– ಸೈನಿಕರ ಮೂರ್ತಿಗಳು, ಅಶೋಕ ಸ್ತಂಭ ನಿರ್ಮಾಣ
ಹಾವೇರಿ: ಗ್ರಾಮದಲ್ಲಿ ಸದ್ಯಕ್ಕೆ ಯಾರೂ ಸೈನ್ಯ ಸೇರಿ ದೇಶ ಸೇವೆ ಮಾಡುತ್ತಿಲ್ಲ. ಆದರೂ ಅಲ್ಲಿನ ಜನರಿಗೆ ದೇಶಪ್ರೇಮದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರು ಇದ್ದಾರೆ. ಇದೀಗ ತಾವು ದುಡಿದ ಹಣದಲ್ಲೇ ಕೂಲಿ ಕಾರ್ಮಿಕರು ಹಣ ಸೇರಿಸಿ ದೇಶಪ್ರೇಮ ಮೂಡಿಸುವ ಸೈನಿಕರ ಕಟ್ಟೆ ನಿರ್ಮಿಸಿದ್ದಾರೆ.
ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ಬಹುತೇಕ ಕೂಲಿ ಕಾರ್ಮಿಕರ ಕುಟುಂಬಗಳೇ ಇವೆ. ಹಲವು ವರ್ಷಗಳ ಹಿಂದೆ ಗ್ರಾಮದ ಮೂವರು ದೇಶ ಸೇವೆ ಮಾಡುತ್ತಿದ್ದರು. ಮೂವರು ನಿವೃತ್ತಿಯಾಗಿ ಹಲವು ವರ್ಷಗಳು ಕಳೆದಿವೆ. ಗ್ರಾಮದ ಬಹುತೇಕ ಯುವಕರು ಗಾರೆ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಈ ಕೂಲಿ ಕಾರ್ಮಿಕರಿಗೆ ಎಲ್ಲಿಲ್ಲದ ದೇಶಪ್ರೇಮ. ಹೀಗಾಗಿ ತಾವು ದುಡಿದ ಹಣದಲ್ಲೇ ಸ್ವಲ್ಪ ಸ್ವಲ್ಪ ಸೇರಿಸಿ ಸೈನಿಕರ ಕಟ್ಟೆ ನಿರ್ಮಿಸಿದ್ದಾರೆ.
Advertisement
Advertisement
ಸೈನಿಕರ ಕಟ್ಟೆಯಲ್ಲಿ ನಾಲ್ಕೂ ಮೂಲೆಯಲ್ಲಿ ರಾಷ್ಟ್ರಧ್ವಜ ಹಿಡ್ಕೊಂಡು ಸೈನಿಕರು ನಿಂತಿರುವ ಮೂರ್ತಿಗಳಿವೆ. ನಡುವೆ 18 ಅಡಿ ಎತ್ತರದ ಅಶೋಕ ಸ್ಥಂಭ ನಿರ್ಮಿಸಿದ್ದಾರೆ. ಅದರಲ್ಲಿ ರಾಷ್ಟ್ರಧ್ವಜ ಹಾರಿಸಲು 41 ಅಡಿ ಎತ್ತರದ ಧ್ವಜ ಕಂಬವಿದೆ. ಸೈನಿಕರ ಮೂರ್ತಿಗಳು, ಅಶೋಕ ಸ್ತಂಭ, ಸೈನಿಕರ ಕಟ್ಟೆಯನ್ನ ನೋಡಿದರೆ ಸಾಕು ಎಂಥವರಲ್ಲೂ ದೇಶಪ್ರೇಮ ಮೂಡುವಂತಿದೆ. ನೋಡಿದವರಲ್ಲಿ ದೇಶಪ್ರೇಮ ಮೂಡಲಿ ಅನ್ನೋ ಉದ್ದೇಶದಿಂದ ಗ್ರಾಮದ ಯುವಕರು ಇದನ್ನ ನಿರ್ಮಿಸಿದ್ದಾರೆ.
Advertisement
ಆರಂಭದಲ್ಲಿ ಗ್ರಾಮದ ಕೂಲಿ ಕಾರ್ಮಿಕರು ತಾವು ದುಡಿದ ಹಣದಲ್ಲಿ ಅಲ್ಪಸ್ವಲ್ಪ ಸೇರಿಸಿ ಸೈನಿಕರ ಕಟ್ಟೆ ನಿರ್ಮಾಣಕ್ಕೆ ಮುಂದಾದರು. ನಂತರ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಹ ಸಾಥ್ ನೀಡಿದ್ದಾರೆ. ಗ್ರಾಮದ ಬಹುತೇಕ ಯುವಕರು ಗಾರೆ ಕೆಲಸ ಮಾಡುವುದರಿಂದ ಅವರೆ ಕಟ್ಟೆ ನಿರ್ಮಿಸಿದ್ದಾರೆ. ಕಲಾವಿದರೊಬ್ಬರು ಸೈನಿಕರ ಮೂರ್ತಿಗಳು, ಅಶೋಕ ಸ್ತಂಭ ನಿರ್ಮಿಸಿ ಕೊಟ್ಟಿದ್ದಾರೆ. ನಂತರ ಗ್ರಾಮದವರೇ ಬಣ್ಣ ಬಳಿದು ಸೈನಿಕರ ಕಟ್ಟೆಗೆ ಸುಂದರ ರೂಪ ಕೊಟ್ಟಿದ್ದಾರೆ.
Advertisement
ಹಗಲು ಹೊತ್ತಿನಲ್ಲಿ ನೋಡುಗರನ್ನ ಸೈನಿಕರ ಕಟ್ಟೆ ತನ್ನತ್ತ ಕೈಬೀಸಿ ಕರೆಯುತ್ತದೆ. ರಾತ್ರಿಯಾದಂತೆ ಸೈನಿಕರ ಕಟ್ಟೆಯಲ್ಲಿ ಜಗಮಗಿಸುವ ವಿದ್ಯುತ್ ದೀಪಾಲಂಕಾರ ನೋಡಿಗರಿಗೆ ದೇಶಪ್ರೇಮ ಮೂಡಿಸೋದರ ಜೊತೆಗೆ ಸಖತ್ ಖುಷಿ ಕೊಡುತ್ತಿದೆ.
ಯುವಕರಲ್ಲಿ ದೇಶಪ್ರೇಮ ಮೂಡಿಸೋದು, ಗಡಿಯಲ್ಲಿರೋ ಸೈನಿಕರ ಸೇವೆ ಸ್ಮರಿಸೋದು ಸೇರಿದಂತೆ ಹತ್ತು ಹಲವು ದೇಶಪ್ರೇಮ ಕಾರಣಗಳಿಗಾಗಿ ಗ್ರಾಮದ ಯುವಕರು ಸೈನಿಕರ ಕಟ್ಟೆ ನಿರ್ಮಿಸಿದ್ದಾರೆ.