ನವದೆಹಲಿ: ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಮೊದಲನೆಯದಾಗಿ ಇದು ಕುರಾನ್ ಪ್ರಕಾರ ಧಾರ್ಮಿಕ ಆಚರಣೆಯಲ್ಲ. ಎರಡನೆಯದಾಗಿ, ವಿದ್ಯಾರ್ಥಿಯು ಸಂಸ್ಥೆಯನ್ನು ಪ್ರವೇಶಿಸಿದಾಗ ಅಲ್ಲಿನ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು ಎಂದು ಶರ್ಮ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್ ಕುರಿತ ಹೈಕೋರ್ಟ್ ತೀರ್ಪನ್ನು ನಾನು ಒಪ್ಪಲ್ಲ: 15 ಟ್ವೀಟ್ ಮಾಡಿದ ಓವೈಸಿ
ನಾನು ಮಹಿಳಾ ಹಕ್ಕುಗಳ ಕಟ್ಟಾ ಬೆಂಬಲಿಗಳಾಗಿದ್ದೇನೆ. ಮಹಿಳೆಯರು ಎಲ್ಲಿ, ಏನು ಬೇಕಾದರೂ ಧರಿಸಬಹುದು. ಆದರೆ ಸಂಸ್ಥೆಯಲ್ಲಿ ಏಕರೂಪದ ಸಂಹಿತೆ ಇದ್ದರೆ, ಅದನ್ನು ಅನುಸರಿಸಬೇಕು ಎಂಬುದನ್ನು ನಾನು ಬಲವಾಗಿ ಪ್ರತಿಪಾದಿಸುತ್ತೇನೆ. ವಿದ್ಯಾರ್ಥಿಗಳನ್ನು ಧರ್ಮ, ಜಾತಿ, ಪಂಥ ಎಂದು ವಿಂಗಡಿಸಬಾರದು. ಪ್ರತಿಭಟನಾನಿರತ ವಿದ್ಯಾರ್ಥಿಗಳು ತರಗತಿಗಳಿಗೆ ಹಿಂತಿರುಗುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಹಿಜಬ್ ವಿವಾದ ಕುರಿತು ಹೈಕೋರ್ಟ್ ತೀರ್ಪಿನ ಬಗ್ಗೆ ಎಲ್ಲೆಡೆ ಪರ-ವಿರೋಧದ ಚರ್ಚೆ ಎದ್ದಿದೆ. ಅನೇಕರು ತೀರ್ಪನ್ನು ಬೆಂಬಲಿಸಿಯೂ ಇನ್ನೂ ಅನೇಕರು ತೀರ್ಪಿನ ವಿರುದ್ಧವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆಯೇ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ವಕ್ಫ್ ಬೋರ್ಡ್ ಹಾಗೂ ಇತರೆ ಸಂಘಟನೆಗಳು ಮುಂದಾಗಿವೆ. ಇದನ್ನೂ ಓದಿ: ಶಿಕ್ಷಣದಲ್ಲಿ ಮತ ರಾಜಕಾರಣ ಬೆರೆಸುವ ಹತಾಶಾ ಪ್ರಯತ್ನ ಇದಾಗಿತ್ತು: ಕೈ ವಿರುದ್ಧ ಬಿಜೆಪಿ ವಾಗ್ದಾಳಿ