಲಿ 3.11 ಕೋಟಿ ಜನರ ಹೆಸರು ಸೇರ್ಪಡೆಗೊಂಡಿದ್ದು, ಅಸ್ಸಾಂನಲ್ಲಿರುವ 19.06 ಲಕ್ಷ ಮಂದಿಯ ಹೆಸರು ಪಟ್ಟಿಯಿಂದ ಹೊರಗುಳಿದಿದೆ. ಪಟ್ಟಿಯಿಂದ ಹೊರಗುಳಿದಿರುವ 19.06 ಲಕ್ಷ ಜನರ ಮುಂದಿನ ನಡೆ ಏನು? ಈ ಕುರಿತು ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಎನ್ಆರ್​ಸಿ ಪಟ್ಟಿಯಿಂದ ಹೊರಗುಳಿದಿರುವ 19.06 ಲಕ್ಷ ಜನರು ನ್ಯಾಯಾಲಯದ ಮೊರೆ ಹೋಗಿ ಮನವಿ ಸಲ್ಲಿಸಬಹುದು. ಎಲ್ಲ ಕಾನೂನು ಕ್ರಮಗಳು ಪೂರ್ಣವಾಗುವರೆಗೂ ಸರ್ಕಾರ ನಮ್ಮ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಶೆಡ್ಯೂಲ್ ಆಫ್ ಸಿಟಿಜನ್‍ಶಿಪ್ ಸೆಕ್ಷನ್ 8ರ ಪ್ರಕಾರ ಪಟ್ಟಿಯಿಂದ ಹೊರಗುಳಿದಿರುವ ಜನರು ಅಪೀಲ್ ಸಲ್ಲಿಸಬಹುದು. ಭಾರತೀಯರ ನಾಗರೀಕರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಒಟ್ಟು 3.29 ಕೋಟಿ ಜರನು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 3,11,21,004 ಜನರು ಹೆಸರು ಪಟ್ಟಿಯಲ್ಲಿ ಸೇರಿದ್ದರೆ, 19,06,657 ಜನರಿಗೆ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ಮೊದಲಿಗೆ 60 ದಿನಗಳ ಒಳಗೆ ಮೇಲ್ಪನವಿ ಸಲ್ಲಿಸಲು ಅವಕಾಶವಿತ್ತು. ಇದೀಗ ಸಮಯವಕಾಶ ಗಡಿಯನ್ನು ವಿಸ್ತರಿಸಿದ್ದು, 60 ರಿಂದ 120 ದಿನಕ್ಕೆ ಹೆಚ್ಚಿಸಲಾಗಿದೆ. ಹಾಗಾಗಿ 31, ಡಿಸೆಂಬರ್ 2019ರೊಳಗೆ ಅಂತಿಮಗೊಂಡಿರುವ ಪಟ್ಟಿಯ ಅಂಕಿ-ಅಂಶಗಳ ಬಗ್ಗೆ ಮೇಲ್ಮನವಿ ಸಲ್ಲಿಸಬೇಕು. ಗೃಹ ಮಂತ್ರಾಲಯದ ಪ್ರಕಾರ ಎನ್ಆರ್​ಸಿ ವಿವಾದಗಳನ್ನು ಬಗೆಹರಿಸಲು ಸುಮಾರು 400 ನ್ಯಾಯ ಮಂಡಳಿಗಳನ್ನು ಸ್ಥಾಪಿಸಲಾಗಿದೆ.

ಎನ್ಆರ್​ಸಿ ಪಟ್ಟಿಯಿಂದ ಹೊರಗುಳಿದಿರುವ ವ್ಯಕ್ತಿಯನ್ನು ವಿದೇಶಿ ಪ್ರಜೆ ಎಂದು ಅರ್ಥೈಸಲಾಗುತ್ತದೆ. ವಿದೇಶಿ ಪ್ರಜೆ ಎಂದು ಘೋಷಣೆಗೊಂಡ ವ್ಯಕ್ತಿಯ ಪ್ರಕರಣ ವಿದೇಶಿ ನ್ಯಾಯಮಂಡಳಿಗೆ ವರ್ಗಾವಣೆ ಆಗುತ್ತದೆ. ಎನ್ಆರ್​ಸಿ ಪಟ್ಟಿಯಿಂದ ಹೊರಗುಳಿದ ಜನರನ್ನು ಸರ್ಕಾರ ತನ್ನ ಕಸ್ಟಡಿಗೆ ತೆಗೆದುಕೊಳ್ಳಲ್ಲ. ವಿದೇಶಿ ನ್ಯಾಯಮಂಡಳಿ ತೀರ್ಮಾನ ಬರೋವರೆಗೆ ಎಲ್ಲರಿಗೂ ವಿನಾಯ್ತಿ ನೀಡಲಾಗಿದೆ. ಪಟ್ಟಿಯಿಂದ ಹೊರಗುಳಿದ ಅಸ್ಸಾಂ ಮೂಲದ ಬಡವರಿಗೆ ಕಾನೂನು ಹೋರಾಟ ನಡೆಸಲು ಸರ್ಕಾರ ಸಹಾಯ ಮಾಡಲಿದೆ ಎಂದು ಅಸ್ಸಾಂ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ವಿದೇಶಿ ಅಂತ ಘೋಷಣೆಯಾದ್ರೆ?
ಎನ್ಆರ್​ಸಿ ಪಟ್ಟಿಯಿಂದ ಹೊರಗುಳಿದ ಜನರು ವಿದೇಶಿ ಎಂದು ಘೋಷಣೆಯಾದ್ರೆ ಎಲ್ಲರನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ. ವಿದೇಶಿ ಪ್ರಜೆಗಳನ್ನು ಭಾರತದಿಂದ ಹೊರ ಕಳುಹಿಸುವ ಪ್ರಯತ್ನಕ್ಕೆ ಮುಂದಾಗಬಹುದು. ಆದ್ರೆ ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *