Connect with us

Bengaluru City

ವಿಕ್ರಮ್ ಸಂಪರ್ಕಕ್ಕೆ ಇಸ್ರೋ ಜೊತೆ ನಾಸಾ ಪ್ರಯತ್ನ- ನಾಸಾ ಯಾಕೆ ಇಷ್ಟೊಂದು ಪ್ರಯತ್ನಿಸುತ್ತಿರುವುದು?

Published

on

– 2.1 ಕಿ.ಮೀ ಅಲ್ಲ 400 ಮೀ. ಅಂತರದಲ್ಲಿ ಮಿಸ್ ಆದ ವಿಕ್ರಮ್

ಬೆಂಗಳೂರು: ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಪ್ರಯತ್ನಿಸುತ್ತಿದ್ದು, ಅಮೆರಿಕಾದ ನಾಸಾ ಸಹ ವಿಕ್ರಮ್ ಗೆ ಸಂದೇಶ ರವಾನಿಸಿದೆ. ಈ ಮೂಲಕ ವಿಕ್ರಮ್ ಸಂಪರ್ಕಕ್ಕೆ ನಾಸಾ ಸಹ ಮುಂದಾಗಿದೆ. ಈ ಮೊದಲು ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ 2.1 ಕಿ.ಮೀ. ಅಂತರದಲ್ಲಿ ಸಂಪರ್ಕ ಕಳೆದುಕೊಂಡಿತ್ತು ಎಂದು ಹೇಳಲಾಗಿತ್ತು. ಆದ್ರೆ ಕೇವಲ 400 ಮೀ. ಅಂತರದಲ್ಲಿ ವಿಕ್ರಮ್ ಸಂಪರ್ಕ ಕಳೆದುಕೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಮೈ ಸ್ಪರ್ಶಿಸಬೇಕಿದ್ದ ವಿಕ್ರಮ್ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಇಸ್ರೋ ವಿಜ್ಞಾನಿಗಳು ಆರ್ಬಿಟರ್ ಮೂಲಕ ವಿಕ್ರಮ್ ಸಂಪರ್ಕಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಇತ್ತ ನಾಸಾ ತನ್ನ ಡಿಪ್ ಸ್ಪೇಸ್ ನೆಟ್‍ವರ್ಕ್ (ಡಿಎಸ್‍ಎನ್)ನ ಜೆಟ್ ಪ್ರಪೊಲ್ಷನ್ ಲ್ಯಾಬ್ರೋಟರಿ (ಜೆಪಿಎಲ್) ಮೂಲಕ ವಿಕ್ರಮ್ ಲ್ಯಾಂಡರ್ ಗೆ ರೇಡಿಯೋ ಸಂದೇಶವನ್ನು ಕಳುಹಿಸಿದೆ. ಇಸ್ರೋ ಒಪ್ಪಿಗೆ ನೀಡಿದ ಬಳಿಕ ನಾಸಾ ವಿಕ್ರಮ್ ಗೆ ರೇಡಿಯೋ ಸಂದೇಶವನ್ನು ಕಳುಹಿಸುವ ಮೂಲಕ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯ: ಇಸ್ರೋ

14 ದಿನದಲ್ಲಿ ಸಿಗುತ್ತಾ ಸಂಪರ್ಕ?
ವಿಕ್ರಮ್ ಸಂಪರ್ಕ ಸಿಗುವ ನಿರೀಕ್ಷೆಗಳು ಕಡಿಮೆ ಆಗುತ್ತಿವೆ ಎನ್ನಲಾಗುತ್ತಿದೆ. ಚಂದ್ರನ ಮೇಲ್ಮೈನಲ್ಲಿದೆ ಎನ್ನಲಾಗಿರುವ ವಿಕ್ರಮ್ ನಿಗೆ ಕೇವಲ 14 ದಿನ ಮಾತ್ರ ಸೂರ್ಯ ಬೆಳಕು ಸಿಗಲಿದೆ. ಅಂದ್ರೆ 14 ದಿನಗಳವರೆಗೆ ಇಸ್ರೋ ಸಂಪರ್ಕ ಸಾಧಿಸಲು ಪ್ರಯತ್ನಿಸಬಹುದು. ಒಂದು ವೇಳೆ ವಿಕ್ರಮ್ ಲ್ಯಾಂಡರ್ ನಲ್ಲಿರುವ ಉಪಕರಣಗಳು ಹಾನಿಗೊಳಗಾದ್ರೆ ಸಂಪರ್ಕ ಸಾಧಿಸುವುದು ಕಷ್ಟವಾಗಲಿದೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು 6 ದಿನಗಳು ಕಳೆದಿವೆ. 14 ದಿನಗಳ ಬಳಿಕ ಅತಿ ದೊಡ್ಡ ರಾತ್ರಿಯ ದಿನ ಬರಲಿದೆ. ಒಂದು ವೇಳೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದರೂ ಈ ದಿನ ವಿಜ್ಞಾನಿಗಳು ಅತ್ಯಂತ ಕಷ್ಟವಾಗಿರುತಿತ್ತು. ಹಾಗಾಗಿ ಸೆಪ್ಟೆಂಬರ್ 21ರೊಳಗೆ ವಿಕ್ರಮ್ ಲ್ಯಾಂಡರ್ ಸಂಪರ್ಕಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನೂ ಓದಿ:   ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ

ನಾಸಾ ಕ್ಯಾಲಿಫೋರ್ನಿಯಾದ ಅಂತರೀಕ್ಷ ಕೇಂದ್ರದಿಂದ ತನ್ನ ಡಿಎಸ್‍ಎನ್ ಮೂಲಕ ವಿಕ್ರಮ್ ನಿಗೆ ರೇಡಿಯೋ ಸಂದೇಶ ಕಳುಹಿಸಿದೆ. 12 ಕಿಲೋವ್ಯಾಟ್ ರೇಡಿಯೋ ಫ್ರಿಕ್ವಿನ್ಸಿ ಮೂಲಕ ವಿಕ್ರಮ್ ನನ್ನ ಸಂಪರ್ಕಿಸಲು ಡಿಎಸ್‍ಎನ್ ಸತತವಾಗಿ ಪ್ರಯತ್ನಿಸುತ್ತಿದೆ. ಲ್ಯಾಂಡರ್ ಗೆ ಸಿಗ್ನಲ್ ಕಳುಹಿಸಿದಾಗ ಚಂದ್ರ ಒಂದು ರೇಡಿಯೋ ರಿಫ್ಲೆಕ್ಟರ್ ರೀತಿ ಕೆಲಸ ಮಾಡುತ್ತದೆ. ಕಳುಹಿಸಿದ ಸಿಗ್ನಲ್ ಮಾದರಿಯನ್ನು ಭೂಮಿಗೂ ಕಳುಹಿಸುತ್ತದೆ. ಇದನ್ನೂ ಓದಿ: ವಿಕ್ರಮ್ ಸಂಪರ್ಕ ಕಡಿತಕ್ಕೆ ಎಕ್ಸ್ಟ್ರಾ ಬ್ರೇಕ್ ಕಾರಣ ಶಂಕೆ- ಇತ್ತ ನಾಸಾ ಶ್ಲಾಘನೆ

ಚಂದ್ರಯಾನ-2 ಮೇಲ್ಯಾಕೆ ನಾಸಾಗೆ ಆಸಕ್ತಿ?
ಚಂದ್ರಯಾನ-2 ಯೋಜನೆ ಬಗ್ಗೆ ನಾಸಾ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಇಸ್ರೋದಿಂದ ಒಪ್ಪಿಗೆ ಪಡೆದ ಮರುಕ್ಷಣದಿಂದ ವಿಕ್ರಮ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದೆ. ವಿಕ್ರಮ್ ಮೇಲೆ ಪ್ಯಾಸಿವ್ ಪೆಲೋಡ್ ಲೇಸರ್ ರಿಫ್ಲೇಕ್ಟರ್ ಅಳವಡಿಸಲಾಗಿದೆ. ಇದರ ಮೂಲಕ ಲ್ಯಾಂಡರ್ ನಿಗದಿತ ಸ್ಥಳ ಮತ್ತು ಅಲ್ಲಿಯ ಮಾಹಿತಿ ಲಭ್ಯವಾಗಲಿದೆ. ಚಂದ್ರನ ದಕ್ಷಿಣ ಧ್ರುವ ಮತ್ತು ಭೂಮಿಯ ನಡುವಿನ ನಿಗದಿತ ಅಂತರ ತಿಳಿಯಲಿದೆ. ಇದರಿಂದ ನಾಸಾಗೆ ಭವಿಷ್ಯದ ಯೋಜನೆಗಳಿಗೆ ಹೆಚ್ಚು ಅನಕೂಲವಾಗಲಿದೆ.

ಚಂದ್ರಯಾನ-2ರ ಆರ್ಬಿಟರ್ 8 ಸುಧಾರಿತ ಪೇಲೋಡ್ ಒಳಗೊಂಡಿದ್ದರಿಂದ ಮಹತ್ವದ ಮಾಹಿತಿ ಮತ್ತು ಡೇಟಾ ಲಭ್ಯವಾಗಲಿದೆ. ಆರ್ಬಿಟರ್ ನಿಂದ ಸಿಕ್ಕಿರುವ ಚಂದ್ರನ 3ಡಿ ಮ್ಯಾಪಿಂಗ್ ಡೇಟಾಗಾಗಿ ನಾಸಾ ತುದಿಗಾಲಿನಲ್ಲಿ ನಿಂತಿದೆ. ಇದರ ಜೊತೆಗೆ ಈಗಾಗಲೇ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವದ ಹಲವು ಚಿತ್ರಗಳು, ವಾತಾವರಣದ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ. ಈ ಎಲ್ಲ ಮಾಹಿತಿಗಳು ನಾಸಾಗೆ ದೊರಕಿದ್ದಲ್ಲಿ, ಅದು ಕೈಗೊಂಡಿರುವ 2024ರ ಚಂದ್ರನ ದಕ್ಷಿಣ ಧ್ರುವ ತಲುಪುವ ಯೋಜನೆಯ ತಯಾರಿಗೆ ಸಹಾಯವಾಗಲಿದೆ. ದಕ್ಷಿಣ ಧ್ರುವದ ಫೋಟೋಗಳು ಲಭ್ಯವಾದ್ರೆ ನಾಸಾಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನೂ ಓದಿ:  ಭಾರತದ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಆಗುತ್ತಿದೆ: ಭೂತಾನ್ ಪ್ರಧಾನಿ

ಚೀನಾದಲ್ಲೂ ಅಧ್ಯಯನ:
ಭಾರತ ದಕ್ಷಿಣ ಧ್ರುವ ತಲುಪಲು ಪ್ರಯತ್ನ ನಡೆಸುತ್ತಿದೆ. ವಿಕ್ರಮ್ ಲ್ಯಾಂಡರ್ ಹಾರ್ಡ್ ಲ್ಯಾಂಡಿಂಗ್ ಪರಿಣಾಮ ಅಂತಿಮ ಕ್ಷಣದ ಕೆಲ ಮಾಹಿತಿ ಅಲಭ್ಯವಾಗಿದೆ. ಆದರೂ ಚಂದ್ರನಲ್ಲಿಯ ಅನೇಕ ಮಾಹಿತಿಗಳು ಇಸ್ರೋಗೆ ದೊರಕಿವೆ. ಇತ್ತ ನಾಸಾ ಸಹ ಚಂದ್ರಯಾನಕ್ಕೆ ಸಿದ್ಧಗೊಳ್ಳುತ್ತಿದೆ. ಭಾರತದ ನೆರೆಯ ರಾಷ್ಟ್ರ ಸಹ ಚಂದ್ರನ ಅಂಗಳ ತಲುಪಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚಂದ್ರಯಾನವನ್ನು ಟೀಕಿಸಿದ ಪಾಕ್ ಸಚಿವನ ಚಳಿ ಬಿಡಿಸಿದ ನೆಟ್ಟಿಗರು

Click to comment

Leave a Reply

Your email address will not be published. Required fields are marked *