-ಹಿಂದಿನ ಸರ್ಕಾರ ಶಾಲೆಗಳನ್ನು ಇಂಗ್ಲೀಷ್ ಮಾಧ್ಯಮ ಮಾಡಿತ್ತು
ಹುಬ್ಬಳ್ಳಿ: ಹಿಂದಿನ ಸರ್ಕಾರ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಮಾಡುವಂತೆ ನಿರ್ಣಯ ತಗೆದುಕೊಂಡಿತ್ತು, ಆದರೆ ನ್ಯಾಯಾಲಯ ಅದಕ್ಕೆ ತಡೆಹಿಡಿದಿತ್ತು. ಇದೀಗ ನೂತನವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಅದರಡಿ ಪ್ರತಿಯೊಂದು ರಾಜ್ಯದಲ್ಲಿ ಆಯಾ ಪ್ರಾಥಮಿಕ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ. ಅದರಂತೆ ನಮ್ಮ ರಾಜ್ಯದಲ್ಲಿ ಪ್ರಾಥಮಿಕ ಭಾಷೆಯಾಗಿ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
Advertisement
ನಗರದ ಶ್ರೀಸಿದ್ಧಾರೂಢ ಮಠದ ಆವರಣದಲ್ಲಿಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ಶ್ರೀಭುವನೇಶ್ವರಿ ಮಾತೆಗೆ ಪೂಜೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಾಥಮಿಕ ಶಿಕ್ಷಣ ಸಂಪೂರ್ಣವಾಗಿ ಕನ್ನಡದ ಭಾಷೆ ಹಾಗೂ ಆಯಾ ರಾಜ್ಯದ ಭಾಷೆಯಲ್ಲಿಯೇ ಆಗುವುದು. ಇದರಿಂದ ನಮ್ಮ ದೇಶದ ಸಂಸ್ಕೃತಿ ಗಟ್ಟಿಯಾಗುತ್ತದೆ. ಮೂಲ ಭಾಷೆಗೆ ಗೌರವ ನೀಡಿದಂತಾಗುತ್ತದೆ. ಕರ್ನಾಟಕ ಹಾಗೂ ಕನ್ನಡ ಭಾಷೆ ಉದಯವಾಗಲು ಹುಬ್ಬಳ್ಳಿ ಧಾರವಾಡದ ಪಾತ್ರ ದೊಡ್ಡದಿದೆ ಎಂದರು.
Advertisement
Advertisement
ಕನ್ನಡ ಏಕೀಕರಣಕ್ಕಾಗಿ ಕನ್ನಡ ಭಾಷೆಗಾಗಿ ಅದರಗುಂಚಿ ಶಂಕರರಾಯರು ಹೋರಾಟ ಮಾಡಿದ್ದರು. ಎಲ್ಲ ಹೋರಾಟಗಳಿಗೆ ಮುಂಚೂಣಿಯಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವಿತ್ತು. ಈ ಮೊದಲು ಕರ್ನಾಟಕವು ಹೈದರಾಬಾದ್ ಕರ್ನಾಟಕ, ಮಂಗಳೂರು, ಗೋವಾ ಬಾಂಬೆ ಕರ್ನಾಟಕ ಹೀಗೆ ಹರಿದು ಹಂಚಿಹೋಗಿತ್ತು. ಇವೆಲ್ಲವೂ ಅಖಂಡವಾಗಬೇಕು, ಕನ್ನಡ ಭಾಷೆ ಮಾತನಾಡುವವರು ಒಂದೇ ಕಡೆ ಇರಬೇಕು, ಕರ್ನಾಟಕ ನಿವಾಸಿಗಳಾಗಬೇಕು ಎಂದು ಹೋರಾಟ ಮಾಡಿದವರು ಅದರಗುಂಚಿ ಶಂಕರರಾಯರು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಹೋರಾಟಗಾರರು. ಮೈಸೂರು ಭಾಗದ ನಾಯಕರು ಅಖಂಡ ಕರ್ನಾಟಕ ಒಂದಾದರೇ ಪ್ರಾತಿನಿತ್ಯ ಹೆಚ್ಚಾಗುತ್ತದೆ ಎಂದು ಮೈಸೂರು ಕರ್ನಾಟಕ ಸೇರಿ ಒಂದಾಯಿತು. ಇದೆಲ್ಲವು ಕರ್ನಾಟಕ ಉದಯಕ್ಕೆ ಕಾರಣವಾಯಿತು. ಭಾಷೆ ಉಳಿದರೆ ಆ ಭಾಷೆಯ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ನುಡಿದರು. ಇದನ್ನೂ ಓದಿ: ಮರಣೋತ್ತರ ರಾಜ್ಯೋತ್ಸವ ನೀಡಲು ಅವಕಾಶವಿಲ್ಲ: ಸುನೀಲ್ ಕುಮಾರ್
Advertisement
ಮುಖ್ಯ ಅತಿಥಿಯಾಗಿ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ್ ಮಾತನಾಡಿ, ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಪಾತ್ರ ದೊಡ್ಡದು, ಅದರಲ್ಲೂ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಹಾಗೂ ಸಂಘಟಣೆಗಾರರ ಪಾತ್ರವು ಹೆಚ್ಚಿದೆ. ನಗರದಲ್ಲಿ ನಾಮಫಲಕ ಬದಲಿಸುವ ಕೆಲಸ ಕಾರ್ಯೋನ್ಮುಖವಾಗಿದ್ದು, ಈಗಾಗಲೇ 320 ನಾಮಫಲಕಗಳನ್ನು ಬದಲಾವಣೆ ಮಾಡಲಾಗಿದೆ. ಇನ್ನುಳಿದ ಫಲಕಗಳನ್ನು ಶೀಘ್ರದಲ್ಲಿ ಬದಲಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, ಇಂದು ರಾಜ್ಯಾದ್ಯಂತ ಎಲ್ಲ ಕಡೆ ಕನ್ನಡ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲರಿಗೂ ಕನ್ನಡದ ಬಗ್ಗೆ ಅಭಿಮಾನ ಇರಬೇಕು. ಏಕೆಂದರೆ ಕನ್ನಡ ಅಳಿವು ಉಳಿವಿಗಾಗಿ ಕನ್ನಡ ಪರ ಸಂಘಟನೆಯು ದಿನನಿತ್ಯ ಹೋರಾಟ ಮಾಡುತ್ತಿದೆ. ಕನ್ನಡಕ್ಕೆ ದಕ್ಕೆಯಾದಾಗ ಹೋರಾಟ ನಡೆಸಿ ತಪ್ಪನ್ನು ತಿದ್ದುವ ಮೂಲಕ ಕನ್ನಡಪರ ಸಂಘಟನಕಾರರು ಅಭಿಮಾನವನ್ನು ತೋರುತ್ತ ಬಂದಿದ್ದಾರೆ. ಎಲ್ಲಿಯೋ ಇರು ಹೇಗೆಯೇ ಎಂದೆಂದಿಗೂ ನೀ ಕನ್ನಡವಾಗಿರು ಎಂದು ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಹಾಗೂ ಇನ್ನಿತರ ಕನ್ನಡ ಚಲನಚಿತ್ರ ನಟರು ಹಾಡಿನ ಮೂಲಕ ಕನ್ನಡ ಅಭಿಮಾನ ವ್ಯಕ್ತಪಡಿಸಿ, ಜನರಿಗೆ ಅರಿವು ಮೂಡಿಸುವಂತೆ ಮಾಡಿದ್ದಾರೆ. ನಮ್ಮ ನಾಡು ನುಡಿ ಉಳಿವಿಗಾಗಿ ನಾವು ಶ್ರಮಿಸಬೇಕು ಹಾಗೂ ಕನ್ನಡಕ್ಕೆ ಮೊದಲ ಆಧ್ಯತೆಯನ್ನು ನೀಡಬೇಕು. ನಮ್ಮ ಕನ್ನಡ ನಾಡು ಸಂಸ್ಕೃತಿಯನ್ನು ವಿದೇಶದವರು ಸಹ ಬೆಳೆಸುತ್ತಿದ್ದಾರೆ. ಕನ್ನಡ ಹಾಡುಗಳನ್ನು ಹಾಡಿ ಕುಣಿದು ಕುಪ್ಪಳಿಸಿ ಅಭಿಮಾನ ತೋರಿಸುತ್ತಾರೆ. ಅದಕ್ಕಾಗಿ ನಾವು ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು
ಇದೆ ಸಂದರ್ಭದಲ್ಲಿ 2021 ನೇ ಸಾಲಿನ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕ ಪಡೆದ 36 ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಹಾಗೂ ಹುಬ್ಬಳ್ಳಿ ಮತ್ತು ಧಾರವಾಡ ವಿಭಾಗದಿಂದ ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ 6 ವಿಜೇತರಿಗೆ ಸನ್ಮಾನ ಮಾಡಲಾಯಿತು. ಇದನ್ನೂ ಓದಿ: ನಮ್ಮನ್ನ ಎಂದೂ ಅವ್ರು ಕೆಲ್ಸದವರಂತೆ ನೋಡಿಲ್ಲ: ಕೇಶ ವಿನ್ಯಾಸಕಾರ ಕಾರ್ತಿಕ್ ಭಾವುಕ
ಕಾರ್ಯಕ್ರಮದಲ್ಲಿ ಮೊಷ್ಲೋದೇವಿ ಮಂದಿರದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ದೇವಪ್ಪಜ್ಜನವರ, ಹೆಚ್ಚುವರಿ ಆಯುಕ್ತ ಎ.ಆರ್.ದೇಸಾಯಿ, ಪಾಲಿಕೆ ಪಿ.ಆರ್.ಒ ಎಸ್.ಸಿ ಬೇವೂರ ಸೇರಿದಂತೆ ಪಾಲಿಕೆ ನೂತನವಾಗಿ ಆಯ್ಕೆಯಾದ ಸರ್ವ ಸದಸ್ಯರು, ಪಾಲಿಕೆ ಅಧಿಕಾರಿಗಳು, ಕನ್ನಡಪರ ಸಂಘಟನೆಯವರು, ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.