ಭಾರತ (India) ಚಂದ್ರಯಾನ ಯಶಸ್ವಿಯಾದ ಮೇಲೆ ವಿಶ್ವದ ಅನೇಕ ದೇಶಗಳು ಚಂದ್ರನ (Moon) ಬಗ್ಗೆ ಸಂಶೋಧನೆಗೆ ಭಾರೀ ಆಸಕ್ತಿ ತೋರಿಸುತ್ತಿವೆ. ಅದರಂತೆ ಅಮೆರಿಕ (America) ಕೂಡ ಈ ಬಗ್ಗೆ ತೀವ್ರ ಕುತೂಹಲಕಾರಿ ವಿಚಾರ ಬಹಿರಂಗಪಡಿಸಿದ್ದು, ವಿಶ್ವದ ಉಳಿದೆಲ್ಲ ದೇಶಗಳಿಗಿಂತ ವಿಭಿನ್ನವಾದ ಹೆಜ್ಜೆ ಇಡಲು ಮುಂದಾಗಿದೆ. ಭೂಮಿಯ ಮೇಲೆ ನಿರ್ಮಾಣ ಮಾಡುವ ರೈಲ್ವೇ ಹಳಿಗಳ ರೀತಿ ಚಂದ್ರನ ಮೇಲೂ ರೈಲ್ವೇ ಹಳಿ ಮಾದರಿಯ ಹಳಿಗಳನ್ನು ನಿರ್ಮಿಸಿ ನಾಸಾ ಅಧ್ಯಯನ ನಡೆಸುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಚಂದ್ರನ ಮೇಲಿನ ಈ ಅಧ್ಯಯನದ ವಿಚಾರ ವಿಜ್ಞಾನ ಲೋಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂಶೋಧನೆಯ ಬಗ್ಗೆ ನಾಸಾ (NASA) ಪ್ರಕಟಿಸಿದೆ ಎನ್ನಲಾದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
2030ರ ವೇಳೆಗೆ ಚಂದ್ರನ ಮೇಲೆ ಮೊದಲ ರೈಲು ನಿಲ್ದಾಣವನ್ನು ನಿರ್ಮಿಸಲು ನಾಸಾ ಯೋಚಿಸಿದೆ. ಚಂದ್ರನ ಮೇಲ್ಮೈಯ ಸುತ್ತ ಪೆಲೋಡ್ ಸಾರಿಗೆಗಾಗಿ ರೈಲು ಹಳಿಗಳ ನಿಮಾಣಕ್ಕೆ ನಾಸಾ ಮುಂದಾಗಿದೆ. ಈ ರೈಲು ಹಾಗೂ ಹಳಿಗಳು ಭೂಮಿಯ ಮೇಲಿರುವುದಕ್ಕಿಂತ ಸ್ವಲ್ಪ ವಿಶೇಷವಾಗಿ ಹಾಗೂ ವಿಭಿನ್ನವಾಗಿ ಇರಲಿವೆ. ಅಂದರೆ ಈ ಹಳಿಗಳ ಮೇಲೆ ನೇರವಾಗಿ ರೈಲು ಸಂಚರಿಸದೆ ರೈಲ್ವೇ ಹಳಿಗಳ ಮೇಲೆ ತೇಲುವ ತಂತ್ರಜ್ಞಾನವನ್ನು ಇಲ್ಲಿ ಬಳಸಿಕೊಳ್ಳಲು ನಾಸಾ ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹಕ್ಕೆ ತನ್ನ ಗಗನಯಾತ್ರಿಗಳನ್ನು ನಾಸಾ ಕಳುಹಿಸಲಿದೆ.
ಇದು ನೇರವಾಗಿ ರೈಲ್ವೇ ಹಳಿಗಳ ರೀತಿ ಇದ್ದರೂ, ಇದು ಕಾರ್ಯನಿರ್ವಹಿಸುವುದು ಮ್ಯಾಗ್ನೆಟಿಕ್ ಶಕ್ತಿಯಿಂದ. ಇದರಿಂದ ನಾಸಾ ರೈಲು ನೇರವಾಗಿ ಹಳಿಗಳ ಮೇಲೆ ಸಂಚರಿಸದೆ, ಹಳಿಗಳ ಮೇಲೆ ತೇಲಲಿದೆ! ಗ್ರ್ಯಾಫೈಟ್, ಫಿಲ್ಮ್ ಟ್ರ್ಯಾಕ್ ಹಾಗೂ ಮ್ಯಾಗ್ನೆಟಿಕ್ ಲೆವಿಟೇಶನ್ (Flexible Levitation on a Track) ಎಂದು ಕರೆಯಲ್ಪಡುವ 3 ಪದರಗಳ ತಂತ್ರಜ್ಞಾನದ ಆಧಾರದ ಮೇಲೆ ಈ ರೈಲು ಸಂಚರಿಸಲಿದೆ. ಈ ಹಳಿಯನ್ನು ‘ಫ್ಲೆಕ್ಸಿಬಲ್ ಲೆವಿಟೇಶನ್ ಆನ್ ಎ ಟ್ರ್ಯಾಕ್’ (FLOAT) ಎಂದು ಕರೆಯಲಾಗಿದೆ.
FLOATನ ಪ್ರಮುಖ ಲಕ್ಷಣಗಳು
ಮ್ಯಾಗ್ನೆಟಿಕ್ ಲೆವಿಟೇಶನ್ ಟೆಕ್ನಾಲಜಿ : FLOAT ವಿಶೇಷವಾಗಿ ವಿನ್ಯಾಸಗೊಳಿಸಿದ ಮೂರು-ಪದರದ ಟ್ರ್ಯಾಕ್ ಆಗಿದೆ. ಈ ಟ್ರ್ಯಾಕ್ ಮೇಲೆ ಮ್ಯಾಗ್ನೆಟಿಕ್ ರೋಬೋಟ್‌ಗಳು ಸಂಚರಿಸಲಿದೆ. ಈ ಟ್ರ್ಯಾಕ್‌ನಿಂದ ಚಂದ್ರನ ಮೇಲೆ ಧೂಳಿನ ಸಮಸ್ಯೆಯನ್ನು ರೋಬೋಟ್ ರೈಲು ಎದುರಿಸಿವುದಿಲ್ಲ. ರೋಬೋಟ್‌ಗಳನ್ನು ಟ್ರ್ಯಾಕ್‌ಗಳ ಉದ್ದಕ್ಕೂ ನಿಯಂತ್ರಿಸಲು ಈ ಟ್ರ್ಯಾಕ್‌ನಲ್ಲಿರುವ ಸೌರಫಲಕಗಳು ವಿದ್ಯುತ್ಕಾಂತೀಯ ಶಕ್ತಿಯನ್ನು ಉತ್ಪಾದಿಸುತ್ತದೆ.
ಪೇಲೋಡ್ ಸಾಮರ್ಥ್ಯ: ರೋಬೋಟ್ ರೈಲು ಚಂದ್ರನ ಮೇಲೆ ಪ್ರತಿ ಗಂಟೆಗೆ ಸರಿಸುಮಾರು 1.61 ಕಿಲೋಮೀಟರ್‌ಗಳಷ್ಟು ಸಂಚರಿಸಲಿದೆ ಎಂದು ಅಂದಾಜಿಸಲಾಗಿದೆ. ಪ್ರತಿದಿನ 100 ಟನ್‌ಗಳಷ್ಟು ವಸ್ತುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಉದ್ದೇಶಿತ ಕಾರ್ಯಗಳು: FLOAT ಚಂದ್ರನ ಮಣ್ಣು ಮತ್ತು ಇತರ ವಸ್ತುಗಳನ್ನು ಚಂದ್ರನ ಮೇಲ್ಮೈಯಲ್ಲಿ ಸಂಗ್ರಹಿಸುತ್ತದೆ. ಇಷ್ಟೇ ಅಲ್ಲದೇ ಭವಿಷ್ಯದ ಉಪಗ್ರಹಗಳ ಲ್ಯಾಂಡಿಂಗ್ ಸೈಟ್‌ಗಳು ಮತ್ತು ಬೇಸ್ ಸ್ಥಳಗಳ ನಡುವೆ ದೊಡ್ಡ ಪ್ರಮಾಣದ ವಸ್ತುಗಳು ಮತ್ತು ಉಪಕರಣಗಳ ಸಾಗಣೆಯನ್ನು ಇದು ಸುಗಮಗೊಳಿಸುತ್ತದೆ.
ಈ ಸಂಶೋಧನೆಗಾಗಿ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ನ ಇಂಜಿನಿಯರ್‌ಗಳು FLOAT ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು ನಂತರ ಅದರ ವಿವಿಧ ಭಾಗಗಳನ್ನು ಪರೀಕ್ಷಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೋಬೋಟಿಕ್ ತಜ್ಞರಾದ ಎಥಾನ್ ಸ್ಕೇಲರ್ ಅವರು ಚಂದ್ರನ ಮೇಲೆ ದೀರ್ಘಾವಧಿಯ ರೋಬೋಟಿಕ್ ಸಾರಿಗೆ ವ್ಯವಸ್ಥೆ ಮಾಡುವುದು ನಿರ್ಣಾಯಕವಾಗಿರುತ್ತದೆ. ಇದು ಕಾರ್ಯರೂಪಕ್ಕೆ ಬರುವುದಕ್ಕೆ ಹಲವು ಸವಾಲುಗಳಿವೆ. 2030ರ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.
ಚಂದ್ರನ ಮೇಲೆ ಅಮೆರಿಕಕ್ಕೆ ಯಾಕಿಷ್ಟು ಆಸಕ್ತಿ?
ಬಾಹ್ಯಾಕಾಶ ಸಂಶೋಧನೆಯಲ್ಲಿ ಯಾವಾಗಲೂ ಮುಂದಿರುವ ಅಮೆರಿಕ, ಈ ಹಿಂದೆ ಚಂದ್ರನಲ್ಲಿಗೆ ಮನುಷ್ಯನನ್ನು ಕಳುಹಿಸಿ ಸೈ ಎನಿಸಿಕೊಂಡಿತ್ತು. ಇತ್ತೀಚೆಗೆ ಚೀನಾ ಚಂದ್ರನ ಮೇಲೆ ಚಾಂಗ್’ಇ 6 (Chang’e 6) ಎಂಬ ಉಪಗ್ರಹವನ್ನು ಕಳಿಸಿ ಚಂದ್ರನ ಭಾಗಗಳಿಂದ ಮಣ್ಣು ಮತ್ತು ಕಲ್ಲಿನ ಮಾದರಿಯನ್ನು ಪಡೆಯಲು ಪ್ರಯತ್ನಿಸುತ್ತಿದೆ. ಈ ಬಾಹ್ಯಾಕಾಶ ನೌಕೆಯು ಚಂದ್ರನನಿಂದ ಎರಡು ಕಿಲೋಗ್ರಾಂಗಳಷ್ಟು ಮಣ್ಣು, ಕಲ್ಲಿನ ಮಾದರಿಗಳನ್ನು ಮರಳಿ ತರುವ ನಿರೀಕ್ಷೆಯಿದೆ. ಇದು ಮನುಷ್ಯನ ಇತಿಹಾಸದಲ್ಲಿ ಈ ರೀತಿಯ ಮೊದಲ ಪ್ರಯತ್ನವಾಗಿದೆ. 2020 ರಲ್ಲಿ, ಚೀನಾ ತನ್ನ ಚಾಂಗ್’ಇ -5 ಮಿಷನ್ ಸಮಯದಲ್ಲಿ ಚಂದ್ರನ ಭಾಗದಿಂದ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತಂದಿತ್ತು. ಚಾಂಗ್’ಇ 6 ಬಗ್ಗೆ ಯಾವುದೇ ಮಾಹಿತಿಯನ್ನು ಚೀನಾ ಬಿಡುಗಡೆ ಮಾಡಿಲ್ಲ. ಆದರೆ ಚೀನಾ ಬಗ್ಗೆ ಅಮೆರಿಕ, ಚಂದ್ರನ ಮೇಲೆ ಸೇನಾ ನೆಲೆ ಸ್ಥಾಪಿಸಲು ಮುಂದಾಗಿದೆ ಎಂದು ಹೇಳಿದೆ. ಅಲ್ಲದೇ ಇದೊಂದು ಬೇಹುಗಾರಿಕೆ ಉಪಗ್ರಹ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಇದೇ ಕಾರಣಕ್ಕೆ ಅಮೆರಿಕ ಸಹ ತನ್ನ ಸಂಶೋಧನೆಯನ್ನು ಮುಂದುವರಿಸಿ ಚೀನಾದ ಮುಂದೆ ತನ್ನ ಸಾಮರ್ಥ್ಯ ಏನು ಕಮ್ಮಿ ಇಲ್ಲ ಎಂದು ತೋರಿಸಲು ಮಂದಾಗಿದೆ.
ಚಂದ್ರನ ಮೇಲಿನ ಅಧ್ಯನದಲ್ಲಿ ಚೀನಾ ಈಗ ಮೊದಲನೇ ಸ್ಥಾನದಲ್ಲಿದ್ದರೆ, ಅಮೆರಿಕ 2 ನೇ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಭಾರತ ಹೊಂದಿದೆ. ಈ ಮೂಲಕ ಚೀನಾ, ಅಮೆರಿಕ ಸೇರಿದಂತೆ ಬಹುತೇಕ ದೇಶಗಳು ಚಂದ್ರನಲ್ಲಿ ಸಿಗಬಹುದಾದ ಖನಿಜಗಳ ಮೇಲೆ ಕಣ್ಣಿಟ್ಟಿವೆ. ಇದೇ ಕಾರಣಕ್ಕೆ ಚಂದ್ರನ ಮೇಲಿನ ಅಧ್ಯಯನ ಮಹತ್ವ ಪಡೆದುಕೊಂಡಿದೆ.
ಭಾರತ ಸಹ ಚಂದ್ರನ ಅಧ್ಯಯನದಲ್ಲಿ ಮಹತ್ವದ ಹೆಜ್ಜೆ: ಕಳೆದ ವರ್ಷ ಭಾರತ ಚಂದ್ರನಲ್ಲಿಗೆ ಚಂದ್ರಯಾನ -3 ಉಪಗ್ರಹವನ್ನು ಯಶಸ್ವಿಯಾಗಿ ಕಳಿಸಿ ವಿಶ್ವವೇ ತಿರುಗಿ ನೋಡುವಂತೆ ಮಾಡಿತ್ತು. ಈ ಉಪಗ್ರಹ ಚಂದ್ರನಲ್ಲಿ ಇರುವ ಕಲ್ಲು ಮತ್ತು ಮಣ್ಣಿನಲ್ಲಿ ಇರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಕಬ್ಭಿಣ ಸೇರಿದಂತೆ ಹಲವು ಖನಿಜಗಳ ಕುರಿತಾಗಿ, ಲೋಹಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡಿತ್ತು. ಇದಕ್ಕೂ ಮುನ್ನ ಮಾಡಿದ್ದ ಚಂದ್ರಯಾನ -2 ಕೊನೆಯ ಘಳಿಗೆಯಲ್ಲಿ ವಿಫಲವಾಗಿತ್ತು.