– ಸೂಕ್ತ ಶಿಕ್ಷಣ ನೀಡುವ ಅಧ್ಯಾಪಕರ ಕೊರತೆ ಬಗ್ಗೆ ಚಿಂತಿಸಿಲ್ಲ ಎಂದ ಸಚಿವ
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (National Education Policy) ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಹೇಳಿಮಾಡಿಸಿದಂತಿದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾದುದ್ದಲ್ಲ, ಶಿಕ್ಷಣಕ್ಕಿಂತ ಸಮಸ್ಯೆಗಳಿಗೆ ಹೆಚ್ಚು ದಾರಿ ಮಾಡಿಕೊಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr. M.C.Sudhakar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಬಹುಶಿಸ್ತೀಯ, ಬಹು ಆಯ್ಕೆಯ, ಮುಕ್ತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಈ ಶಿಕ್ಷಣ ನೀತಿ ಒಂದೇ ಸೂರಿನಡಿ ಎಲ್ಲಾ ವಿಭಾಗಗಳನ್ನು ಹೊಂದಿರುವ ಖಾಸಗಿ ವಿಶ್ವವಿದ್ಯಾಲಯ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿರಬಹುದು. ಆದರೆ ಕೃಷಿ, ಕಾನೂನು, ಇಂಜಿನಿಯರಿಂಗ್, ವೈದ್ಯಕೀಯ ಎಂದೂ ಹಂಚಿಹೋಗಿರುವ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಅಸಾಧ್ಯವಾಗಿದೆ ಎಂದರು.ಇದನ್ನೂ ಓದಿ: ಕೇಂದ್ರ ಗೃಹ ಸಚಿವನಾಗಿ ಜಮ್ಮು-ಕಾಶ್ಮೀರ ಭೇಟಿ ಸಮಯದಲ್ಲಿ ಭಯವಾಗುತ್ತಿತ್ತು: ಸುಶೀಲ್ ಕುಮಾರ್ ಶಿಂಧೆ
ಕಲಾ ವಿಭಾಗದಲ್ಲಿ ಓದುವ ವಿದ್ಯಾರ್ಥಿ ವಿಜ್ಞಾನ ಓದಲು ಬಯಸಿದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶ ನೀಡಲಾಗಿದೆ. ಆದರೆ ಸೂಕ್ತ ಶಿಕ್ಷಣ ನೀಡುವ ಅಧ್ಯಾಪಕರ ಕೊರತೆಯ ಬಗ್ಗೆ ಚಿಂತನೆ ನಡೆಸಿಲ್ಲ. ಕರ್ನಾಟಕದ ಅನೇಕ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆಯಿದೆ. 14 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದರೂ ಕೊರತೆ ಮಾತ್ರ ನೀಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿದ್ದು, ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಕ್ರೆಡಿಟ್ ಸ್ಕೋರ್ ಮತ್ತು ಮುಕ್ತ ಆಯ್ಕೆಗಳನ್ನು ಒಳಗೊಂಡಂತೆ ಸೂಕ್ತ ಮಾರ್ಪಾಡುಗಳನ್ನು ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ರಾಜ್ಯ ಶಿಕ್ಷಣ ನೀತಿಗಾಗಿ ಆಯೋಗ ರಚಿಸಿ ಮಧ್ಯಂತರ ವರದಿ ಆಧಾರ ರಾಜ್ಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗಿದೆ. ಅತಿಶೀಘ್ರದಲ್ಲಿ ಅಂತಿಮ ವರದಿಯನ್ನು ಕೂಡ ಸ್ವೀಕರಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಅನೇಕ ಸಮಸ್ಯೆ ಎದುರಿಸುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮತ್ತಷ್ಟು ಸಮಸ್ಯೆಗೆ ಒಳಗಾಗಿತ್ತು. ಆ ಆತಂಕವನ್ನು ರಾಜ್ಯ ಸರ್ಕಾರ ದೂರಗೊಳಿಸಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ, ಬೆಳಸಬೇಕಾಗಿದೆ. ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದ ದೃಷ್ಟಿಯಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಬೇಕು. ಶಿಕ್ಷಣ ಕ್ಷೇತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಕೂಡದು ಎಂದು ಎಚ್ಚರಿಕೆ ಗಂಟೆಯನ್ನು ಬಾರಿಸಿದ್ದಾರೆ.ಇದನ್ನೂಓದಿ: ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್
ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದರೂ ಅನೇಕ ಕೊರತೆಗಳನ್ನು ಎದುರಿಸುತ್ತಿದೆ. ಇನ್ನೂ ಹಿಂದುಳಿದ ರಾಜ್ಯಗಳ ಪರಿಸ್ಥಿತಿ ಏನಾಗಿರಬಹುದು? ಈ ವ್ಯವಸ್ಥೆಯಲ್ಲಿ ರಾಷ್ಟ್ರದೂದ್ದಕ್ಕೂ ಒಂದೇ ಶಿಕ್ಷಣ ವ್ಯವಸ್ಥೆ ಜಾರಿ ಹೇಗೆ ಸಾಧ್ಯ? ಪರ್ಯಾಯ ವ್ಯವಸ್ಥೆಗಳನ್ನು ರೂಪಿಸದೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕ್ರಮ ಸರಿಯಾದುದಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪುನರ್ ವಿಮರ್ಶಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.