ಕನ್ನಡ ಚಿತ್ರರಂಗದಲ್ಲಿ ಬ್ಯುಸಿಯಾಗಿರೋ ಹೀರೋ ಯಾರು ಅಂತೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಹುಡುಕಾಡಿದರೆ ಅದರಲ್ಲಿ ಖಂಡಿತಾ ಸಂಚಾರಿ ವಿಜಯ್ ಹೆಸರೂ ಉತ್ತರವಾಗಿ ನಿಲ್ಲುತ್ತದೆ. ನಾನು ಅವನಲ್ಲ ಅವಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದ್ದೇ ವಿಜಯ್ ಬಿಡುವಿಲ್ಲದಂತಾಗಿದ್ದಾರೆ. ಹೀಗೆ ಚೂರೂ ಬಿಡುವು ಸಿಗದಂತೆ ಬ್ಯುಸಿಯಾಗಿರೋ ಸಂಚಾರಿ ವಿಜಯ್ ಅವರ ಸದ್ಯದ ಬಹುನಿರೀಕ್ಷಿತ ಚಿತ್ರ ಪಾದರಸ!
ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ ಈ ಚಿತ್ರ ಸೃಷ್ಟಿಸಿರೋ ಹವಾ ಸಣ್ಣದೇನಲ್ಲ. ಬಹುಶಃ ಸಾಲು ಸಾಲಾಗಿ ಚಿತ್ರಗಳನ್ನು ಮಾಡುತ್ತಾ ಸಾಗಿ ಬಂದಿರೋ ಸಂಚಾರಿ ವಿಜಯ್ ವೃತ್ತಿ ಬದುಕಿನಲ್ಲಿ ಪಾದರಸವೊಂದು ರಸಪೂರ್ಣ ಚಿತ್ರ. ಸದ್ಯ ಹಬ್ಬಿಕೊಂಡಿರೋ ಕ್ರೇಜ್ ನೋಡಿದರೆ ಈ ಚಿತ್ರ ಖಂಡಿತವಾಗಿಯೂ ಸಂಚಾರಿಯ ಪಾಲಿಗೆ ಮೈಲಿಗಲ್ಲಾಗಿ ದಾಖಲಾಗೋದು ಗ್ಯಾರಂಟಿ ಎಂಬಂತಿದೆ.
ಯಾಕೆಂದರೆ, ರಾಷ್ಟ್ರ ಪ್ರಶಸ್ತಿ ವಿಜೇತರಾದ ಸಂಚಾರಿ ವಿಜಯ್ ನಟನೆಯ ವಿಚಾರದಲ್ಲಿ ಪಕ್ಕಾ ಪಾದರಸದಂತಿದ್ದರೂ ಕೂಡಾ ಅವರ ಸುತ್ತ ನಿಷ್ಕಾರಣವಾಗೊಂದು ಚೌಕಟ್ಟು ಸೃಷ್ಟಿಯಾಗಿತ್ತು. ಆದರೆ ಪಾದರಸದಲ್ಲಿ ಅವರ ಪ್ರತಿಭೆ ಮಗ್ಗುಲು ಬದಲಾಯಿಸಿ ಚೌಕಟ್ಟು ಮೀರಿ ಹರಿದಾಡಿದೆ. ಈ ಚಿತ್ರದ ಬಗ್ಗೆ ಈ ಪಾಟಿ ಕ್ರೇಜ್ ಹುಟ್ಟಿಕೊಳ್ಳಲು ಅದೂ ಕೂಡಾ ಒಂದು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಅಷ್ಟಕ್ಕೂ ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾತೃಗಳು ಸಂಚಾರಿ ವಿಜಯ್ ಅವರನ್ನು ಭಿನ್ನವಾದ ಗೆಟಪ್ಪಿನಲ್ಲಿ ಕಾಣಿಸಬೇಕೆಂಬ ಇರಾದೆಯಿಂದಲೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹೃಷಿಕೇಶ್ ಜಂಬಗಿ ಕೂಡಾ ಅದನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದ ಖುಷಿಯಲ್ಲಿದ್ದಾರೆ.