ನವದೆಹಲಿ: ಜಮರ್ನಿಯ ಪ್ರತಿಷ್ಠಿತ ಆಟೋಮೊಬೈಲ್ ವೋಕ್ಸ್ ವ್ಯಾಗನ್ ಕಂಪನಿಗೆ ರಾಷ್ಟ್ರಿಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ) 500 ಕೋಟಿ ರೂ. ದಂಡ ವಿಧಿಸಿದೆ.
ಭಾರತದಲ್ಲಿ ಡೀಸೆಲ್ ಕಾರುಗಳಲ್ಲಿ ‘ಕಳಪೆ ಉಪಕರಣ ಅಳವಡಿಸಿ ಮಾಲಿನ್ಯ ತಪಾಸಣೆ ವಂಚನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಎನ್‍ಜಿಟಿ ದಂಡ ವಿಧಿಸಿದೆ. ಆದೇಶ ಜಾರಿಯಾದ 2 ತಿಂಗಳಲ್ಲಿ ದಂಡವನ್ನು ಪಾವತಿ ಮಾಡಲು ಎನ್‍ಜಿಟಿ ಅಧ್ಯಕ್ಷ ನ್ಯಾ. ಆದರ್ಶ ಕುಮಾರ್ ಗೋಯಲ್ ಅವರು ಸೂಚನೆ ನೀಡಿದೆ.
ಇದಕ್ಕೂ ಮುನ್ನ ಎನ್‍ಜಿಟಿ ನೇಮಕ ಮಾಡಿದ್ದ ಸಮಿತಿ 171.34 ಕೋಟಿ ರೂ.ಗಳನ್ನು ದಂಡವಾಗಿ ಪಾವತಿ ಮಾಡಲು ಶಿಫಾರಸ್ಸು ಮಾಡಿತ್ತು. ವೋಕ್ಸ್ ವ್ಯಾಗನ್ ಕಂಪನಿಯ ವಾಹನಗಳು ಹಾನಿಕಾರಕ ಅನಿಲಗಳ (ನೈಟ್ರೋಜನ್ ಆಕ್ಸೈಡ್) ಹೊರ ಸೂಸಿದ್ದಕ್ಕೆ ಈ ದಂಡವನ್ನು ವಿಧಿಸಲು ಶಿಫಾರಸ್ಸು ಮಾಡಲಾಗಿತ್ತು. ಆದರೆ ಸದ್ಯ ಎನ್‍ಜಿಟಿ ದಂಡ ಮೊತ್ತವನ್ನು ಹೆಚ್ಚಳ ಮಾಡಿ ಆದೇಶ ನೀಡಿದೆ.
ಏನಿದು ಪ್ರಕರಣ?
2018 ನವೆಂಬರ್ ನಲ್ಲಿ ಎನ್‍ಜಿಟಿ ವೋಕ್ಸ್ ವ್ಯಾಗನ್ ಕಂಪೆನಿಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೂ ಮುನ್ನ ಜರ್ಮನಿಯಲ್ಲಿ ಸಂಸ್ಥೆಯ ವಿರುದ್ಧ ತನಿಖೆ ಆರಂಭವಾಗಿತ್ತು. ಸಂಸ್ಥೆ ಉತ್ಪಾದನೆ ಮಾಡುವ ವಾಹನದಲ್ಲಿ ಕಳಪೆ ಸಾಧನ ಅಳವಡಿಸಿ ಮಾಲಿನ್ಯ ತಪಾಸಣೆ ಪರೀಕ್ಷೆಯಲ್ಲಿ ಅನುಮತಿ ಪಡೆದು ವಂಚನೆ ಮಾಡಿತ್ತು. ಈ ಪ್ರಕರಣದ ಅಡಿ ದೂರು ದಾಖಲಾಗಿತ್ತು.
ಸಂಸ್ಥೆ ಇಂತಹ ಮೋಸ ಮಾಡುತ್ತಿರುವುದನ್ನು ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯದ ಐವರು ಎಂಜಿನಿಯರ್ ಗಳ ತಂಡ ಬಯಲು ಮಾಡಿತ್ತು. ಈ ತಂಡದಲ್ಲಿ ಭಾರತ ಮೂಲದ ಎಂಜಿನಿಯರ್ ಅರವಿಂದ ಕೂಡ ಇದ್ದರು. ವೋಕ್ಸ್ ವ್ಯಾಗನ್ ಒಂದೇ ಮಾದರಿಯ ಡೀಸೆಲ್ ಇಂಜಿನ್‍ವುಳ್ಳ ವಾಹನದಲ್ಲಿ ಹೊಸ ಸೂಸುವ ಹೊಗೆ ಭಾರೀ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮಾಲಿನ್ಯ ಪರೀಕ್ಷೆಯಲ್ಲಿ ಫೇಲ್ ಆಗಿತ್ತು.
ಕೇವಲ ಭಾರತ ಮಾತ್ರವಲ್ಲದೇ ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಸಂಸ್ಥೆ ಮೋಸದ ವಿರುದ್ಧ ತನಿಖೆ ನಡೆದಿದೆ. ಜಗತ್ತಿನ ದೇಶಗಳು ತನ್ನದೇ ಆದ ಮಾಲಿನ್ಯ ಪ್ರಮಾಣದ ನೀತಿಯನ್ನು ಹೊಂದಿರುತ್ತದೆ. ಈ ನಿಯಮಗಳನ್ನು ಕಾರು ಉತ್ಪಾದನ ಸಂಸ್ಥೆಗಳು ಪಾಲಿಸಬೇಕಾಗಿರುತ್ತದೆ. ಇಂತಹ ನಿಯಮಗಳಲ್ಲಿ ತಂತ್ರಾಂಶವನ್ನು ಬಳಸಿ ವೋಕ್ಸ್ ವ್ಯಾಗನ್ ಮೋಸ ಮಾಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv