ಮಂಡ್ಯ: ವಿದ್ಯುತ್ ಶಾಕ್ ತಗುಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಗರದ ಗುತ್ತಲು ಬಡಾವಣೆ ನಿವಾಸಿ ರಾಷ್ಟ್ರೀಯ ಫುಟ್ಬಾಲ್ ಆಟಗಾರ ವಿಶ್ವಾಸ್ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಜು.1ರಂದು ಸ್ವರ್ಣ ಫುಟ್‍ಬಾಲ್ ಸಂಸ್ಥೆ ಆಯೋಜಿಸಿದ್ದ ಹೊನಲು ಬೆಳಕಿನ ಏಳು ಮಂದಿ ಆಟಗಾರರ ಫುಟ್‍ಬಾಲ್ ಪಂದ್ಯಕ್ಕಾಗಿ ತಯಾರಿಯಲ್ಲಿದ್ದ ಪ್ರತಿಭಾವಂತ ಆಟಗಾರ ವಿಶ್ವಾಸ್, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್‍ಗೆ ಒಳಗಾಗಿದ್ದರು. ಬಳಿಕ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ವಿದ್ಯುತ್ ಶಾಕ್ – ರಾಷ್ಟ್ರೀಯ ಫುಟ್ಬಾಲ್ ಆಟಗಾರನ ಸ್ಥಿತಿ ಚಿಂತಾಜನಕ
ನರಸಿಂಹಮೂರ್ತಿ ಮತ್ತು ಶ್ಯಾಮಲಾ ದಂಪತಿಯ ಪುತ್ರ ವಿಶ್ವಾಸ್, ನಗರದ ಪಿಇಎಸ್ ಕಾಲೇಜ್‍ನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರು. ಓದಿನ ಜೊತೆಗೆ ಫುಟ್‍ಬಾಲ್ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಆದರೆ ಈ ಆಟಗಾರನ ಬಾಳಿನಲ್ಲಿ ವಿಧಿಯ ಆಟ ಬೇರೆಯಾಗಿತ್ತು. ಫುಟ್‍ಬಾಲ್ ಆಟದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕೆಂಬ ಕನಸು ಕಂಡಿದ್ದ ವಿಶ್ವಾಸ್ ವಿದ್ಯುತ್ ಶಾಕ್ ತಗುಲಿ ದೇಹದ ಶೇ.80ರಷ್ಟು ಭಾಗ ಹಾನಿಗೊಳಗಾಗಿ ಕೋಮಾ ಸ್ಥಿತಿಗೆ ತಲುಪಿ ಆಸ್ಪತ್ರೆ ಸೇರಿದ್ದರು. ನಂತರ ಪೋಷಕರಿಗೆ ಆರ್ಥಿಕವಾಗಿ ಕಷ್ಟ ಇದ್ದುದರಿಂದಾಗಿ ವಿಶ್ವಾಸ್‍ಗೆ ಚಿಕಿತ್ಸೆ ಕೊಡಿಸಲು ಸಹಾಯ ಕೇಳಿದ್ದರು. ಸಾವಿರಾರು ಜನ ವಿಶ್ವಾಸ್‍ಗಾಗಿ ದೇಣಿಗೆ ನೀಡಿದ್ದರು. ಆದರೆ ವಿಶ್ವಾಸ್ ಮಾತ್ರ ಇಂದು ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.