ನ್ಯಾಷನಲ್ ಹೆರಾಲ್ಡ್ ಕೇಸ್- ರಾಹುಲ್, ಸೋನಿಯಾ ಅರ್ಜಿ ವಜಾ

Public TV
4 Min Read
sonia rahul gandhi

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ನೋಟಿಸನ್ನು ಪ್ರಶ್ನಿಸಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪುತ್ರ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.

ದುರುದ್ದೇಶ ಪೂರ್ವಕವಾಗಿ ಆದಾಯ ತೆರಿಗೆ ಇಲಾಖೆ ಯಂಗ್ ಇಂಡಿಯನ್ ಸಂಸ್ಥೆಗೆ ಸಂಬಂಧಿಸಿದಂತೆ 2011-12 ಸಾಲಿನ ಆದಾಯ ತೆರಿಗೆ ಮರು ಮೌಲ್ಯಮಾಪನ ಸಂಬಂಧ ನೋಟಿಸ್ ಜಾರಿ ಮಾಡಿದೆ ಎಂದು ಆರೋಪಿಸಿ ಸೋನಿಯಾ, ರಾಹುಲ್ ಗಾಂಧಿ, ಆಸ್ಕರ್ ಫೆರ್ನಾಂಡಿಸ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಸೋಮವಾರ ನ್ಯಾ. ರವೀಂದ್ರ ಭಟ್, ನ್ಯಾ. ಎ.ಕೆ ಚಾವ್ಲಾ ನೇತೃತ್ವದ ದ್ವಿಸದಸ್ಯ ಪೀಠ, ಆದಾಯ ತೆರಿಗೆ ಇಲಾಖೆ ತೆರಿಗೆದಾರರ ಆದಾಯವನ್ನು ಮರು ಮೌಲ್ಯಮಾಪನ ಮಾಡಲು ಅಧಿಕಾರವಿದೆ. ಹೀಗಾಗಿ ಅರ್ಜಿದಾರರು ಆದಾಯ ತೆರಿಗೆ ಇಲಾಖೆಗೆ ಹೋಗಿ ಅಲ್ಲಿ ಈ ಪ್ರಕರಣದಲ್ಲಿ ತಮ್ಮ ವಿರುದ್ಧ ಬಂದಿರುವ ಆರೋಪಗಳಿಗೆ ಉತ್ತರಿಸಬಹುದು ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.

ರಾಹುಲ್ ಗಾಂಧಿ 2010 ರಿಂದಲೇ ಯಂಗ್ ಇಂಡಿಯನ್ ನಿರ್ದೇಶಕರಾಗಿದ್ದರೂ 2011-12ರ ಆದಾಯ ಮೌಲ್ಯಮಾಪನ ವರ್ಷದಲ್ಲಿ ನಾನು ನಿರ್ದೇಶಕನಾಗಿಲ್ಲ ಎಂದು ಉಲ್ಲೇಖಿಸಿದ್ದರು. ಈ ಕಾರಣಕ್ಕಾಗಿ ಗಾಂಧಿ ಕುಟುಂಬಸ್ಥರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಐಟಿ ಸ್ಪಷ್ಟಪಡಿಸಿತ್ತು. ವಿಚಾರಣೆ ವೇಳೆ ರಾಹುಲ್ ಗಾಂಧಿ ಪರ ವಕೀಲರು, ನನ್ನ ಕಕ್ಷೀದಾರರು ಯಂಗ್ ಇಂಡಿಯನ್‍ದಿಂದ ಯಾವುದೇ ಹಣವನ್ನು ಪಡೆದಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ತೆರಿಗೆಯನ್ನು ಉಲ್ಲಂಘಿಸಿದ್ದಾರೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾದಿಸಿದ್ದರು. ಆಗಸ್ಟ್ 16 ರಂದು ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಸಪ್ಟೆಂಬರ್ 10 ರಂದು ತೀರ್ಪು ನೀಡುವುದಾಗಿ ಹೇಳಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾಧ್ಯಮಗಳು ವರದಿ ಮಾಡದಂತೆ ತಡೆ ನೀಡಲು ರಾಹುಲ್ ಗಾಂಧಿ ಈ ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್ ವಾದವನ್ನು ತಿರಸ್ಕರಿಸಿತ್ತು.

Herald House

ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?
2013ರಲ್ಲಿ ಜನವರಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಪಟಿಯಾಲಾ ಹೌಸ್ ಕೋರ್ಟ್‍ನಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಅವರ ಕಂಪೆನಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸೇರಿದಂತೆ ಸೋನಿಯಾ ಗಾಂಧಿ ಸಂಬಂಧಿತ ವ್ಯಕ್ತಿಗಳ ವಿರುದ್ಧ ದೂರು ಸಲ್ಲಿಸಿದ್ದರು.

ಸುಬ್ರಮಣಿಯನ್ ಸ್ವಾಮಿ ಆರೋಪವೇನು?
ಅಸೋಸಿಯೇಟೆಡ್ ಜರ್ನಲ್ಸ್(ಎಜಿಎಲ್) ಸಂಸ್ಥೆಯನ್ನು ಜವಹಾರ್ ಲಾಲ್ ನೆಹರು ಅವರು 1937ರ ನವೆಂಬರ್ 20 ರಂದು ಸ್ಥಾಪಿಸಿದ್ದರು. 5 ಸಾವಿರ ಸ್ವಾತಂತ್ರ್ಯ ಹೋರಾಟಗಾರರ ಸಹಕಾರದಿಂದ ಈ ಸಾರ್ವಜನಿಕ ಕಂಪೆನಿ ಸ್ಥಾಪನೆಯಾಗಿತ್ತು. ಎಜೆಎಲ್ ಸಂಸ್ಥೆಯ ಸ್ಥಾಪನೆ ಬಳಿಕ ಅಂದಿನ ಪ್ರಧಾನಿ ನೆಹರೂ ಅವರು, ನವದೆಹಲಿ, ಲಕ್ನೋ, ಭೋಪಾಲ್, ಮುಂಬೈ, ಇಂದೋರ್ ನಗರದಲ್ಲಿ ಸರ್ಕಾರದ ವತಿಯಿಂದ ಜಮೀನು ಮಂಜೂರು ಮಾಡಿದ್ದರು. ಅಲ್ಲದೇ ಅವರ ಅವಧಿಯಲ್ಲಿ ಸಂಸ್ಥೆಗೆ ಅಪಾರ ಪ್ರಮಾಣದ ದೇಣಿಗೆ ಹರಿದುಬಂದಿತ್ತು. ಎಜೆ ಸಂಸ್ಥೆ ಅಂದು ಉರ್ದು ಆವೃತ್ತಿಯ ‘ಕ್ವಾಮಿ ಆವಾಜ್’ ಹಾಗೂ ಇಂಗ್ಲಿಷ್ ಆವೃತ್ತಿಯ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಗಳನ್ನು ಪ್ರಕಟಿಸುತಿತ್ತು.

ಎಜೆಎಲ್ ಸಂಸ್ಥೆಗೆ ಕಾಂಗ್ರೆಸ್ ಪಕ್ಷ ಸಂಗ್ರಹಿಸಿದ್ದ ನಿಧಿಯಿಂದ 90 ಕೋಟಿ ರೂ. ಹಣವನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗಿತ್ತು. 2011ರಲ್ಲಿ ಎಜೆಎಲ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಮೋತಿ ಲಾಲ್ ವೋರಾ ತಮ್ಮ ಸಂಸ್ಥೆ ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಸಂಸ್ಥೆ ಹಾಗೂ ಅದರ ಆಸ್ತಿಗಳನ್ನು ರಾಹುಲ್ ಗಾಂಧಿ ಕುಟುಂಬ ಒಡೆತನದಲ್ಲಿದ್ದ ಯಂಗ್ ಇಂಡಿಯನ್ ಸಂಸ್ಥೆಗೆ ವರ್ಗಾಯಿಸಲು ಸಮ್ಮತಿಸಿದ್ದರು.

subramanian swamy 7591 1

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಡೆತನದ ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ್ದ `ಯಂಗ್ ಇಂಡಿಯನ್’ ಎಂಬ ಸಂಸ್ಥೆ ನಿಯಮ ಬಾಹಿರವಾಗಿ ಅಸೋಸಿಯೇಟೆಡ್ ಜರ್ನಲ್ಸ್ ಸಂಸ್ಥೆಯನ್ನು (ಎಜೆಎಲ್) ಖರೀದಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. ಯಂಗ್ ಇಂಡಿಯನ್ ಸಂಸ್ಥೆಯನ್ನು ಎಜೆಎಲ್ ಕಂಪೆನಿ ಖರೀದಿಸುವ ಮೂಲಕ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದರು.

ಈ ಆರೋಪಕ್ಕೆ ಪೂರಕ ಅಂಶವನ್ನು ತಿಳಿಸಿದ್ದ ಸ್ವಾಮಿ, ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ಸೋನಿಯಾ ಕುಟುಂಬ ಹೆಚ್ಚು ಶೇರು ಹೊಂದಿರುವುದನ್ನು ಬಹಿರಂಗ ಪಡಿಸಿದ್ದರು. ಅಲ್ಲದೇ ಎಜೆಎಲ್ ಸಂಸ್ಥೆ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಹೊಂದಿದ್ದ ಕೋಟಿ ಕೋಟಿ ಬೆಳೆಬಾಳುವ ಆಸ್ತಿಗಳೂ ಯಂಗ್ ಇಂಡಿಯನ್ ಸಂಸ್ಥೆಯ ಪಾಲಾಗಿದೆ ಎಂದು ದೂರಿದ್ದರು. ಸ್ವತಂತ್ರ್ಯ ಸೇನಾನಿಗಳ ದೇಣಿಗೆಯಿಂದ ಆರಂಭವಾದ ಎಜೆಎಲ್ ಸಂಸ್ಥೆಯನ್ನು ಸೋನಿಯಾ ಕುಟುಂಬದ ವಶಮಾಡಿಕೊಂಡಿತ್ತು. ಈ ಸಂಸ್ಥೆಯ ಸ್ವತ್ತುಗಳ ಮೌಲ್ಯ 5 ಸಾವಿರ ಕೋಟಿ ರೂ. ಕೂಡ ಅವರ ಕೈ ಸೇರಿತ್ತು. ಇವುಗಳನ್ನು ವಿವರವಾಗಿ ನೀಡಿದ್ದ ಸ್ವಾಮಿ, ಪಕ್ಷಕ್ಕೆ ಬಂದ ದೇಣಿಗೆಯ ಹಣವನ್ನು ಸಾಲ ನೀಡಿ ಭಾರೀ ಮೌಲ್ಯದ ಆಸ್ತಿ ಪಡೆದಿದ್ದಾರೆ. ಅಲ್ಲದೇ ಎಜೆಎಲ್ ಸಂಸ್ಥೆಯ ನ್ಯಾಷನಲ್ ಹೆರಾಲ್ಡ್‍ನ ಕಟ್ಟಡವನ್ನು ವಾಣಿಜ್ಯ ಬಳಕೆಗೆ ನೀಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.

sonia

ನಿಯಮ ಏನು ಹೇಳುತ್ತೆ: 1961 ರ ಆದಾಯ ತೆರಿಗೆ ಕಾನೂನಿನ ನಿಯಮಗಳ ಅನ್ವಯ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಅವಕಾಶ ನೀಡಲಾಗಿದೆ. ಆದರೆ ದೇಣಿಗೆ ಪಡೆದ ಹಣವನ್ನು ವಾಣಿಜ್ಯ ಕಾರಣಕ್ಕಾಗಿ 3ನೇ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ಸಾಲ ನೀಡಲು ಅನುಮತಿ ಇಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿಯಾಗಿದ್ದ ಸೋನಿಯಾ ಕಾನೂನು ಉಲ್ಲಂಘಿಸಿ ಸಾಲ ನೀಡಿದ್ದರು ಎನ್ನುವ ಆರೋಪವಿದೆ.

ಯಾರ ಪಾಲು ಎಷ್ಟು?
ಐಟಿ ಪ್ರಕಾರ, ಈ ಕಂಪನಿಯಲ್ಲಿ ಸೋನಿಯಾ ಗಾಂಧಿ ಶೇ.83.3ರಷ್ಟು, ರಾಹುಲ್ ಗಾಂಧಿ ಶೇ.15.5ರಷ್ಟು ಹಾಗೂ ಉಳಿಕೆ 1.2ರಷ್ಟು ಷೇರನ್ನು ಆಸ್ಕರ್ ಫರ್ನಾಂಡೀಸ್ ಹೊಂದಿದ್ದಾರೆ.. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಸುಮನ್ ದುಬೆ. ಮೋತಿ ಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸ್ಯಾಮ್ ಪಿತ್ರೋಡಾ ಮತ್ತು ಯಂಗ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಪ್ರಕರಣದ ಆರೋಪಿಗಳಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

RAHUL GANDHI

Share This Article
Leave a Comment

Leave a Reply

Your email address will not be published. Required fields are marked *